ಆಪರೇಷನ್ ಕಮಲ : ಕಾಂಗ್ರೆಸ್ ಮುಖಂಡರಿಬ್ಬರ ಸ್ಫೋಟಕ ಹೇಳಿಕೆ

By Web DeskFirst Published Jan 1, 2019, 11:29 AM IST
Highlights

ರಾಜ್ಯದಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಲು ಯತ್ನಿಸುತ್ತಿದೆ ಎಂದು ಆರೋಪಗಳು ಕೇಳಿ ಬರುತ್ತಿದ್ದು ಇದೀಗ ತಮಗೆ ಬಿಜೆಪಿ ಮುಖಂಡರು ಕರೆ ಮಾಡಿ ಗಾಳ ಹಾಕುತ್ತಿದ್ದಾರೆ ಎಂದು ಹೈದರಾಬಾದ್‌ ಕರ್ನಾಟಕದ ಕಾಂಗ್ರೆಸ್‌ ಶಾಸಕರಿಬ್ಬರು ಹೇಳಿಕೊಂಡಿದ್ದಾರೆ.

ಬೆಂಗಳೂರು : ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿರುವ ನಡುವೆಯೇ ಬಿಜೆಪಿಯವರು ಆಪರೇಷನ್‌ ಕಮಲಕ್ಕೆ ಮುಂದಾಗಿರುವ ಕುರಿತಂತೆ ಪುಕಾರು ಹಬ್ಬಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಏತನ್ಮಧ್ಯೆ, ತಮಗೆ ಬಿಜೆಪಿ ಮುಖಂಡರು ಕರೆ ಮಾಡಿ ಗಾಳ ಹಾಕುತ್ತಿದ್ದಾರೆ ಎಂದು ಹೈದರಾಬಾದ್‌ ಕರ್ನಾಟಕದ ಕಾಂಗ್ರೆಸ್‌ ಶಾಸಕರಿಬ್ಬರು ಹೇಳಿಕೊಂಡಿದ್ದಾರೆ.

ಬಿಜೆಪಿಯವರು ತಮ್ಮನ್ನು ಸಂಪರ್ಕಿಸಿದ್ದಾರೆಂದು ಚಿಂಚೋಳಿಯ ಶಾಸಕ ಡಾ.ಉಮೇಶ್‌ ಜಾಧವ ಹಾಗೂ ಅಫಜಲ್ಪುರ ಶಾಸಕ ಎಂ.ವೈ. ಪಾಟೀಲ್‌ ಹೇಳಿದ್ದಾರೆ. ಅಲ್ಲದೆ ತಮ್ಮನ್ನು ಸಂಪರ್ಕಿಸಿದವರಿಗೆ ತಾವು ತಕ್ಕ ಉತ್ತರ ನೀಡಿದ್ದಾಗಿ ಹೇಳುವ ಮೂಲಕ ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅಫಜಲ್ಪುರ ಶಾಸಕ ಎಂ.ವೈ.ಪಾಟೀಲ್‌, ತಮಗೂ ಬಿಜೆಪಿಯಿಂದ ಮೂರ್ನಾಲ್ಕು ಬಾರಿ ಕರೆಗಳು ಬಂದಿವೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಟಿಕೆಟ್‌ ಕೊಟ್ಟಿರಲಿಲ್ಲ. ಈಗ ಕಾಂಗ್ರೆಸ್‌ನಿಂದ ಗೆದ್ದ ಮೇಲೆ ಕರೆಯುತ್ತಿದ್ದಾರೆ. ನಾನಂತೂ ಕಾಂಗ್ರೆಸ್‌ ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂದು ತಿಳಿಸಿದರು.

ಬಿಜಿಪಿಗೆ ಬೆಂಬಲ ಕೊಡಿ, ಹೊಸ ಸರ್ಕಾರ ರಚನೆಯಾಗುತ್ತದೆ. ನಮಗೆ ನಿಮ್ಮ ಸಹಾಯ ಬೇಕು ಎಂದು ಹೇಳಿ ಕರೆಗಳು ಬರುತ್ತಿವೆ. ಆದರೆ, ಯಡಿಯೂರಪ್ಪ ಈವರೆಗೆ ಕರೆ ಮಾಡಿಲ್ಲ, ಕರೆ ಮಾಡಿದವರು ಪಕ್ಷದ ವಿವಿಧ ಹಂತದಲ್ಲಿನ ಮುಖಂಡರು. ಅವರಿಗೆ ನಾವೂ ತಕ್ಕ ಉತ್ತರ ನೀಡಿದ್ದೇವೆ ಎಂದು ಪಾಟೀಲ್‌ ಹೇಳಿದರು.

ನಾವು ಜವಾಬ್‌ ಕೊಟ್ಟೀವ್ರಿ-ಜಾಧವ:

ನನ್ನನ್ನು ಬೇರೆ ಪಕ್ಷದವರು ಸಂಪರ್ಕಿಸಿದ್ದು ನಿಜ. ನಾವು ಅವರಿಗೆ ಅದೇನ್‌ ಜವಾಬ್‌ ಕೊಡಬೇಕೋ ಕೊಟ್ಟಿದ್ದೇವೆ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್‌ಗೆ ಎಲ್ಲರನ್ನು ತೃಪ್ತಿಪಡಿಸೋದು ಏಕಕಾಲಕ್ಕೆ ಆಗುವುದಿಲ್ಲ ಎಂದ ಅವರು, ಕಾದು ನೋಡುವ ನೀತಿ ನಾವು ಇಲ್ಲಿ ಅನುಸರಿಸಲೇಬೇಕು ಎಂದು ಹೇಳಿದರು.

click me!