ಬೆಂಗ್ಳೂರು ಏರ್‌ಪೋರ್ಟಲ್ಲಿ ಬಾಂಬ್‌ ನಿಗ್ರಹ ವ್ಯವಸ್ಥೆ ಇಲ್ಲ!

By Suvarna Web DeskFirst Published Apr 10, 2018, 7:46 AM IST
Highlights

ದೇಶದ ಅತ್ಯುತ್ತಮ ವಿಮಾನ ನಿಲ್ದಾಣಗಳಲ್ಲೊಂದು ಎಂಬ ಹೆಗ್ಗಳಿಕೆ ಪಡೆದಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆ ಮತ್ತು ನಿಷ್ಕ್ರೀಯ ವ್ಯವಸ್ಥೆಯೇ ಇಲ್ಲ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ನವದೆಹಲಿ: ದೇಶದ ಅತ್ಯುತ್ತಮ ವಿಮಾನ ನಿಲ್ದಾಣಗಳಲ್ಲೊಂದು ಎಂಬ ಹೆಗ್ಗಳಿಕೆ ಪಡೆದಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆ ಮತ್ತು ನಿಷ್ಕ್ರೀಯ ವ್ಯವಸ್ಥೆಯೇ ಇಲ್ಲ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಬೆಂಗಳೂರೊಂದೇ ಅಲ್ಲ, ದೇಶದ ಬಹುತೇಕ ವಿಮಾನ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿಲ್ಲ. ಕೇವಲ ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಕೊಚ್ಚಿ ಮತ್ತು ಹೈದರಾಬಾದ್‌ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಈ ವ್ಯವಸ್ಥೆಯಿದೆ.

ಸಾರ್ವಜನಿಕ ಸ್ಥಳಗಳ ಭದ್ರತಾ ವ್ಯವಸ್ಥೆ ಬಗ್ಗೆ ದಿನೇದಿನೇ ಕಳಕಳಿ ಹೆಚ್ಚುತ್ತಿದ್ದರೂ ಅತಿಹೆಚ್ಚು ಭದ್ರತೆಯಿರಬೇಕಾದ ವಿಮಾನ ನಿಲ್ದಾಣಗಳಲ್ಲೇ ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ವಿಚಾರ ಸಾರ್ವಜನಿಕ ವಲಯದಲ್ಲಿ ಆಘಾತ ಮೂಡಿಸಿದೆ.

ದೇಶದ 59 ಪ್ರಮುಖ ವಿಮಾನ ನಿಲ್ದಾಣಗಳಿಗೆ ಕೇಂದ್ರೀಯ ಔದ್ಯೋಗಿಕ ಭದ್ರತಾ ಪಡೆ (ಸಿಐಎಸ್‌ಎಫ್‌) ಭದ್ರತೆ ಒದಗಿಸುತ್ತಿದೆ. ಈ ವಿಮಾನ ನಿಲ್ದಾಣಗಳ ಪೈಕಿ ಎಷ್ಟುವಿಮಾನ ನಿಲ್ದಾಣಗಳಲ್ಲಿ ಬಾಂಬ್‌ ಪತ್ತೆ ಮತ್ತು ನಿಷ್ಕ್ರೀಯ ವ್ಯವಸ್ಥೆಯಿದೆ ಎಂದು ಇತ್ತೀಚೆಗೆ ಸಿಐಎಸ್‌ಎಫ್‌ ಪರಿಶೀಲನೆ ನಡೆಸಿತ್ತು. ಆಗ ಕೇವಲ ಆರು ವಿಮಾನ ನಿಲ್ದಾಣಗಳಲ್ಲಿ ಮಾತ್ರ ಪೂರ್ಣ ಪ್ರಮಾಣದ ಬಾಂಬ್‌ ಪತ್ತೆ ಮತ್ತು ನಿಷ್ಕ್ರೀಯ ವ್ಯವಸ್ಥೆಯಿದೆ, ಬೆಂಗಳೂರೂ ಸೇರಿದಂತೆ ಇನ್ನಿತರ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದು ತಿಳಿದು ಬಂದಿದೆ.

ಬಾಂಬ್‌ ಪತ್ತೆಹಚ್ಚಲು ಮತ್ತು ನಿಷ್ಕ್ರೀಯ ಗೊಳಿಸಲು ವಿಮಾನ ನಿಲ್ದಾಣಗಳಲ್ಲಿ 28 ಮಾದರಿಯ ಉಪಕರಣಗಳು ಬೇಕಾಗುತ್ತವೆ. ಇವುಗಳ ಪೈಕಿ ಒಂದು ಉಪಕರಣ ಇಲ್ಲದಿದ್ದರೂ ಬಾಂಬ್‌ ಪತ್ತೆ ಮತ್ತು ನಿಷ್ಕ್ರೀಯ ಸಾಧ್ಯವಿಲ್ಲ. ಈ ಬಗ್ಗೆ ನಾವು ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆ (ಬಿಸಿಎಎಸ್‌)ಗೆ ಮಾಹಿತಿ ನೀಡಿದ್ದು, ಆದಷ್ಟುಬೇಗ ಎಲ್ಲಾ ಉಪಕರಣಗಳನ್ನು ಒದಗಿಸಲು ಮನವಿ ಮಾಡಿದ್ದೇವೆ ಎಂದು ಸಿಐಎಸ್‌ಎಫ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೇಶದಲ್ಲಿರುವ 98 ವಿಮಾನ ನಿಲ್ದಾಣಗಳ ಪೈಕಿ 59 ವಿಮಾನ ನಿಲ್ದಾಣಗಳಿಗೆ ಸಿಐಎಸ್‌ಎಫ್‌ ಭದ್ರತೆ ನೀಡುತ್ತದೆ. ವಿಮಾನ ನಿಲ್ದಾಣ, ಬಂದರು, ವಿದ್ಯುತ್‌ ಉತ್ಪಾದನಾ ಘಟಕ, ಅಣುಸ್ಥಾವರ ಮುಂತಾದ ಸೂಕ್ಷ್ಮ ಸರ್ಕಾರಿ ಕಟ್ಟಡಗಳಿಗೆ ಭದ್ರತೆ ನೀಡುವುದಕ್ಕೆಂದೇ 1969ರಲ್ಲಿ ಸಿಐಎಸ್‌ಎಫ್‌ ಸ್ಥಾಪಿಸಲಾಗಿದೆ.

ಬಾಂಬ್‌ ನಿಷ್ಕ್ರೀಯ ವ್ಯವಸ್ಥೆಯಿರುವ ವಿಮಾನ ನಿಲ್ದಾಣಗಳು

1. ದೆಹಲಿ

2. ಮುಂಬೈ

3. ಚೆನ್ನೈ

4. ಕೊಲ್ಕತ್ತಾ

5. ಕೊಚ್ಚಿ

6. ಹೈದರಾಬಾದ್‌

click me!