ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಿವೆ ಪಾಕ್‌ನ ಶೇ.50ರಷ್ಟು ಕುಟುಂಬ!

By Web DeskFirst Published Jul 27, 2019, 1:06 PM IST
Highlights

ಬಡತನದಿಂದ ಪಾಕಿಸ್ತಾನದ ಸ್ಥಿತಿ ಕಂಗಾಲು| ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ ಪಾಕ್ ಜನತೆ| ಪೌಷ್ಟಿಕ ಆಹಾರವಿಲ್ಲದೆ ಮಕ್ಕಳ ರೋದನ

ಇಸ್ಲಮಾಬಾದ್[ಜು.27]: ಪಾಕಿಸ್ತಾನದ ಶೇ. 50ರಷ್ಟು ಕುಟುಂಬಗಳು ಬಡತನದಿಂದ ಎರಡೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಅದರಲ್ಲೂ ಸಣ್ಣ ಪುಟ್ಟ ಮಕ್ಕಳು ಪೌಷ್ಟಿಕ ಆಹಾರವಿಲ್ಲದೇ ಹಸಿವಿನಿಂದ ಕಂಗಾಲಾಗಿವೆ. 

2018ರ ರಾಷ್ಟ್ರೀಯ ಪೋಷಣೆ ಸಮೀಕ್ಷೆಯಲ್ಲಿ ಈ ಆತಂಕಕಾರಿ ವಿಚಾರ ಬಯಲಾಗಿದ್ದು, ಶೇ. 50ರಷ್ಟು ಕುಟುಂಬಗಳು ಬಡತನದಿಂದಾಗಿ ಊಟಕ್ಕಾಗಿ ಪರದಾಡಲಾರಂಭಿಸಿವೆ. ಬೇರೆ ದಾರಿ ಇಲ್ಲದೇ, ಹಸಿವಿನಿಂದಲೇ ದಿನದೂಡಬೇಕಾದ ಅನಿವಾರ್ಯತೆ ಈ ಕುಟುಂಬಗಳಿಗೆ ಎದುರಾಗಿದೆ ಎಂದು ತಿಳಿಸಲಾಗಿದೆ. 

ಪಾಕಿಸ್ತಾನದ ಶೇ. 40.2ರಷ್ಟು ಮಕ್ಕಳಲ್ಲಿ ದೀರ್ಘಕಾಲದ ಅಪೌಷ್ಟಿಕತೆ ಮತ್ತು ಬೆಳವಣಿಗೆ ಕುಂಠಿತಗೊಳ್ಳುತ್ತಿರುವುದು ಪತ್ತೆಯಾಗಿದೆ. ಇದು ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತಿರುವುದಾಗಿ ರಾಷ್ಟ್ರೀಯ ಆರೋಗ್ಯ ಇಲಾಖೆ ನಡೆಸಿರುವ ಅಧ್ಯಯನದಲ್ಲಿ ಬಯಲಾಗಿದೆ.

ರಾಷ್ಟ್ರದಲ್ಲಿ ಎದುರಾಗಿರುವ ಈ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ಈ ಸಮೀಕ್ಷೆ ಕೈಗೊಳ್ಳಲಾಗಿತ್ತು. ಈ ಮೂಲಕ ತಮ್ಮ ದೇಶದ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವತ್ತ ಸರ್ಕಾರ ಗಮನಹರಿಸುವಂತೆ ಮಾಡುವುದು ತಂಡದ ಉದ್ದೇಶವಾಗಿತ್ತು. 

ಸುಮಾರು 1,15,600 ಕುಟುಂಬಗಳ 1,45,324 ಸ್ತ್ರೀಯರು, 5 ವರ್ಷದೊಳಗಿನ 76,742 ಮಕ್ಕಳು ಹಾಗೂ 10 ರಿಂದ 19 ವರ್ಷದೊಳಗಿನ 1,45,847 ಅಪ್ರಾಪ್ತರ ಆಧಾರದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ.

click me!