
ಬೆಂಗಳೂರು: ನೋಟು ಅಮಾನ್ಯದಂತಹ ನಿರ್ಧಾರಗಳನ್ನು ಸರ್ವಾಧಿಕಾರಿ ಸರ್ಕಾರಗಳು ಮಾತ್ರ ಮಾಡಲು ಸಾಧ್ಯ. ಕೇಂದ್ರ ಸರ್ಕಾರ ರಾಜಕೀಯ ಲಾಭಕ್ಕಾಗಿ ನೋಟು ಅಮಾನ್ಯ ಮಾಡಿ ಜನರಿಗೆ ತೊಂದರೆ ಮಾಡಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸಚಿವಾಲಯ ನೌಕರರ ಸಹಕಾರ ಸಂಘ ಶುಕ್ರವಾರ ಏರ್ಪಡಿಸಿದ್ದ ‘ಕೇಂದ್ರ ಸರ್ಕಾರದ ನೋಟು ಅಮಾನ್ಯದಿಂದ ಸಹಕಾರಿ ಸಂಸ್ಥೆಗಳ ಮೇಲೆ ಮತ್ತು ಸಹಕಾರಿ ಚಳವಳಿಗಳ ಮೇಲೆ ಆದ ಪರಿಣಾಮ' ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ನೋಟು ಅಮಾನ್ಯದಂತಹ ನಿರ್ಧಾರಗಳನ್ನು ಯಾವುದೇ ಪ್ರಜಾಪ್ರಭುತ್ವ ಸರ್ಕಾರಗಳು ಮಾಡುವುದಿಲ್ಲ. ಬದಲಾಗಿ ಅಥಾರಿಟೇರಿಯನ್ (ಸರ್ವಾಧಿಕಾರ) ಸರ್ಕಾರ ಮಾತ್ರ ಮಾಡಲು ಸಾಧ್ಯ. ನೋಟು ಮಾನ್ಯತೆ ರದ್ದು ಮಾಡುವ ನೀತಿಗಳು ಸರ್ಕಾರದ ಅರ್ಥ ವ್ಯವಸ್ಥೆಯ ವಿಶ್ವಾಸವನ್ನೇ ಅಣಕಿಸುವಂತದ್ದು. ಇದು ಅರ್ಥ ವ್ಯವಸ್ಥೆ ಮೇಲೆ ಕೆಟ್ಟಪರಿಣಾಮ ಬೀರುತ್ತದೆ ಎಂದು ಪ್ರಸಿದ್ಧ ಅರ್ಥಶಾಸ್ತ್ರಜ್ಞ, ನೋಬೆಲ್ ಪುರಸ್ಕೃತ ಅಮತ್ರ್ಯ ಸೇನ್ ಅವರು ಹೇಳಿದ್ದರು ಎಂದು ಸಿದ್ದರಾಮಯ್ಯ ಉಲ್ಲೇಖಿಸಿದರು.
ದೇಶದಲ್ಲಿನ ಭ್ರಷ್ಟಾಚಾರ, ಕಪ್ಪು ಹಣ ಮತ್ತು ಖೋಟಾನೋಟು ತಡೆಯಲು ನೋಟು ಮಾನ್ಯತೆ ರದ್ದು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸಮರ್ಥನೆ ನೀಡಿತ್ತು. ಅಂದರೆ ಈಗ ಕಪ್ಪು ಹಣ, ಖೋಟಾ ನೋಟು ಮತ್ತು ಭ್ರಷ್ಟಾಚಾರ ಕಡಿಮೆಯಾಗಿದೆಯೇ? ನೋಟು ಅಮಾನ್ಯದಿಂದ ಒಟ್ಟಾರೆ ವಾಪಸ್ ಬಂದಿರುವ ರೂ.17.6 ಲಕ್ಷ ಕೋಟಿ ಹಳೆ ನೋಟುಗಳ ಪೈಕಿ ಖೋಟಾ ನೋಟು ಸಿಕ್ಕಿದ್ದು ಬರೀ ರೂ. 40 ಲಕ್ಷ ಮಾತ್ರ. ಅಂದರೆ ಕೇಂದ್ರ ಸರ್ಕಾರ ನೋಟು ಅಮಾನ್ಯದಿಂದ ಏನು ಸಾಧಿಸಿದಂತಾಯಿತು ಎಂದು ಟೀಕಿಸಿದರು.
ನೋಟು ಅಮಾನ್ಯ ಘೋಷಣೆ ನಂತರ ಗೋವಾದಲ್ಲಿ ಪ್ರಧಾನ ಮಂತ್ರಿ ಭಾಷಣ ಮಾಡುತ್ತಾ, ನೋಟು ಮಾನ್ಯತೆ ರದ್ದು ಪರಿಣಾಮ ಕಪ್ಪು ಹಣ ಇರುವವರಿಗೆ ನಡುಕ ಬಂದಿದೆ ಎಂದರು. ಆದರೆ ನಿಜಕ್ಕೂ ನಡುಗಿದವರು. ಕಷ್ಟಪಟ್ಟವರು, ಪರದಾಡಿದವರು ಬಡವರು, ಸಣ್ಣಪುಟ್ಟ ವ್ಯಾಪಾರಿಗಳು, ರೈತರು ಮಾತ್ರ. 100 ಕ್ಕೂ ಹೆಚ್ಚು ಮಂದಿ ಸತ್ತರು. ಕಪ್ಪು ಹಣ ಹೊಂದಿದ್ದ ಶ್ರೀಮಂತರು ಯಾರಾದರೂ ಸತ್ತಿದ್ದರೇ ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.