ಭಾರತೀಯ ಯೋಧನ ಶಿರಚ್ಛೇದ ಮಾಡಿದ ಪಾಕ್ ಉಗ್ರರು

By Suvarna Web DeskFirst Published Oct 29, 2016, 2:08 AM IST
Highlights

ಪಾಕ್ ಪದೇ ಪದೇ ಅಪ್ರಚೋದಿತ ದಾಳಿ ನಡೆಸ್ತಿರೋದು ಭಾರತೀಯ ಸೇನೆಯನ್ನ ಯುದ್ಧಕ್ಕೆ ಆಹ್ವಾನಿಸುವಂತೆ ಕಾಣ್ತಿದೆ. ಉಗ್ರರನ್ನು ಮುಂದಿಟ್ಟುಕೊಂಡು ಪಾಕ್ ಸೇನೆ ಪರೋಕ್ಷ ದಾಳಿ ನಡೆಸುತ್ತಿರುವುದು ವೇದ್ಯವಾಗುತ್ತಿದೆ.

ಶ್ರೀನಗರ(ಅ. 29): ಗಡಿ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪ್ರತಿದಾಳಿ ನಡೆಸಿ ಕಳೆದ ಒಂದು ವಾರದಲ್ಲಿ 15ಕ್ಕೂ ಹೆಚ್ಚು ಪಾಕಿಸ್ತಾನೀ ಸೈನಿಕರನ್ನು ಸಂಹರಿಸಿದ್ದೇವೆಂದು ಭಾರತೀಯ ಸೇನೆ ಹೇಳಿಕೊಂಡ ಬೆನ್ನಲ್ಲೇ ಉಗ್ರರ ಮುಂದಿಟ್ಟುಕೊಂಡು ಪಾಕ್ ಸೇನೆ ಅಟ್ಟಹಾಸ ಮಾಡಿದೆ. ನಿನ್ನೆ ರಾತ್ರಿ ಕಾಶ್ಮೀರ ಕಣಿವೆಯ ಮಚಲ್ ಸೆಕ್ಟರ್'ನಲ್ಲಿ ಪಾಕಿಸ್ತಾನದ ಗಡಿಯಿಂದ ಒಳನುಸುಳಿ ಬಂದ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ ಉಗ್ರರು ಓರ್ವ ಭಾರತೀಯ ಯೋಧನ ಶಿರಚ್ಛೇದ ಮಾಡಿದ್ದಾರೆ. ಪಾಕ್ ಸೈನಿಕರು ಈ ಉಗ್ರರಿಗೆ ಬೆಂಗಾವಲಿಗೆ ನಿಂತಿದ್ದರೆನ್ನಲಾಗಿದೆ. ಭಾರತೀಯ ಸೈನಿಕರು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರನನ್ನು ಹತ್ಯೆಗೈಯಲಾಗಿದೆ.

ಗಡಿಭಾಗದಲ್ಲಿ ಯುದ್ಧದ ವಾತಾವರಣ:
ಕಳೆದ ಮೂರು ದಿನಗಳಲ್ಲಿ ಗಡಿಭಾಗಗಳನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ, ರೈಫಲ್ ಗಳಿಂದ ಗುಂಡಿ ದಾಳಿ ನಡೆಸುತ್ತಿರುವುದರಿಂದ ಗಡಿಭಾಗದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ನಿನ್ನೆ ಬೆಳಗ್ಗೆ ದಕ್ಷಿಣ ಕಾಶ್ಮೀರದ ಪುಲವಾಮಾ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಒಬ್ಬ ಮಹಿಳೆ ಬಲಿಯಾಗಿದ್ದಾರೆ. ಗಡಿಭಾಗದಲ್ಲಿರೋ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು, ಮನೆ ಖಾಲಿ ಮಾಡಿ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. 

ಪಾಕ್ ಪದೇ ಪದೇ ಅಪ್ರಚೋದಿತ ದಾಳಿ ನಡೆಸ್ತಿರೋದು ಭಾರತೀಯ ಸೇನೆಯನ್ನ ಯುದ್ಧಕ್ಕೆ ಆಹ್ವಾನಿಸುವಂತೆ ಕಾಣ್ತಿದೆ. ಉಗ್ರರನ್ನು ಮುಂದಿಟ್ಟುಕೊಂಡು ಪಾಕ್ ಸೇನೆ ಪರೋಕ್ಷ ದಾಳಿ ನಡೆಸುತ್ತಿರುವುದು ವೇದ್ಯವಾಗುತ್ತಿದೆ. ನಿನ್ನೆ ರಾತ್ರಿ ನಡೆದ ಉಗ್ರರ ದಾಳಿಗೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಭಾರತೀಯ ಸೇನೆ ಹೇಳಿಕೊಂಡಿದೆ. ಒಟ್ಟಿನಲ್ಲಿ ಪಾಕ್​ ಪುಂಡಾಟಿಕೆ ಹೀಗೆ ಮುಂದುವರಿದ್ರೆ ಮತ್ತೊಂದು ಸರ್ಜಿಕಲ್​ ದಾಳಿ ನಡೆದ್ರೂ ಅಚ್ಚರಿಪಡಬೇಕಿಲ್ಲ.​

