‘ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ’

By Web DeskFirst Published Dec 5, 2018, 8:47 AM IST
Highlights

ಆಪರೇಷನ್ ಕಮಲಕ್ಕೆ ಸಂಚು ರೂಪಿಸುತ್ತಿರುವ ಆಡಿಯೋ ಒಂದು ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿರುವ ಬೆನ್ನಲ್ಲೇ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಇಂತಹ ಕೆಲಸ ನಡೆದಿದ್ದಲ್ಲಿ ಸಿಬಿಐ ತನಿಖೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ. 

ಬೆಂಗಳೂರು :  ‘ಆಪರೇಷನ್‌ ಕಮಲ’ಕ್ಕೆ ಸಂಚು ರೂಪಿಸುತ್ತಿರುವ ಮಾತುಕತೆಯ ಆಡಿಯೋವೊಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ನಡುವೆಯೇ ಬಿಜೆಪಿ ಇಂಥ ಸಾಧ್ಯತೆ ಕುರಿತು ಸ್ಪಷ್ಟವಾಗಿ ಅಲ್ಲಗಳೆದಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಸಿಬಿಐ ತನಿಖೆ ನಡೆಸಲಿ ಎಂದು ಸವಾಲು ಹಾಕಿದೆ.

ನಾವು ಆಪರೇಷನ್‌ ಕಮಲ ನಡೆಸುತ್ತಿಲ್ಲ. ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ಆಡಿಯೋ ನಮ್ಮವರದ್ದಲ್ಲ. ಅಧಿಕಾರ ಅವರ ಕೈಯಲ್ಲೇ ಇದೆ. ಬೇಕಿದ್ದರೆ ಈ ಸಂಬಂಧ ತನಿಖೆ ನಡೆಸಲಿ ಎಂದು ಬಿಜೆಪಿ ಮುಖಂಡರು ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ. ಇದೇ ವೇಳೆ, ಕಾಂಗ್ರೆಸ್‌ನ ಅತೃಪ್ತ ಶಾಸಕರು ಅವರಾಗಿಯೇ ನಮ್ಮ ಪಕ್ಷದ ಕದ ತಟ್ಟಿದರೆ ನಾವು ಸ್ವಾಗತಿಸುತ್ತೇವೆ ಎಂದೂ ಘೋಷಿಸಿದ್ದಾರೆ.

ಅಲ್ಲದೆ, ಈ ಆಡಿಯೋ ಬಿಡುಗಡೆ ಹಿಂದೆ ಸ್ವತಃ ಮುಖ್ಯಮಂತ್ರಿಗಳ ಕಚೇರಿ ಇದೆ ಎಂಬ ಅನುಮಾನಗಳಿವೆ ಎಂದೂ ಬಿಜೆಪಿ ನಾಯಕರು ತೀಕ್ಷ್ಣವಾಗಿ ಹೇಳಿದ್ದಾರೆ.

ಆಪರೇಷನ್‌ ಮಾಡಲ್ಲ- ಈಶ್ವರಪ್ಪ:  ಯಾವುದೇ ಕಾರಣಕ್ಕೂ ಬಿಜೆಪಿ ಆಪರೇಷನ್‌ ಕಮಲ ಮಾಡಲ್ಲ, ರಾಜ್ಯ ಸಮ್ಮಿಶ್ರ ಸರ್ಕಾರವನ್ನು ನಮ್ಮ ಪಕ್ಷ ಬೀಳಿಸಲ್ಲ. ಕಾಂಗ್ರೆಸ್‌-ಜೆಡಿಎಸ್‌ ಗುದ್ದಾಟದಲ್ಲೇ ಸರ್ಕಾರ ಉರುಳುತ್ತದೆ. ಸಚಿವ ಸಂಪುಟದ ವಿಸ್ತರಣೆ ಬಳಿಕ ಸರ್ಕಾರ ಉಳಿಯುವುದಿಲ್ಲ ಎಂದು ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ರಾಯಚೂರಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಆಪರೇಷನ್‌ ಕಮಲಕ್ಕೆ ಕೈಹಾಕಲ್ಲ ಅಂದ ಮಾತ್ರಕ್ಕೆ ಸರ್ಕಾರದಿಂದ ಬೇಸತ್ತು ಶಾಸಕರು ಬಂದರೆ ಸುಮ್ಮನೆ ಕೂರಲ್ಲ, ಪಕ್ಷಕ್ಕೆ ಕರೆದುಕೊಳ್ಳುತ್ತೇವೆ. ನಾವು ಯಾರನ್ನೂ ಪಕ್ಷಕ್ಕೆ ಬನ್ನಿ ಎಂದು ಕರೆಯಲ್ಲ. ಬಿಜೆಪಿ ಸಿದ್ಧಾಂತ ಒಪ್ಪಿಕೊಂಡು ಸಿದ್ದರಾಮಯ್ಯ, ಸೋನಿಯಾ ಗಾಂಧಿ ಬಂದರೂ ಸ್ವಾಗತಿಸುತ್ತೇವೆ ಎಂದರು. ಜತೆಗೆ, ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ವಾಪಸ್‌ ಕರೆಸಿಕೊಂಡಿದ್ದು ‘ಆಪರೇಷನ್‌’ ಅಲ್ಲವೇ? ಯಾರಾದರೂ ಬಿಜೆಪಿಗೆ ಬಂದರೆ ಅದು ‘ಆಪರೇಷನ್‌ ಕಮಲವೇ’ ಎಂದು ಖಾರವಾಗಿ ಪ್ರಶ್ನಿಸಿದರು.

