ಬೇಕಾಬಿಟ್ಟಿ ಪಾರ್ಕಿಂಗ್'ಗೆ ಬೀಳಲಿದೆ ಬ್ರೇಕ್

By Suvarna Web DeskFirst Published Nov 8, 2017, 4:56 PM IST
Highlights

ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಇನ್ನು ಮುಂದೆ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿದರೆ ಹುಷಾರ್! ಒಂದು ವೇಳೆ ನಿಷೇಧಿತ ಪ್ರದೇಶದಲ್ಲಿ ಪಾರ್ಕಿಂಗ್ ಮಾಡಿ ಬಿಟ್ಟರೆ ನಿಮ್ಮ ಮನೆಗೆ ನೊಟಿಸ್ ಕೂಡಾ ಬರಲಿದೆ!

ತುಮಕೂರು (ನ.08): ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಇನ್ನು ಮುಂದೆ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿದರೆ ಹುಷಾರ್! ಒಂದು ವೇಳೆ ನಿಷೇಧಿತ ಪ್ರದೇಶದಲ್ಲಿ ಪಾರ್ಕಿಂಗ್ ಮಾಡಿ ಬಿಟ್ಟರೆ ನಿಮ್ಮ ಮನೆಗೆ ನೊಟಿಸ್ ಕೂಡಾ ಬರಲಿದೆ!

ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ತಗ್ಗಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ಅದರ ಭಾಗವಾಗಿ ಬೇಕಾಬಿಟ್ಟಿ ಪಾರ್ಕಿಂಗ್‌'ಗೆ ಮೊದಲು ಕಡಿವಾಣ ಬೀಳಲಿದೆ. ನಿಷೇಧಿತ ಸ್ಥಳಗಳಲ್ಲೂ ಸವಾರರು ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದರಿಂದ ಕೇವಲ ವಾಹನಕ್ಕಷ್ಟೆ ಅಲ್ಲ ಸಾರ್ವಜನಿಕರಿಗೂ ಸಹ ಓಡಾಡಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಯೋಜನೆಯೊಂದನ್ನು ತುಮಕೂರು ಪೊಲೀಸ್ ಇಲಾಖೆ ರೂಪಿಸಿದೆ. ಪ್ರಮುಖವಾಗಿ ತುಮಕೂರಿನ ಸೋಮೇಶ್ವರಪುರಂ, ಅಶೋಕ ರಸ್ತೆ, ಎಸ್‌ಐಟಿ, ಬಿ.ಎಚ್. ರಸ್ತೆ, ಮಹಾತ್ಮಗಾಂಧಿ ರಸ್ತೆ ಹೀಗೆ ಅತ್ಯಂತ ಜನನಿಬಿಡಿ ರಸ್ತೆ ಹಾಗೂ ಬಡಾವಣೆಯಲ್ಲಿ ರಸ್ತೆಯ ಎರಡೂ ಬದಿ ಪಾರ್ಕಿಂಗ್ ಮಾಡುತ್ತಿದ್ದಾರೆ. ಅಲ್ಲದೇ ಕಾರುಗಳನ್ನು ಸಹ ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಿದ್ದಾರೆ. ಇದರಿಂದಾಗಿ ನಗರ ಸಾರಿಗೆ ಬಸ್ ಹೋಗುವಾಗ ಟ್ರಾಫಿಕ್ ಜಾಮ್ ಆಗಿ ಸವಾರರು ಸಾಕಷ್ಟು ಹೈರಾಣಾಗಿದ್ದರು. ಈ ಬಗ್ಗೆ ನಿರಂತರವಾಗಿ ದೂರು ಪೊಲೀಸ್ ಇಲಾಖೆಗೆ ದಾಖಲಾಗುತ್ತಿತ್ತು. ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯಾ ಗೋಪಿನಾಥ್ ಅವರು ಪೊಲೀಸರ ಸಭೆ ಕರೆದು ಬೆಂಗಳೂರು ಮಾದರಿಯಲ್ಲಿ ತುಮಕೂರಿನಲ್ಲಿ ಯೋಜನೆಯೊಂದನ್ನು ಅನುಷ್ಠಾನಗೊಳಿಸುತ್ತಿದ್ದಾರೆ.

