
ಶ್ರೀನಗರ [ಜೂ.17] : ಜಮ್ಮು-ಕಾಶ್ಮೀರ ಹಾಗೂ ಭಾರತದ ವಿವಿಧೆಡೆ ದಾಳಿ ನಡೆಸುವ ಭಯೋತ್ಪಾದಕರಿಗೆ ಆಶ್ರಯ ನೀಡುವ ಮೂಲಕ ಕುಖ್ಯಾತಿಗೀಡಾಗಿರುವ ಪಾಕಿಸ್ತಾನ ಇದೀಗ ಭಾರತೀಯ ಅಧಿಕಾರಿಗಳನ್ನು ಚಕಿತಗೊಳಿಸಿದೆ. ಜಮ್ಮು- ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಪ್ರಾಯಶಃ ಆವಂತಿಪೊರಾದಲ್ಲಿ ಭಯೋತ್ಪಾದಕರು ದಾಳಿ ನಡೆಸಬಹುದು ಎಂಬ ಗುಪ್ತಚರ ಮಾಹಿತಿಯನ್ನು ಭಾರತಕ್ಕೆ ಹಸ್ತಾಂತರಿಸಿದೆ. ಇದು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ.
ಅಲ್‌ಖೈದಾ ಉಗ್ರ ಸಂಘಟನೆಗೆ ತನ್ನ ನಿಷ್ಠೆ ಘೋಷಿಸಿಕೊಂಡಿದ್ದ, ಉಗ್ರ ಬುರ್ಹಾನ್ ವಾನಿ ತಂಡದಲ್ಲಿ ಗುರುತಿಸಿಕೊಂಡಿದ್ದ ಭಯೋತ್ಪಾದಕ ಝಾಕಿರ್ ಮೂಸಾ ಹತ್ಯೆಗೆ ಪ್ರತೀಕಾರವಾಗಿ ಆತಂಕವಾದಿಗಳು ದಾಳಿಗೆ ಸಜ್ಜಾಗಿದ್ದಾರೆ.
ವಾಹನದ ಮೇಲೆ ಸುಧಾರಿತ ಸ್ಫೋಟಕ (ಐಇಡಿ) ಇಟ್ಟು ಈ ದಾಳಿ ನಡೆಸುವ ಸಂಭವವಿದೆ ಎಂಬ ಮಾಹಿತಿಯನ್ನು ಕೆಲ ದಿನಗಳ ಹಿಂದಷ್ಟೇ ಇಸ್ಲಾಮಾಬಾದ್‌ನಲ್ಲಿನ ಭಾರತೀಯ ಹೈಕಮಿಷನ್ ಅಧಿಕಾರಿಗಳಿಗೆ ಪಾಕಿಸ್ತಾನ ನೀಡಿದೆ. ಇದೇ ಮಾಹಿತಿಯನ್ನೂ ಅಮೆರಿಕಕ್ಕೂ ತಿಳಿಸಿದೆ. ಅಮೆರಿಕದ ಅಧಿಕಾರಿಗಳು ಕೂಡ ಅದನ್ನು ಭಾರತಕ್ಕೆ ವರ್ಗಾಯಿಸಿದ್ದಾರೆ. ಈ ಮಾಹಿತಿ ಬರುತ್ತಿದ್ದಂತೆ ಕಾಶ್ಮೀರದಲ್ಲಿ ಅಲರ್ಟ್ ಘೋಷಿಸಲಾಗಿದೆ.
ಪಾಕಿಸ್ತಾನದ ಈ ನಡೆ ಅಧಿಕಾರಿಗಳಲ್ಲಿ ಅಚ್ಚರಿ ಹಾಗೂ ಗೊಂದಲಕ್ಕೆ ಕಾರಣವಾಗಿದೆ. ಒಂದು ವೇಳೆ ಘೋರ ಭಯೋತ್ಪಾದಕ ದಾಳಿ ನಡೆದರೆ ಅದಕ್ಕೆ ಭಾರತ ತನ್ನನ್ನು ಹೊಣೆ ಮಾಡದಿ ರಲಿ ಎಂಬ ಕಾರಣಕ್ಕೆ ಆ ದೇಶ ಮೊದಲೇ ಮಾಹಿತಿ ನೀಡಿರಬಹುದು ಅಥವಾ ಅಲ್‌ಖೈದಾ ಗುಂಪಿನ ಸದಸ್ಯರು ನಡೆಸುತ್ತಿರುವ ದಾಳಿ ಇದಾದ ಕಾರಣ ಮಾಹಿತಿ ಹಂಚಿ ಕೊಂಡಿರಬಹುದು ಎಂದು ಅಧಿಕಾರಿಗಳು ವಿಶ್ಲೇಷಿಸುತ್ತಿದ್ದಾರೆ.
ಫೆ. 14 ರಂದು ಜೈಷ್ ಉಗ್ರ ಸಂಘಟನೆ ಪುಲ್ವಾಮಾದಲ್ಲಿ ಸ್ಫೋಟ ನಡೆಸಿ 40 ಸಿಆರ್‌ಪಿಎಫ್ ಯೋಧರನ್ನು ಹತ್ಯೆ ಮಾಡಿತ್ತು. ಅದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಫೆ. 26 ರಂದು ಪಾಕಿಸ್ತಾನದ ಬಾಲಾಕೋಟ್ ಮೇಲೆ ದಾಳಿ ನಡೆಸಿತ್ತು. ಆನಂತರ ಮೆತ್ತಗಾಗಿದ್ದ ಪಾಕಿಸ್ತಾನ, ಭಾರತದ ಜತೆಗೆ ಮಾತುಕತೆಗೆ ಹಾತೊರೆಯುತ್ತಿದೆ. ಆದರೆ ಭಾರತ ಅದನ್ನು ಉಪೇಕ್ಷಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.