
ಇಸ್ಲಮಾಬಾದ್(ನ.26): ಮುಂಬೈ ದಾಳಿಗೆ 8 ವರ್ಷವಾದರೂ, ಪಾಕಿಸ್ತಾನ ಇಂದಿಗೂ ಕೂಡಾ ಭಾರತದ ಮಿತ್ರ ರಾಷ್ಟ್ರ. ವಾಸ್ತವವೆಂದರೆ, ಪಾಕಿಸ್ತಾನ ಭಾರತಕ್ಕೆ ಮಾತ್ರ ಅಲ್ಲ, ಇಡೀ ಜಗತ್ತಿಗೇ ಒಂದು ಆತಂಕ. ಈ ಪಾಕಿಸ್ತಾನದ ಭಯೋತ್ಪಾದನೆಯ ಚರಿತ್ರೆ ಚಿಕ್ಕದಲ್ಲ.
ಇದು ಉತ್ಪ್ರೇಕ್ಷೆಯಲ್ಲ. ಪಾಕಿಸ್ತಾನದ ಭಯೋತ್ಪಾದಕರು ಕೇವಲ ಭಾರತವನ್ನಷ್ಟೇ ನರಕ ಮಾಡಿಲ್ಲ. ಪಕ್ಕದ ಅಫ್ಘಾನಿಸ್ತಾನ, ರಷ್ಯಾ, ಬ್ರಿಟನ್, ಅಮೆರಿಕ, ಆಸ್ಟ್ರೇಲಿಯ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ನರಕ ಸೃಷ್ಟಿಸಿದ್ದಾರೆ.
ಅಲ್ ಖೈದಾ, ತಾಲಿಬಾನ್, ಜೈಶ್ ಎ ಮೊಹಮದ್, ಲಷ್ಕರ್ ಎ ತೊಯ್ಬಾ, ಜಮಾತೆ ಉದ್ ದವಾ ಹೀಗೆ ಪಾಕಿಸ್ತಾನವೊಂದರಲ್ಲೇ 14 ಉಗ್ರ ಸಂಘಟನೆಗಳಿವೆ.
ಇಲ್ಲಿರುವುದು 14ಕ್ಕೂ ಹೆಚ್ಚು ಉಗ್ರ ಸಂಘಟನೆಗಳು ಎಂದ ಮೇಲೆ ಇದು ಸಹಜವೂ ಹೌದು. ಲಖ್ವಿ, ಹಫೀಸ್ ಸಯೀದ್, ಲಾಡೆನ್, ತೊಮರ್, ಸಾಜಿದ್ ಮಿರ್, ಫಾಹಿಮ್ ಅನ್ಸಾರಿ. ಇಲ್ಲಿನ ಉಗ್ರರ ಸೈನ್ಯವೂ ಅಷ್ಟೇ ದೊಡ್ಡದು. ಸ್ವತಃ ಸರ್ಕಾರ, ಮಿಲಿಟರಿ, ಗುಪ್ತಚರ ಇಲಾಖೆಯೇ ಬೆನ್ನಿಗೆ ನಿಂತಾಗ ಇಂಥಾದ್ದೊಂದು ರಕ್ತಬೀಜಾಸುರರ ವಂಶ ಬೆಳೆಯುತ್ತಾ ಹೋಗುತ್ತದೆ.
ಅಫ್ಘಾನಿಸ್ತಾನವನ್ನು ಅಲ್ಲೋಲಕಲ್ಲೋಲ ಮಾಡಿದ ಅಲ್ ಕೈದಾ ಮತ್ತು ತಾಲಿಬಾನ್ ಬೀಜ ಮೊಳೆತಿದ್ದು ಪಾಕಿಸ್ತಾನದಲ್ಲೇ. ಒಸಮಾ ಬಿನ್ ಲಾಡೆನ್, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸೃಷ್ಟಿಸಿದ್ದು ಪಾಕಿಸ್ತಾನದ ಬೆಂಬಲದಿಂದಲೇ.
-ಪಾಕಿಸ್ತಾನದಿಂದಲೇ ಸಿದ್ಧವಾಗಿತ್ತು ಅಮೆರಿಕ ಪೆಂಟಗನ್ ದಾಳಿ ಸ್ಕೆಚ್..!: -ಇಡೀ ಜಗತ್ತನ್ನೇ ನಡುಗಿಸಿದ ನ್ಯೂಯಾರ್ಕ್ನ ವರ್ಲ್ಡ್ ಟ್ರೇಡ್ ಸೆಂಟರ್ ದಾಳಿಗೆ ಸ್ಕೆಚ್ ಹಾಕಿದ್ದೇ ಪಾಕಿಸ್ತಾನದಿಂದ. ವಿಮಾನಗಳನ್ನು ವಿಶ್ವವಾಣಿಜ್ಯ ಕಟ್ಟಡಕ್ಕೆ ನುಗ್ಗಿಸಿದ್ದ ಲಾಡೆನ್ಗೆ ಆಶ್ರಯ ಕೊಟ್ಟಿದ್ದೇ ಪಾಕಿಸ್ತಾನ.
-ರಷ್ಯಾದ ಬೆಸ್ಲಾಸ್ ಹತ್ಯಾಕಾಂಡದಲ್ಲೂ ಪಾಕ್ ಉಗ್ರರ ಕೈವಾಡ: 2004ರಲ್ಲಿ ನಡೆದಿದ್ದ ಆ ಹತ್ಯಾಕಾಂಡದಲ್ಲಿ 186 ಮಕ್ಕಳೂ ಸೇರಿದಂತೆ 385 ಮಂದಿ ಬಲಿಯಾಗಿದ್ದರು.
-ಆಫ್ರಿಕಾ ದೇಶಗಳಲ್ಲಿ ವಿವಿಧ ದೇಶಗಳ ರಾಯಭಾರಿ ಕಚೇರಿಗಳ ಮೇಲೆ ದಾಳಿ
-ಬ್ರಿಟನ್, ಆಸ್ಟ್ರೇಲಿಯಾಗಳಲ್ಲೂ ಪಾಕ್ ಉಗ್ರರ ಅಟ್ಟಹಾಸ
-ಪಾಕಿಸ್ತಾನವನ್ನೂ ಬಿಟ್ಟಿಲ್ಲ..ಪಾಕಿಸ್ತಾನವೇ ಸಾಕಿದ ವಿಷಸರ್ಪ ಸಂತಾನ: ಪಾಕಿಸ್ತಾನದ ಪೆಷಾವರದಲ್ಲಿದೆ ಓಪನ್ ಗನ್ ಮಾರ್ಕೆಟ್..!
ಇದೆಲ್ಲವೂ ವಿದೇಶಗಳ ಕಥೆ. ಇನ್ನು ಭಾರತಕ್ಕೆ ಬಂದರೆ, 1993ರ ಮುಂಬೈ ಸರಣಿ ಸ್ಫೋಟದಿಂದ ಹಿಡಿದು, ದೇಶದ ಯಾವ ಭಾಗವನ್ನೂ ಪಾಕ್ ಭಯೋತ್ಪಾದಕರು ಬಿಟ್ಟಿಲ್ಲ. ಜಮ್ಮು ಕಾಶ್ಮೀರದಿಂದ ಹಿಡಿದು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್, ದೆಹಲಿ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ತಾನ ಹೀಗೆ ಪ್ರತಿ ರಾಜ್ಯದಲ್ಲೂ ಪಾಕ್ ಉಗ್ರರು ಅಟ್ಟಹಾಸ ಗೈದಿದ್ದಾರೆ.
ಈ ದಾಳಿಗಳಿಂದ ಗಾಯಗೊಂಡವರ ಸಂಖ್ಯೆ ಮೂರೂವರೆ ಸಾವಿರಕ್ಕೆ ಹತ್ತಿರದಲ್ಲಿದೆ. ಹೀಗಿರುವಾಗ ಪಾಕಿಸ್ತಾನಕ್ಕೆ ಇನ್ನೂ ನಮ್ಮ ಮಿತ್ರರಾಷ್ಟ್ರ ಎಂಬ ಸ್ಥಾನಮಾನ ಕೊಡಬೇಕಾ..? ಏಕೆ ಕೊಡಬೇಕು ಎಂಬ ಪ್ರಶ್ನೆ ಎತ್ತಿದ್ದಾರೆ ಸಂಸದ ರಾಜೀವ್ ಚಂದ್ರಶೇಖರ್. ಈ ಕುರಿತು ರಾಜ್ಯಸಭೆಯಲ್ಲಿ ಖಾಸಗಿ ಮಸೂದೆಯನ್ನೂ ಮಂಡಿಸಿದ್ದಾರೆ.
ಈ ವಿಚಾರದಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯನ್ನಿಡಲೇಬೇಕಿದೆ. ಭಯೋತ್ಪಾದನೆಗೆ ಎದಿರೇಟು ಕೊಡುವುದು ಈಗಲ್ಲದಿದ್ದರೆ ಇನ್ಯಾವಾಗ..? ಏಕೆಂದರೆ, ಇನ್ನೂ ಕೂಡಾ ಮುಂಬೈ ದಾಳಿಯ ಬಾಕಿ ಚುಕ್ತಾ ಆಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.