10 ಕ್ಯಾಮರಾ: ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ವತಿಯಿಂದ 10 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಇದು ಕೇವಲ ಪಾರ್ಕಿಂಗ್ ಅಷ್ಟೆ ಅಲ್ಲ, ಸಿಗ್ನಲ್ ಜಂಪ್, ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದವರಿಗೂ ಅನ್ವಯವಾಗುತ್ತದೆ. ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುತ್ತಿರುವುದರಿಂದ ಸಾಕಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಅಲ್ಲದೇ ಸಿಗ್ನಲ್‌ಗಳನ್ನು ಬೇಕಾಬಿಟ್ಟಿಯಾಗಿ ಜಂಪ್ ಮಾಡುತ್ತಿರುವ ಬಗ್ಗೆ ಇಲಾಖೆಗೆ ದೂರು ಬಂದಿತ್ತು. ಈಗ 10 ಸಿಸಿ ಕ್ಯಾಮರಾ ಅಳವಡಿಸಿರುವುದರಿಂದ ಎಲ್ಲಾ ಮಾಹಿತಿ ಸಿಗಲಿದೆ.

ಮನೆಗೆ ನೊಟೀಸ್: ಮುಖ್ಯವಾಗಿ ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡುವವರ ಬಗ್ಗೆ ಸಿಸಿ ಕ್ಯಾಮರಾ ದಾಖಲಿಸಲಿದ್ದು ಅದರ ಅನ್ವಯ ವಾಹನ ಸಂಖ್ಯೆ ಪರಿಶೀಲಿಸಿ ಅಲ್ಲಿ ಅವರ ವಿಳಾಸವನ್ನು ಪತ್ತೆ ಹಚ್ಚಿ ಮನೆಗೆ ನೊಟೀಸ್ ಕಳುಹಿಸಿ ಕೊಡಲಾಗುವುದು. ಈಗಾಗಲೇ ಟ್ರಾಫಿಕ್ ಪೊಲೀಸ ರಿಗೆ 10  ಸಿಸಿ ಕ್ಯಾಮರಾಗಳನ್ನು ಪೂರೈಸಲಾಗಿದೆ. ನಿಮ್ಮ ಮನೆಗೆ ನೊಟೀಸ್ ಬಂದ ವಾರದೊಳಗೆ ದಂಡ ಪಾವತಿಸಬೇಕು. ತಪ್ಪಿದ್ದಲ್ಲಿ ನಿಮ್ಮ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂಬ ಎಚ್ಚರಿಕೆಯನ್ನು ಪೊಲೀಸ್ ಇಲಾಖೆ ನೀಡಿದೆ. ತುಮಕೂರು ನಗರ ದಿನೇ ದಿನೇ ಬೆಳೆಯುತ್ತಿದ್ದು ಹತ್ತು ಹಲವಾರು ಯೋಜನೆಗಳು ನಗರಕ್ಕೆ ಬರುತ್ತಿದೆ. ಇದಲ್ಲದೆ ವಾಹನ ಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಅದರಲ್ಲೂ ನಾಲ್ಕು ಚಕ್ರ ವಾಹನಗಳ ಬಳಕೆ ಗಣನೀಯವಾಗಿ ಏರಿದೆ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣ ಮಿಸಿದೆ. ದಿನಕ್ಕೊಂದು ಅಪಘಾತ ತುಮಕೂರು ನಗರದಲ್ಲಿ ಆಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲೇ ಬೇಕಾದ ಒತ್ತಡ ಪೊಲೀಸ್ ಇಲಾಖೆಗೆ ಇತ್ತು. ಜನರಲ್ಲಿ ಜಾಗೃತಿ ಮೂಡಿಸಲು ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರಸ್ತೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ವಿಪರೀತ ಟ್ರಾಫಿಕ್‌ನಿಂದ ಹೈರಾಣಾಗಿರುವ ಜನರಿಗೆ ಪೊಲೀಸ್ ಇಲಾಖೆಯ ಈ ಯೋಜನೆಯಿಂದ ಸ್ವಲ್ಪವಾದರೂ ಅನುಕೂಲವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

click me!