ಟಿಪ್ಪು ಜಯಂತಿ ಬಗ್ಗೆ ಮುಸ್ಲಿಮರಲ್ಲೇ ಇದೆ ಅಪಸ್ವರ

By Suvarna Web DeskFirst Published Nov 3, 2016, 2:23 AM IST
Highlights

ಇಸ್ಲಾಂ ಧರ್ಮದಲ್ಲಿ ಯಾವುದೇ ವ್ಯಕ್ತಿಯ ಜಯಂತಿ ಅಥವಾ ವೈಭವೀಕರಣಕ್ಕೆ ಅವಕಾಶ ಇಲ್ಲ. ಜಯಂತಿ ಬೇಕಾ ಬೇಡವಾ ಅನ್ನೋ ವಿಚಾರದಲ್ಲಿ  ಮುಸ್ಲಿಂ ಮುಖಂಡರಲ್ಲೇ ಗೊಂದಲಗಳಿವೆ..

ಬೆಂಗಳೂರು(ನ. 03): ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿ ಸರ್ಕಾರ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದೆ. ಹಿಂದಿನ ವರ್ಷದ ಕರಾಳ ಅನುಭವ ಇನ್ನೂ ಮಾಡಿಲ್ಲ. ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳಿಂದಲೂ ಪ್ರಬಲ ವಿರೋಧ ವ್ಯಕ್ತವಾಗ್ತಿದೆ. ಟಿಪ್ಪು ಜಯಂತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ರಾಜಕೀಯ ಲಾಭವಿದ್ದೇ ಇದೆ. ಮುಸ್ಲಿಂ ವೋಟ್​'ಬ್ಯಾಂಕ್​ಗಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಟಿಪ್ಪು ಜಯಂತಿಗೆ ಮುಂದಾಗಿರೋದು ಬಹಿರಂಗ ಸತ್ಯ. ಆದ್ರೆ ಇಸ್ಲಾಂ ಧರ್ಮವನ್ನು ಕಟ್ಟುನಿಟ್ಟಾಗಿ ಆಚರಿಸುತ್ತಿರುವ ಮುಸ್ಲಿಂ ಸಮುದಾಯ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸುತ್ತಿದೆ. ಅಷ್ಟಕ್ಕೂ ಇಸ್ಲಾಂ ಧರ್ಮದಲ್ಲಿ ವ್ಯಕ್ತಿ ಪೂಜೆ, ಜಯಂತಿ ಆಚರಣೆಗಳು ನಿಷಿದ್ಧ. ಅದು ಧರ್ಮಬಾಹಿರ ಕೂಡಾ. ಇಷ್ಟಿದ್ರೂ ಹಲವು ಮುಸ್ಲಿಂ ಸಂಘಟನೆಗಳೂ ಜಯಂತಿ ಆಚರಣೆಗೆ ಬೆಂಬಲ ಕೊಡುತ್ತಿರುವುದು ಎಷ್ಟು ಸರಿ ಅನ್ನೋ ಪ್ರಶ್ನೆ ಎದ್ದಿದೆ.

ಈ ಮಧ್ಯೆ ಟಿಪ್ಪು ಸುಲ್ತಾನ್ ಪ್ರವಾದಿಯೂ ಅಲ್ಲ, ಸಂತನೂ ಅಲ್ಲ, ಧರ್ಮಗುರುವೂ ಅಲ್ಲದ ಒಬ್ಬ ಅರಸ. ಈತನ ಜನ್ಮಾಚರಣೆಗೆ ಇಸ್ಲಾಂ ಖಂಡಿತಾ ಒಪ್ಪಲ್ಲ ಅನ್ನೋದು ಕೆಲವರ ಅಭಿಪ್ರಾಯ. ಹಾಗಂತ ಈ ವಾದ ಮಂಡಿಸುವ ಮುಸ್ಲಿಂ ಮುಖಂಡರು ಟಿಪ್ಪು ಜಯಂತಿ ಬೇಡ ಅಂತಲೂ ಖಡಕ್ಕಾಗಿ ಹೇಳುತ್ತಿಲ್ಲ. ಬದಲಾಗಿ ಜಯಂತ ಆಚರಣೆ ಸರ್ಕಾರಕ್ಕೆ ಬಿಟ್ಟಿದ್ದು ಅಂತ ತೇಲಿಸಿಬಿಡುತ್ತಾರೆ.

ಯಾವುದು ಏನೇ ಇರಲಿ, ಸದ್ಯಕ್ಕೆ ಟಿಪ್ಪು ಜಯಂತಿ ಆಚರಣೆಯನ್ನ ಸರ್ಕಾರ ರಾಜಕೀಯದ ಇಗೋ ಆಗಿ ಪರಿಗಣಿಸಿದೆ. ಬಿಜೆಪಿ ಎದುರು ತಲೆ ತಗ್ಗಿಸಬಾರದು ಅನ್ನೋ ಕಾರಣಕ್ಕೆ ಸರ್ಕಾರ ಭಾರೀ ದೊಡ್ಡ ರಿಸ್ಕ್​'ಗೆ ಕೈಹಾಕಿದೆ. ಆದ್ರೆ ಈ ರಾಜಕೀಯ ಮೇಲಾಟದಲ್ಲಿ 2 ಸಮುದಾಯಗಳ ಮಧ್ಯೆ ವೈಷಮ್ಯ ಹುಟ್ಟುತ್ತಿರುವ ಆತಂಕವೂ ಎದುರಾಗಿದೆ. ಟಿಪ್ಪು ಜಯಂತಿಯಿಂದ ಕಾಂಗ್ರೆಸ್'​ಗೆ ಎಷ್ಟು ಲಾಭವಾಗುತ್ತೋ ಇಲ್ಲವೋ.. ಆದ್ರೆ ಒಂದು ಸಮುದಾಯಕ್ಕೆ ಮಾತ್ರ ಜಯಂತಿಯಿಂದ ಲಾಭಕ್ಕಿಂತ ನಷ್ಟವೇ ತರುತ್ತೆ ಅನ್ನೋದು ಹಲವರ ಅಭಿಪ್ರಾಯ..

- ಮಸೂದ್ ದೊಡ್ಡೇಬಾಗಿಲು, ಸುವರ್ಣ ನ್ಯೂಸ್

click me!