
ಬೆಂಗಳೂರು(ಡಿ. 17): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದೇವೇಗೌಡರ ಕುಟುಂಬದಿಂದ ಇಬ್ಬರಷ್ಟೇ ಸ್ಪರ್ಧಿಸಲಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ತಾವು ಮತ್ತು ರೇವಣ್ಣ ಇಬ್ಬರಷ್ಟೇ ಚುನಾವಣಾ ಕಣಕ್ಕೆ ಇಳಿಯುತ್ತೇವೆ ಎಂದು ಹೆಚ್.ಡಿ.ಕೆ ಶನಿವಾರ ಸ್ಪಷ್ಟಪಡಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ತಮ್ಮ ಪತ್ನಿ ಅಥವಾ ಮಕ್ಕಳು ಯಾರೂ ಕೂಡ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ ಇವರಾರೂ ಕೂಡ ಚುನಾವಣೆಯಲ್ಲಿ ನೇರವಾಗಿ ಕಣಕ್ಕಿಳಿಯುವುದಿಲ್ಲ ಎಂದು ಹೆಚ್'ಡಿಕೆ ಹೇಳಿದ್ದಾರೆ.
ಆದರೆ, ಲೋಕಸಭೆ ಚುನಾವಣೆಗೆ ಗೌಡರ ಕುಟುಂಬದಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ಕುಮಾರಸ್ವಾಮಿ ನಿರಾಕರಿಸಿದರು. ಲೋಕಸಭೆ ಚುನಾವಣೆಗೆ ಇನ್ನೂ ಸಮಯ ಇದೆ. ಆ ಸಂದರ್ಭ ಬಂದರೆ ಪರಿಸ್ಥಿತಿ ನೋಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಜೆಡಿಎಸ್ ಪಕ್ಷವು ದೇವೇಗೌಡರ ಕೌಟುಂಬಿಕ ಪಕ್ಷವಾಗುತ್ತಿದೆ ಎಂಬ ಆರೋಪ ಬಹಳ ಕಾಲದಿಂದ ಕೇಳಿಬರುತ್ತಿದೆ. ಹೆಚ್.ಡಿ.ಕುಮಾರಸ್ವಾಮಿ, ರೇವಣ್ಣ ಹಾಗೂ ಅನಿತಾ ಕುಮಾರಸ್ವಾಮಿ ಈಗಾಗಲೇ ರಾಜಕಾರಣದಲ್ಲಿ ಅನುಭವಿಗಳಾಗಿದ್ದಾರೆ. ಭವಾನಿ ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಕೂಡ ರಾಜಕಾರಣಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಜೆಡಿಎಸ್ ಪಕ್ಷದಿಂದ ಮುಖಂಡರು ಇನ್ನಷ್ಟು ದೂರ ಸರಿಯುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ದೇವೇಗೌಡರೂ ಕೂಡ ಡ್ಯಾಮೇಜ್ ಕಂಟ್ರೋಲ್'ಗೆ ಪ್ರಯತ್ನಿಸಿದ್ದಾರೆ. ತಮ್ಮ ಇಬ್ಬರು ಮಕ್ಕಳು ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದವರೇ ಹೊರತು, ತಾನು ಅವರನ್ನು ಕರೆತಂದಿರಲಿಲ್ಲ ಎಂದು ದೇವೇಗೌಡರು ಇಂದು ಹೇಳಿಕೆ ಕೊಟ್ಟಿರುವುದು ಗಮನಾರ್ಹ. ಅಷ್ಟೇ ಅಲ್ಲ, ಪಕ್ಷದಿಂದ ಹೊರಹೋಗಿರುವ ಮುಖಂಡರ ಕಾಲಿಗೆ ಬಿದ್ದಾದರೂ ಅವರನ್ನು ವಾಪಸ್ ಪಕ್ಷಕ್ಕೆ ಕರೆತರುತ್ತೇನೆ ಎಂದು ಇದೇ ವೇಳೆ ದೇವೇಗೌಡರು ಹೇಳಿರುವುದೂ ಕೂಡ ಗಮನಿಸಬೇಕಾದ ಸಂಗತಿ.
ಸಿದ್ದರಾಮಯ್ಯ, ಪಿಜಿಆರ್ ಸಿಂದ್ಯ ಸೇರಿದಂತೆ ಹಲವು ಮುಖಂಡರು ದೇವೇಗೌಡರದ್ದು ಕೌಟುಂಬಿಕ ರಾಜಕಾರಣ ಎಂದು ಆಪಾದಿಸಿದಿ ಜೆಡಿಎಸ್'ನಿಂದ ದೂರ ಸರಿದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.