
ಬೆಂಗಳೂರು : ಬಿಯರ್ ಕೊಡಲು ನಿರಾಕರಿಸಿದ ಕಾರಣಕ್ಕೆ ಕೋಪಗೊಂಡು ಓಲಾ ಕ್ಯಾಬ್ ಚಾಲಕನೊಬ್ಬನಿಗೆ ಚಾಕುವಿನಿಂದ ಇರಿದು ಕೊಂದು ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ನಾಗವಾರಪಾಳ್ಯ ಸಮೀಪ ನಡೆದಿದೆ.
ಲಗ್ಗೆರೆ ನಿವಾಸಿ ಮೋಹನ್ (29) ಹತ್ಯೆಯಾದ ದುರ್ದೈವಿ. ತನ್ನ ಸ್ನೇಹಿತ ಸಂದೀಪ್ ಜತೆ ಸೋಮವಾರ ರಾತ್ರಿ ನಾಗವಾರಪಾಳ್ಯ ಸಮೀಪ ಬಾರ್‌ನಲ್ಲಿ ಮದ್ಯ ಸೇವಿಸಿ ಮೋಹನ್ ಮರಳುವಾಗ ಈ ಘಟನೆ ನಡೆದಿದೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟವಿ ಕ್ಯಾಮೆರಾ ದೃಶ್ಯಾವಳಿ ವಶಕ್ಕೆ ಪಡೆದು ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಮೋಹನ್ ಅರಸಿಕೆರೆ ತಾಲೂಕಿನವರಾಗಿದ್ದು, ಹಲವು ದಿನಗಳಿಂದ ಲಗ್ಗೆರೆಯಲ್ಲಿ ಆತ ನೆಲೆಸಿದ್ದ. ಓಲಾ ಸಂಸ್ಥೆಯ ಕ್ಯಾಬ್ ಚಾಲಕನಾಗಿದ್ದ ಮೋಹನ್, ರಾತ್ರಿ ತನ್ನ ಗೆಳೆಯ ಸಂದೀಪ್ ಜತೆ ನಾಗವಾರದ ಬಾರ್‌ಗೆ ಮದ್ಯ ಸೇವನೆಗೆ ಹೋಗಿದ್ದರು. ಅಲ್ಲಿ ಪಾನಮತ್ತರಾದ ಅವರು, ಮನೆಗೆ ಬಿಯರ್ ಮತ್ತು ಊಟ ತೆಗೆದುಕೊಂಡು ತೆರಳುತ್ತಿದ್ದರು. ಆಗ ಮಾರ್ಗ ಮಧ್ಯೆ ಅವರಿಗೆ ನಾಲ್ವರು ಕಿಡಿಗೇಡಿಗಳು ಎದುರಾಗಿದ್ದಾರೆ. ಮೋಹನ್ ಕೈಯಲ್ಲಿ ಮದ್ಯದ ಬಾಟಲ್ ನೋಡಿದ ದುಷ್ಕರ್ಮಿಗಳು, ಬಿಯರ್ ಕೊಡುವಂತೆ ಸೂಚಿಸಿದ್ದರು. ಆದರೆ ಮದ್ಯದ ಅಮಲಿನಲ್ಲಿದ್ದ ಮೋಹನ್, ಆರೋಪಿಗಳ ಕೋರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾನೆ. ಆಗ ಆರೋಪಿಗಳು ಮತ್ತು ಮೋಹನ್ ಹಾಗೂ ಸಂದೀಪ್ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಈ ಹಂತದಲ್ಲಿ ಕೆರಳಿದ ದುಷ್ಕರ್ಮಿಗಳು, ಮೋಹನ್‌ಗೆ ಚಾಕುವಿನಿಂದ ಇರಿದು ಓಡಿ ಹೋಗಿದ್ದಾರೆ. ಕೂಡಲೇ ಗಾಯಾಳುವನ್ನು ಸಂದೀಪ್ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಚಿಕಿತ್ಸೆ ಫಲಿಸದೆ ಮೋಹನ್ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಸಂಬಂಧ ಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.