ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಮತ್ತೆ ಭಾರತ ತಪರಾಕಿ| ಭಯೋತ್ಪಾದನೆ ಜಾಲದ ಕೇಂದ್ರವೇ ಪಾಕಿಸ್ತಾನ| ಕಾಶ್ಮೀರ ಪ್ರಸ್ತಾಪಿಸಿದ ಪಾಕ್‌ಗೆ ಭಾರತ ತಿರುಗೇಟು
ವಿಶ್ವಸಂಸ್ಥೆ[ಸೆ.14]: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದು ಬಳಿಕ ಭಾರತದ ವಿರುದ್ಧ ಯುದ್ಧೋನ್ಮಾದದ ಮಾತುಗಳನ್ನಾಡುತ್ತಾ, ಸಿಕ್ಕಸಿಕ್ಕಲ್ಲೆಲ್ಲಾ ಕಾಶ್ಮೀರ ವಿಷಯ ಪ್ರಸ್ತಾಪಿಸುತ್ತಿರುವ ಪಾಕಿಸ್ತಾನದ ಮಹಾಪಿತೂರಿಯನ್ನು ಭಾರತ ವಿಶ್ವಸಂಸ್ಥೆಯಲ್ಲಿ ಬಟಾ ಬಯಲು ಮಾಡಿದೆ.
ಅಲ್ಲದೆ, ಪಾಕಿಸ್ತಾನವನ್ನು ಭಯೋತ್ಪಾದನೆಯ ಜಾಲಕೇಂದ್ರ ಎಂದು ಕಟುವಾಗಿ ಟೀಕಿಸಿರುವ ಭಾರತ, ದೇಶದ ಆಂತರಿಕ ವಿಚಾರವಾದ ಕಾಶ್ಮೀರ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವ್ಯಾಪ್ತಿಗೆ ತರುವ ಮೂಲಕ ಪಾಕಿಸ್ತಾನವು ವಿಶ್ವಸಂಸ್ಥೆಯ ವೇದಿಕೆಯನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಜೊತೆಗೆ, ಪಾಕಿಸ್ತಾನದ ಆರೋಪಗಳೆಲ್ಲವೂ ಆಧಾರ ರಹಿತ ಹಾಗೂ ಕಪಟತನವಾಗಿದೆ ಎಂದು ಪಾಕಿಸ್ತಾನಕ್ಕೆ ಭಾರತ ಛಡಿಯೇಟು ನೀಡಿದೆ.
undefined
2018ನೇ ಸಾಲಿನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವರದಿ ಕುರಿತು ಶುಕ್ರವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ರಾಯಭಾರಿ ಮಲೀಹಾ ಲೋಧಿ, ಕಾಶ್ಮೀರಕ್ಕೆ ವಿಶೇಷಾಧಿಕಾರ ಪ್ರಾಪ್ತಿ ಮಾಡುತ್ತಿದ್ದ ಸಂವಿಧಾನದ 370ನೇ ವಿಧಿ ಹಾಗೂ 35(ಎ) ಪರಿಚ್ಛೇದದ ರದ್ದತಿಯು ಭದ್ರತಾ ಮಂಡಳಿಯ ಗೊತ್ತುವಳಿಗಳ ಘೋರ ಉಲ್ಲಂಘನೆ ಎಂದು ದೂರಿದರು. ಜೊತೆಗೆ, ಕಾಶ್ಮೀರದಲ್ಲಿ ಹೇರಲಾದ ನಿಷೇಧಾಜ್ಞೆ, ಕಫä್ರ್ಯ, ಮಾಧ್ಯಮಗಳ ಮೇಲಿನ ನಿರ್ಬಂಧ ವಾಪಸ್, ಬಂಧನಕ್ಕೊಳಗಾದವರ ಬಿಡುಗಡೆ ಮಾಡಬೇಕೆಂದು ಪಾಕಿಸ್ತಾನ ಆಗ್ರಹಿಸಿತು.
ಈ ಆರೋಪದ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಗೆ ಭಾರತದ ಕಾಯಂ ಮಿಷನ್‌ನ ಮೊದಲ ಕಾರ್ಯದರ್ಶಿ ಸಂದೀಪ್ ಕುಮಾರ್ ಬಯ್ಯಾಪು, ‘ಪಾಕಿಸ್ತಾನ ಈ ಹಿಂದಿನಿಂದಲೂ ಆಧಾರ ರಹಿತವಾಗಿ ಹಾಗೂ ತನ್ನ ಕಪಟ ಬುದ್ಧಿಯೊಂದಿಗೆ ನನ್ನ ದೇಶದ ವಿರುದ್ಧ ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಲೇ ಬಂದಿತ್ತು. ಆದರೆ, ಅವುಗಳಲೆಲ್ಲಾ ಪಾಕಿಸ್ತಾನ ವೈಫಲ್ಯ ಕಂಡಿತ್ತು. ಇದೀಗ ಮತ್ತೆ ಅಂಥದ್ದೇ ಸುಳ್ಳಿನ ಆರೋಪವನ್ನು ಪಾಕ್ ಮಾಡುತ್ತಿದೆ. ಇದರಲ್ಲೂ ಪಾಕಿಸ್ತಾನ ಯಶಸ್ಸು ಕಾಣಲ್ಲ’ ಎಂದು ತಿರುಗೇಟು ನೀಡಿದರು.
ಜೊತೆಗೆ, ವಾಸ್ತವ ಸಂಗತಿ ಏನೆಂದರೆ ಭಾರತದ ಮೇಲೆ ಇಂಥ ಆರೋಪಗಳನ್ನು ಮಾಡುತ್ತಿರುವವರು ಉಗ್ರವಾದದ ನೆಲೆ ಎಂದು ಭೌಗೋಳಿಕವಾಗಿ ಗುರುತಿಸಲ್ಪಟ್ಟಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಜೊತೆಗೆ ತಮ್ಮ ಭಯೋತ್ಪಾದನಾ ಕೃತ್ಯಗಳ ಮೂಲಕ ನಮ್ಮ ಮತ್ತು ನಮ್ಮ ಸುತ್ತಮುತ್ತಲ ವಲಯದ ಮುಗ್ದ ಜನರ ಜೀವ ಪಡೆಯುತ್ತಿರುವವರು. ಹೀಗಾಗಿ ಇಂಥ ಬೂಟಾಟಿಕೆಯ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಸಂದೀಪ್ ಕುಮಾರ್ ಪಾಕ್ ಆರೋಪಗಳ ಕುರಿತು ವ್ಯಂಗ್ಯವಾಡಿದರು.