
ಬೆಂಗಳೂರು(ಎ.28): ಬಿ.ಎಸ್ ಯಡಿಯೂರಪ್ಪ ಹಾಗೂ ಕೆಎಸ್ ಈಶ್ವರಪ್ಪ ನಡುವಿನ ಬಹಿರಂಗ ಸಮರದಿಂದ ಇದೀಗ ಬಿಜೆಪಿ ಒಡೆದ ಮನೆಯಾಗಿದೆ. ಶಿಸ್ತಿನ ಪಕ್ಷದಲ್ಲಿ ಅಶಿಸ್ತು ತಾಂಡವಾಡ್ತಿದೆ. ಈ ಬಹಿರಂಗ ಕಿತ್ತಾಟದಿಂದ ಯಾರಿಗೆ ಲಾಭವಾಗುತ್ತದೆ? ಯಾರಿಗೆ ನಷ್ಟವಾಗುತ್ತೆ? ಈಶ್ವರಪ್ಪರಿಗೆ ಬೆಂಬಲ ನೀಡುತ್ತಿರುವವರು ಯಾರು? ಈ ಕುರಿತಾದ ವರದಿ ಇಲ್ಲಿದೆ
ಈಶ್ವರಪ್ಪ, ಯಡಿಯೂರಪ್ಪ ನಡುವೆ ಬಹಿರಂಗ ಸಮರ
ಬಿ.ಎಸ್ ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ಅಂದರೆ ಬಿಜೆಪಿಯ ಜೋಡೆತ್ತು ಅಂತಾ ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ಕೆಲ ದಿನಗಳಿಂದ ಈ ಇಬ್ಬರು ನಾಯಕರು ಹಾವು-ಮುಂಗುಸಿಯಂತಾಗಿದ್ದಾರೆ. ಬ್ರಿಗೇಡ್ ಶುರುವಾದಾಗಿನಿಂದ ಇವರಿಬ್ಬರ ಸಂಬಂಧ ಹಳಸುತ್ತಲೇ ಬಂದಿದೆ. ಇದನ್ನು ನೋಡಿದರೆ ಬಿಜೆಪಿ ಪಕ್ಷ ಮತ್ತೆ ಇಬ್ಭಾಗದ ಹಾದಿ ಹಿಡಿದಿದೆಯಾ ಅನ್ನೋ ಪ್ರಶ್ನೆಯೂ ಎದ್ದಿದೆ. ಪಕ್ಷದ ನಿಷ್ಠರಿಗೆ ಮಣೆ ಹಾಕದಿದ್ದರೆ ನಿಮ್ಮ ಅಧ್ಯಕ್ಷ ಖುರ್ಚಿ ಅಲ್ಲಾಡುತ್ತದೆ ಎನ್ನುವ ಎಚ್ಚರಿಕೆಯನ್ನು ಈಶ್ವರಪ್ಪ ನೀಡಿದ್ದರೆ, 'ಸುಮ್ಮನಿದ್ದರೆ ಪಕ್ಷದಲ್ಲಿ ಇರಿ. ಇಲ್ಲವಾದಲ್ಲಿ ಪಕ್ಷ ಬಿಟ್ಟು ತೊಲಗಿ' ಎನ್ನುವ ಸಂದೇಶವನ್ನು ಬಿಎಸ್ವೈ ರವಾನಿಸಿದ್ದಾರೆ.
ಬಿಎಸ್ವೈ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿರುವ ಹಿಂದೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರ ಬೆಂಬಲ ಇದೆ ಎಂದು ಹೇಳಲಾಗುತ್ತಿದೆ. ಖುದ್ದು ಯಡಿಯೂರಪ್ಪ ಅವರೇ ಈ ಮಾತು ಹೇಳಿದ್ದಾರೆ. ಇನ್ನೂ ಇವತ್ತಿನ ಸಭೆ ಮೂಲಕ ಈಶ್ವರಪ್ಪ ಪಕ್ಷದ ಅಧ್ಯಕ್ಷ ಹಾಗೂ ಸಿಎಂ ಸ್ಥಾನಕ್ಕೆ ನಾನು ರೆಡಿ ಎನ್ನುವ ಸಂದೇಶವನ್ನು ರವಾನಿಸುವ ಮೂಲಕ ಯಡಿಯೂರಪ್ಪನವರೇ ಸೂಕ್ತ ಸಮಯದಲ್ಲಿ ಸೂಕ್ತ ಏಟು ಕೊಡಬಲ್ಲೆ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ. ಈ ಬಗ್ಗೆ ಹೈಕಮಾಂಡ್ ಮೌನವಹಿಸಿದ್ದು ಈಶ್ವರಪ್ಪಗೆ ಬಲ ತಂದಿದೆ ಎನ್ನಬಹುದು. ಅಂದರೆ ಪಕ್ಷ ಮತ್ತು ಸಂಘ ಈಶ್ವರಪ್ಪ ಪರವಾಗಿ ನಿಂತಿದ್ದರೆ, ಬಿಎಸ್ವೈ ಪರ ಕೇವಲ ಅವರ ಬೆಂಬಲಿಗರು ಮಾತ್ರ ನಿಂತಿದ್ದಾರೆ. ಮುಂದಿನ ದಿನದಲ್ಲಿ ಯಾರಿಗೆ ಲಾಭವಾಗುತ್ತೆ - ಯಾರಿಗೆ ನಷ್ಟವಾಗುತ್ತದೆ ಎನ್ನುವ ಕುತೂಹಲ ಪಕ್ಷದಲ್ಲಿ ಮನೆ ಮಾಡಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.