ಅವರವರೇ ಆಪರೇಷನ್‌ ಮಾಡ್ಕೋತಾರೆ- ಶೆಟ್ಟರ್‌:  ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಕೂಡ ಮತ್ತೆ ಆಪರೇಷನ್‌ ಕಮಲ ಹಾಗೂ ಈ ಸಂಬಂಧ ಹರಿದಾಡುತ್ತಿರುವ ಆಡಿಯೋ ಕುರಿತು ತೀವ್ರ ಕಿಡಿಕಾರಿದ್ದಾರೆ. ‘ನಾವು ಯಾವುದೇ ಆಪರೇಷನ್‌ ಮಾಡಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಅವರವರೇ ಆಪರೇಷನ್‌ ಮಾಡಿಕೊಂಡು ಸರ್ಕಾರ ಬೀಳಿಸುತ್ತಾರೆ’ ಎಂದಿದ್ದಾರೆ.

ಸರ್ಕಾರ ಬಿದ್ದರೆ ನಾವು ಮಾತ್ರ ಸುಮ್ಮನೆ ಕೂರುವುದಿಲ್ಲ. ಜನರ ಹಿತಾಸಕ್ತಿ ಕಾಯಲು ಸರ್ಕಾರ ರಚನೆ ಮಾಡಲು ಸಿದ್ಧರಿದ್ದೇವೆ ಎಂದು ಬಳ್ಳಾರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಎಚ್‌ಡಿಕೆ, ಸಿದ್ದುಗೆ ಹೇಳಿಯೇ ಮಾಡುತ್ತೇವೆ- ರಾಮುಲು:  ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಮಾತನಾಡಿ, ನಾವು ಅವರಿವರ ಜತೆ ಫೋನಿನಲ್ಲಿ ಮಾತನಾಡಿ ಆಪರೇಷನ್‌ ಮಾಡುವುದಿಲ್ಲ. ಬೇಕಾಗಿದ್ದರೆ ನೇರವಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ‘ನಾವು ಆಪರೇಷನ್‌ ಕಮಲ ಮಾಡ್ತಾ ಇದ್ದೀವಪ್ಪಾ...’ ಎಂದು ಹೇಳಿಯೇ ಮಾಡುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.

ಮೈತ್ರಿ ಸರ್ಕಾರದ ಮಂತ್ರಿಗಳು ಬೇರೆಲ್ಲೂ ಹೋಗುತ್ತಿಲ್ಲ. ಬೆಂಗಳೂರಲ್ಲೇ ಕೂತು ಗುಂಪು ಕಟ್ಟಿಕೊಂಡು ಇಲ್ಲದ್ದನ್ನು ಸೃಷ್ಟಿಮಾಡುತ್ತಿದ್ದಾರೆ. ಸರ್ಕಾರ ಅವರ ಬಳಿಯೇ ಇದೆ. ಆಡಿಯೋ ಕುರಿತು ಅದೇನ್‌ ತನಿಖೆ ಮಾಡಿಸುತ್ತಾರೋ ಮಾಡಿಸಲಿ. ಸುಮ್ಮನೆ ನಮ್ಮವರ ಹೆಸರು ಹೇಳೋದು, ಇವರೇ ಮಾಡಿಸಿದ್ದಾರೆ ಅನ್ನೋದು ಸರಿಯಲ್ಲ ಎಂದು ಶ್ರೀರಾಮುಲು ಅವರು ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಎಂ ಕಚೇರಿ ಕೈವಾಡ ಶಂಕೆ: ರವಿ

ಸ್ವತಃ ಮುಖ್ಯಮಂತ್ರಿಗಳ ಕಾರ್ಯಾಲಯವೇ ಈ ಆಡಿಯೋ ಬಿಡುಗಡೆ ಹಿಂದಿದೆ ಎಂಬ ಅನುಮಾನಗಳಿವೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಆಪಾದಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ತಮ್ಮ ಗುಪ್ತಚರ ವಿಭಾಗದಿಂದ ಎಲ್ಲ ಮಾಹಿತಿ ದೊರೆಯುತ್ತದೆ. ಆದರೆ, ಈಗ ಆಡಿಯೋ ಎಲ್ಲಿಂದ ಬಿಡುಗಡೆಯಾಗಿದೆ ಎಂಬ ಮಾಹಿತಿಯನ್ನು ಮುಖ್ಯಮಂತ್ರಿಗಳು ಯಾಕೆ ಬಹಿರಂಗಪಡಿಸಿಲ್ಲ? ಈ ಆಡಿಯೋ ನಿಜವೇ ಆಗಿದ್ದರೆ ಸ್ವತಃ ಮುಖ್ಯಮಂತ್ರಿಗಳೇ ತುರ್ತು ಮಾಧ್ಯಮಗೋಷ್ಠಿ ಕರೆದು ಮಾಹಿತಿ ನೀಡುತ್ತಿದ್ದರು. ಹೀಗಾಗಿ, ಈ ತಂತ್ರದ ಹಿಂದೆ ಬಿಜೆಪಿಗೆ ಮಸಿ ಬಳಿಯುವ ದುರುದ್ದೇಶವಿದೆ ಎನ್ನುವುದು ಸ್ಪಷ್ಟಎಂದು ಪ್ರಕಟಣೆ ಮೂಲಕ ಕಿಡಿಕಾರಿದ್ದಾರೆ.

ಒಂದು ವೇಳೆ ಈ ಆಡಿಯೋ ಸತ್ಯ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದರೂ ಮುಖ್ಯಮಂತ್ರಿಗಳು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಇಲ್ಲವೇ ಮುಖ್ಯಮಂತ್ರಿಗಳು ತಮ್ಮ ಲೋಪ ಒಪ್ಪಿಕೊಂಡು ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

click me!