‘ಸಹೋದರರಿಬ್ಬರೂ ಕಾಂಗ್ರೆಸ್ ಬಿಡೋದಿಲ್ಲ’

By Web DeskFirst Published Dec 6, 2018, 10:59 AM IST
Highlights

ಬಿಜೆಪಿಯ ಹಗಲುಗನಸು ಕನಸಾಗಿಯೇ ಉಳಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಜಾರಕಿಹೊಳಿ ಸಹೋದರರೂ ಕೂಡ ಕಾಂಗ್ರೆಸ್ ಬಿಡುತ್ತಾರೆ ಎನ್ನುವುದು ಊಹಾಪೋಹ ಎಂದು ಹೇಳಿದರು.

ಬೆಂಗಳೂರು :  ಸತೀಶ್‌ ಜಾರಕಿಹೊಳಿ, ರಮೇಶ್‌ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್‌ನ ಯಾವ ಶಾಸಕರೂ ಪಕ್ಷ ಬಿಡುವುದಿಲ್ಲ. ಆಪರೇಷನ್‌ ಕಮಲದ ಊಹಾಪೋಹಗಳಿಗೆ ಇಂದಿನಿಂದಲೇ ಪೂರ್ಣ ವಿರಾಮ ಬೀಳಲಿದೆ. ಬಿಜೆಪಿಯ ಹಗಲುಗನಸು ಕನಸಾಗಿಯೇ ಉಳಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಸಂಜೆ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಮನ್ವಯ ಸಮಿತಿ ಸಭೆಯ ನಂತರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಪಕ್ಷ ಬಿಡುವುದಿಲ್ಲ ಈಗಾಗಲೇ ಎಂದು ಸತೀಶ್‌ ಜಾರಕಿಹೊಳಿ ಹಾಗೂ ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ರಮೇಶ ಜಾರಕಿಹೊಳಿ ಅವರು ಸಚಿವ ಸಂಪುಟ ಸಭೆಗಳಿಗೆ ಹೋಗುವುದಿಲ್ಲ ಎಂಬ ಆರೋಪ ಇದೆ. ಅಷ್ಟಕ್ಕೇ ಪಕ್ಷ ಬಿಡುತ್ತಾರೆ, ಪಕ್ಷದಲ್ಲಿ ಗೊಂದಲಗಳಿವೆ ಎಂದು ಊಹಿಸಿಕೊಳ್ಳುವ ಅಗತ್ಯವಿಲ್ಲ. ಕಳೆದ ಸಚಿವ ಸಂಪುಟ ಸಭೆಗೆ ಅವರು ಹಾಜರಾಗಿದ್ದರು. ಸಚಿವರಾಗಿ ಸಚಿವ ಸಂಪುಟ ಸಭೆಗೆ ಹಾಜರಾಗುವುದು ಅವರ ಕರ್ತವ್ಯ. ಹೆಚ್ಚು ಬಾರಿ ಗೈರು ಹಾಜರಾಗಿದ್ದರೆ ಸಂಪುಟ ಸಭೆಗೆ ಹೋಗುವಂತೆ ಹೇಳುತ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಬಿಜೆಪಿಯವರು ಆಪರೇಷನ್‌ ಕಮಲದಲ್ಲಿ ಒಂದು ಬಾರಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಈ ಬಾರಿಯೂ ಯಶಸ್ವಿಯಾಗಬಹುದು ಎಂದು ಹಗಲು ಕನಸು ಕಾಣುತ್ತಿದ್ದಾರೆ. ಅವರ ಕನಸು ಕನಸಾಗಿಯೇ ಉಳಿಯಲಿದೆ. ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ಗೆ ಮಾಹಿತಿ ಇಲ್ಲದೆ ಕರ್ನಾಟಕ ರಾಜ್ಯದಲ್ಲಿ ಭೂಕಂಪ ಆಗುತ್ತದೆ ಎಂದು ಹೇಳಿದ್ದಾರೆ. ಜತೆಗೆ ಯಾವಾಗ ಎಂಬುದು ಯಡಿಯೂರಪ್ಪಗೆ ಚೆನ್ನಾಗಿ ಗೊತ್ತು ಎಂದಿದ್ದಾರೆ. ಅಂದರೆ, ಪ್ರಕಾಶ್‌ ಜಾವಡೇಕರ್‌ಗೆ ಏನೂ ಗೊತ್ತಿಲ್ಲ ಎಂದಾಯಿತು. ಯಾರೋ ಹೇಳಿದ ಮಾತುಗಳನ್ನು ಕೇಳಿಕೊಂಡು ಹೇಳುತ್ತಾರೆ. ಅವರ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.

click me!