ಅಭಿನಂದನ್ ಬಿಡುಗಡೆಗೆ ಥ್ಯಾಂಕ್ಸ್ ಎಂದ ಪಾಕ್ ಮಿಡಿಯಾ| ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಾಡಿ ಹೊಗಳುತ್ತಿರುವ ಪಾಕ್ ಮಾಧ್ಯಮಗಳು| ಶಾಂತಿಗಾಗಿ ಪಾಕಿಸ್ತಾನದ ಬದ್ಧತೆಯನ್ನು ವಿಶ್ವ ನೋಡಿದೆ ಎಂದ ಪಾಕ್ ಮಾಧ್ಯಮ| ನಮ್ಮ ರಾಜತಾಂತ್ರಿಕ ಗೆಲುವು ಎಂದ ಭಾರತ ಮಾಧ್ಯಮಗಳಿಗೆ ತರಾಟೆ|
ಇಸ್ಲಾಮಾಬಾದ್(ಫೆ.28): ಪಾಕ್ ವಶದಲ್ಲಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವ ಪಾಕಿಸ್ತಾನ ಸರ್ಕಾರದ ನಿರ್ಧಾರವನ್ನು ಅಲ್ಲಿನ ಮಾಧ್ಯಮಗಳು ಸ್ವಾಗತಿಸಿವೆ.
ಈ ಕುರಿತು ಲೇಖನ ಬರೆದಿರುವ ಟೈಮ್ಸ್ ಆಫ್ ಕರಾಚಿ, ಅತ್ಯಂತ ಬಿಗುವಿನ ವಾತಾವರಣದಲ್ಲೂ ಭಾರತೀಯ ಪೈಲೆಟ್ ನನ್ನು ಬಿಡುವ ನಿರ್ಧಾರ ಕೈಗೊಂಡ ಇಮ್ರಾನ್ ಖಾನ್ ನಡೆ ಪ್ರಶಂಸನೀಯ ಎಂದು ಅಭಿಪ್ರಾಯಪಟ್ಟಿದೆ.
ಪಾಕಿಸ್ತಾನ ಶಾಂತಿ ಬಯಸುತ್ತಿದ್ದು, ಇದೇ ಹಿನ್ನೆಲೆಯಲ್ಲಿ ಸೆರೆಸಿಕ್ಕ ಶತ್ರು ರಾಷ್ಟ್ರದ ಪೈಲೆಟ್ ನನ್ನು ಬಿಡುಗಡೆಗೊಳಿಸಲಾಗಿದೆ. ಇದನ್ನು ಭಾರತ ಅರ್ಥ ಮಾಡಿಕೊಳ್ಳಬೇಕಿದ್ದು, ಈಗಲಾದರೂ ಶಾಂತಿ ಮಾತುಕತೆಗೆ ಮುಂದಾಗಬೇಕು ಎಂದು ಅಲ್ಲಿನ ಮಾಧ್ಯಮಗಳು ಆಗ್ರಹಿಸಿವೆ.
ಇದೇ ವೇಳೆ ಅಭಿನಂದನ್ ಬಿಡುಗಡೆಯನ್ನು ಭಾರತದ ರಾಜತಾಂತ್ರಿಕ ಗೆಲುವು ಎಂದು ಬಿಂಬಿಸುತ್ತಿರುವ ಭಾರತದ ಮಾಧ್ಯಮಗಳನ್ನು ಟೈಮ್ಸ್ ಆಫ್ ಕರಾಚಿ ತರಾಟೆಗೆ ತೆಗೆದುಕೊಂಡಿದೆ.
ಇದೇ ವೇಳೆ ಪಾಕ್‌ನ ಮತ್ತೊಂದು ಪ್ರಮುಖ ಪತ್ರಿಕೆಯಾದ ಡಾನ್ ಕೂಡ ಇಂತದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಶಾಂತಿಗಾಗಿ ಪಾಕಿಸ್ತಾನದ ಬದ್ಧತೆಯನ್ನು ಇಂದು ವಿಶ್ವ ನೋಡಿದೆ ಎಂದು ಸಂತಸ ವ್ಯಕ್ತಪಡಿಸಿದೆ. ಅಲ್ಲದೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಡೆಗೆ ಡಾನ್ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದೆ.