ಐಎನ್‌ಎಕ್ಸ್ ಮಿಡಿಯಾ ಹಗರಣ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ| ಅ.24ರ ವರೆಗೆ ಚಿದು ಇಡಿ ಕಸ್ಟಡಿಗೆ: ಕೊನೆಗೂ ತಿಹಾರ್‌ನಿಂದ ಹೊರಕ್ಕೆ|
ನವದೆಹಲಿ[ಅ.18]: ಐಎನ್‌ಎಕ್ಸ್ ಮಿಡಿಯಾ ಹಗರಣ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂರನ್ನು ಅ.24ರ ವರೆಗೆ ಇಡಿ ಕಸ್ಟಡಿಗೆ ನೀಡಿ ದೆಹಲಿ ನ್ಯಾಯಾಲಯ ಅದೇಶ ನೀಡಿದೆ.
ಪ್ರತ್ಯೇಕ ಸೆಲ್, ಮನೆ ಊಟ, ವೆಸ್ಟರ್ನ್ ಶೌಚಾಲಯ, ಔಷಧ ಹಾಗೂ ಪ್ರತೀ ದಿನ ವಕೀಲರೊಂದಿಗೆ ಕುಟುಂಬಸ್ಥರನ್ನು ಭೇಟಿ ಮಾಡಲು ಕೋರ್ಟ್ ಅವಕಾಶ ನೀಡಿದ್ದು, ಪ್ರತೀ 48 ಗಂಟೆಗಳಿಗೊಮ್ಮೆ ಚಿದಬಂರಂ ಆರೋಗ್ಯ ತಪಾಸಣೆ ಮಾಡಬೇಕು ಎಂದು ಇಡಿಗೆ ಕೋರ್ಟ್ ಸೂಚನೆ ನೀಡಿದೆ.
ಇಡಿ ವಶಕ್ಕೆ ಪಡೆದುಕೊಂಡಿದ್ದರಿಂದ ಚಿದಂಬರಂ ತಿಹಾರ್ ಜೈಲು ವಾಸ ತಾತ್ಕಾಲಿಕವಾಗಿ ಅಂತ್ಯವಾಗಿದ್ದು, ಇಡಿ ಕಚೇರಿಯಲ್ಲಿ ವಿಚಾರಣೆ ಎದುರಿಸಲಿದ್ದಾರೆ. ಇದೇ ಹಗರಣ ಸಂಬಂಧ ತಿಹಾರ್ ಜೈಲಿನಲ್ಲಿ ಸಿಬಿಐ ವಿಚಾರಣೆ ಎದುರಿಸುತ್ತಿದ್ದ ಚಿದಂಬರಂ ಅವರನ್ನು ಬುಧವಾರ ಇಡಿ ಅಲ್ಲೇ ಬಂಧಿಸಿ ವಿಚಾರಣೆ ನಡೆಸಿತ್ತು. ಇದೇ ವೇಳೆ ಸಿಬಿಐ ಪ್ರಕರಣದಲ್ಲಿ ಅ.24ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶಿಸಿದೆ.