
ಬೆಂಗಳೂರು: ಮೆಟ್ರೋ ರೈಲು ನಿಲ್ದಾಣದಲ್ಲಿ ಅಳವಡಿಸಿರುವ ಹಿಂದಿ ನಾಮಫಲಕಗಳನ್ನು ಒಂದು ವಾರದೊಳಗೆ ತೆರವುಗೊಳಿಸದಿದ್ದರೆ ಸಂಘಟನೆಯಿಂದಲೇ ನಾಮಫಲಕಗಳನ್ನು ಕಿತ್ತೆಸೆಯಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ಮೆಟ್ರೋ ರೈಲು ನಿಲ್ದಾಣಗಳಲ್ಲಿ ಹಿಂದಿ ನಾಮಫಲಕ ಅಳವಡಿಸಿರುವುದನ್ನು ಖಂಡಿಸಿ ಬೆಂಗಳೂರಿನ ಶಾಂತಿನಗರದ ಬಿಎಂಆರ್‌ಸಿಎಲ್ ಕಚೇರಿ ಮುಂಭಾಗ ಶುಕ್ರವಾರ ಸಂಘಟನೆ ವತಿಯಿಂದ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಹಿಂದಿ ನಾಮಫಲಕ ತೆರವುಗೊಳಿಸಬೇಕು, ಹಿಂದಿ ಹೇರಿಕೆ ನಿಯಮ ವಾಪಸ್ ಪಡೆಯದಿದ್ದಲ್ಲಿ ಕಾನೂನು ಕೈಗೆತ್ತಿಕೊಳ್ಳಲು ಸಂಘಟನೆ ಸಿದ್ಧ. ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರ ನೆಪದಲ್ಲಿ ಕನ್ನಡವನ್ನು ನಿರ್ಲಕ್ಷಿಸುತ್ತಿದೆ. ಕೇಂದ್ರ ಸರ್ಕಾರವು ಹಿಂದಿ ಅಳವಡಿಸಿಕೊಳ್ಳುವಂತೆ 2016ರಲ್ಲಿ ಪತ್ರ ಬರೆದಿದೆ. ಆದರೆ, ಇಲ್ಲಿನ ಸ್ಥಳೀಯ ಅಧಿಕಾರಿಗಳು 2011ರಿಂದಲೇ ಹಿಂದಿ ಮೇಲಿನ ಭಾಷಾಭಿಮಾನ ಮತ್ತು ಪ್ರೇಮವನ್ನು ಕನ್ನಡಿಗರ ಮೇಲೆ ಹೇರುತ್ತಿದ್ದಾರೆ. ಉತ್ತರ ಭಾರತದ ಭಾಷೆಯನ್ನು ರಾಷ್ಟ್ರ ಭಾಷೆ ನೆಪದಲ್ಲಿ ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಗಳ ಮೇಲೆ ಒತ್ತಾಯಪೂರ್ವಕವಾಗಿ ಹೇರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತ್ರಿಭಾಷಾ ಸೂತ್ರ ಅಗತ್ಯವಿಲ್ಲ: ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಪ್ರಾದೇಶಿಕ ಭಾಷೆ ಜತೆ ಇಂಗ್ಲಿಷ್ ಅಳವಡಿಸಿಕೊಳ್ಳುವ ಮೂಲಕ ಹಲವು ರಾಜ್ಯಗಳಲ್ಲಿ ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳಲಾಗಿದೆ. ಹೀಗಿರುವಾಗ ರಾಜ್ಯದಲ್ಲೇಕೆ ತ್ರಿಭಾಷಾ ಸೂತ್ರ? ನಮಗೆ ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳುವ ಅನಿವಾರ್ಯತೆ ಇಲ್ಲ. ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹಿಂದಿ ರಾಷ್ಟ್ರ ಭಾಷೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಅದು ಕೇವಲ ಸಂಪರ್ಕ ಭಾಷೆಯಾಗಿದೆ. ಇಂದು ಹಿಂದಿಗೆ ಅವಕಾಶ ಕಲ್ಪಿಸಿದರೆ ಭವಿಷ್ಯದಲ್ಲಿ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆ ಅಳವಡಿಸುವಂತೆ ಕೇಳುವುದಿಲ್ಲ ಎಂಬುದಕ್ಕೆ ಏನು ಖಾತ್ರಿ. ನಮ್ಮ ಮೆಟ್ರೋಗೆ ಕರ್ನಾಟಕದ ಹಾಗೂ ಕನ್ನಡಿಗರ ಹಣ ಹೂಡಿಕೆಯಾಗಿದೆ. ಹೀಗಾಗಿ, ಕನ್ನಡವನ್ನೇ ಬಳಕೆ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರಕ್ಕೆ ಪತ್ರ: ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಖರೋಲಾ, ಹಿಂದಿ ಬಳಕೆಯನ್ನು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಬಳಸಲಾಗುತ್ತಿದೆ. ಈ ಕುರಿತು
ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಪರಿಸ್ಥಿತಿ ವಿವರಿಸುತ್ತೇವೆ. ನಂತರ ಕೇಂದ್ರದ ಸೂಚನೆಯಂತೆ ನಡೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕರವೇ ಕಾರ್ಯಕರ್ತರು ಹಿಂದಿ ಹೇರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.