ಸರ್ಜಿ​ಕಲ್‌ ದಾಳಿ ಕುರಿತ ಅರ್ಜಿ ವಜಾ: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸೇನೆಯ ಸರ್ಜಿ​ಕಲ್‌ ದಾಳಿ ಮತ್ತು ಇತರ ಕಾರ್ಯಾ​ಚರಣೆಗಳನ್ನು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳಬಾರದೆಂದು ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ ಸಲ್ಲಿ​ಸ​ಲಾದ ಸಾರ್ವ​ಜ​ನಿಕ ಹಿತಾ​ಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರ​ವಾ​ರ ವಜಾ ಮಾಡಿದೆ. ಈ ಕುರಿತು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ದೆಹಲಿ ಮೂಲದ ವಕೀಲ ಮನೋಹರ್‌ ಲಾಲ್‌ ಶರ್ಮಾ ಸುಪ್ರೀಂಗೆ ಅರ್ಜಿ ಸಲ್ಲಿ​ಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯ​ಮೂರ್ತಿ ಟಿ.ಎಸ್‌.ಠಾಕೂರ್‌, ನ್ಯಾಯಮೂ​ರ್ತಿ​ಗ​ಳಾದ ಚಂದ್ರಚೂಡ್‌ ಮತ್ತು ಎಲ್‌.ನಾಗೇಶ್ವರ್‌ರಾವ್‌ ಅವ​ರ​ನ್ನೊ​ಳ​ಗೊಂಡ ಪೀಠ, ಅರ್ಜಿಯು ಅರ್ಹತೆಯ ಕೊರತೆ ಹೊಂದಿದೆ ಎಂದು ಅಭಿಪ್ರಾಯಪಟ್ಟಿದೆ. ಇದೇ ಕಾರಣಕ್ಕಾಗಿ, ಅರ್ಜಿಯನ್ನು ವಜಾ ಮಾಡಿದೆ. ‘‘ಸೆ.29​ರಂದು ನಡೆ​ದ ಸರ್ಜಿಕಲ್‌ ದಾಳಿಯನ್ನು ಆಡಳಿತ ಪಕ್ಷ ರಾಜಕೀಯ ಕಾರಣಕ್ಕೆ ಬಳಸಿ​ಕೊಳ್ಳುತ್ತಿದ್ದು, ಉತ್ತರಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾ​ವಣೆಯ ಲಾಭ ಪಡೆಯಲು ಯತ್ನಿಸುತ್ತಿದೆ,'' ಎಂದು ಪ್ರತಿ​ಪಕ್ಷಗಳು ಆರೋಪಿಸಿದ್ದವು.

ಸೇನಾ ಹೊಣೆ​ಗಾ​ರಿ​ಕೆ: ‘‘ಸೇನೆಯು ಸಂಪುಟ ಮತ್ತು ಸರ್ಕಾರಕ್ಕೆ ವಿಧೇಯವಾಗಿ​ರಬೇಕು. ಇಲ್ಲದಿದ್ದರೆ, ಸೇನಾಡಳಿತ ಸ್ಥಾಪನೆಯಾಗುವ ಸಾಧ್ಯತೆ​ಯಿದೆ'' ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ. ಸೈನ್ಯವು ರಾಷ್ಟ್ರಪತಿ ಅವರ ವ್ಯಾಪ್ತಿಗೆ ಒಳಪಡಲಿದ್ದು, ಸೈನ್ಯದ ನಿರ್ಧಾರಗಳಲ್ಲಿ ಸರ್ಕಾರ ಮೂಗು ತೂರಿಸ​ಬಾರದು ಎಂದು ಅರ್ಜಿದಾರರು ಉಲ್ಲೇಖಿ​ಸಿ​ದ್ದ​ರು. ಆದರೆ, ಅರ್ಜಿದಾರನ ವಾದವನ್ನು ತಳ್ಳಿಹಾಕಿದ ಕೋರ್ಟ್‌, ಈ ಅಭಿ​ಪ್ರಾಯ ವ್ಯಕ್ತ​ಪ​ಡಿ​ಸಿ​ದೆ.

ದಾಳಿಗೆ ಸೂಚಿಸಿದ್ದೆ: ಈ ನಡುವೆ, ‘‘2008ರ ಮುಂಬೈ ದಾಳಿ ಬಳಿಕ ಪಾಕ್‌ಗೆ ಪಾಠ ಕಲಿ ಸಲು ಅಲ್ಲಿನ ಪಂಜಾಬ್‌ ಪ್ರಾಂತ್ಯದ ಮುರಿ ದ್ಕೆ ಬಳಿಯಿರುವ ಲಷ್ಕರ್‌ ಶಿಬಿರ ಅಥವಾ ಪಾಕ್‌ ಐಎಸ್‌ಐ ಮೇಲೆ ಸೇನೆಯ ಮೂಲಕ ದಾಳಿ ನಡೆಸ​ಬೇಕು ಎಂದು ಅಂದಿನ ಮನ ಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರವನ್ನು ಒತ್ತಾಯಿ​ಸಿದ್ದೆ,'' ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಶಿವಶಂಕರ್‌ ಮೆನನ್‌ ಹೇಳಿರುವು​ದಾ​ಗಿ ‘ದಿ ಇಂಡಿ​ಯನ್‌ ಎಕ್ಸ್‌​ಪ್ರೆಸ್‌' ವರದಿ ಮಾಡಿ​ದೆ.

- ಭೂವನಹಳ್ಳಿ ಸುರೇಶ್​, ​ಸುವರ್ಣನ್ಯೂಸ್​
ಮಾಹಿತಿ ನೆರವು: ಕನ್ನಡಪ್ರಭ

click me!