ನೀರು ಕಣ್ಣೀರು: ಚಿತ್ರದುರ್ಗದಲ್ಲಿ ನೀರಿನ ಹಾಹಾಕಾರ; ಅಧಿಕಾರಿಗಳು ನಿರಾಳ!

By Suvarna Web DeskFirst Published Feb 17, 2017, 2:12 AM IST
Highlights

ಬಂದು ಕುಳಿತರೆ ನೀರು ಬರುತ್ತೆ ಅನ್ನೋ ಗ್ಯಾರಂಟಿಯಿಲ್ಲ. ಅಕಸ್ಮಾತ್ ಹೊರ ಹೋದಾಗ ನೀರು ಬಂದುಬಿಟ್ಟರೆ? ಅದೊಂದೇ ಕಾರಣಕ್ಕಾಗಿ ಇಲ್ಲಿನ ಜನ ನೀರು ಬರದ ನಲ್ಲಿಯ ಬಳಿಯೇ ಕಾವಲು ಕಾಯುತ್ತಾರೆ.

ಚಿತ್ರದುರ್ಗ (ಫೆ.17):  ಒಂದು ಹೊಲಸು ರಾಜಕಾರಣ ಒಂದು ಊರಿನಲ್ಲಿ ಏನೇನೆಲ್ಲ ಸಮಸ್ಯೆ ಸೃಷ್ಟಿಸಬಹುದು. ಅಧಿಕಾರಿಗಳ ಅಸಡ್ಡೆ, ಬೇಜವಾಬ್ದಾರಿ, ಹಳ್ಳಿಗರಿಗೆ ಹೇಗೆಲ್ಲ ನರಕ ದರ್ಶನ ಮಾಡಿಸಬಹುದು ಎಂಬುವುದಕ್ಕೆ ಉದಾಹರಣೆ ನೋಡಬೇಕಾದರೆ ನೀವು ಚಿತ್ರದುರ್ಗದ ಹುಣಸೆಕಟ್ಟೆ ಗ್ರಾಮಕ್ಕೆ ಹೋಗಬೇಕು.

ನೀರು ಕಣ್ಣೀರು ಅಭಿಯಾನದಲ್ಲಿ ಸುವರ್ಣ ನ್ಯೂಸ್ ಆ ಗ್ರಾಮಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಕಂಡ ಚಿತ್ರಣ ಬೆಚ್ಚಿ ಬೀಳಿಸುವಂತಿದೆ.
ತಳ್ಳುವ ಗಾಡಿಯಲ್ಲಿ ಬಿಂದಿಗೆ ತುಂಬಿಕೊಂಡು ಓಡಾಡುವ ಮಹಿಳೆಯರ ಮಾತುಗಳು ಸಾಕು ಚಿತ್ರದುರ್ಗ ಜಿಲ್ಲೆಯ ಪರಿಸ್ಥಿತಿ ಏನು ಅನ್ನೋದನ್ನ ವಿವರಿಸಲು.

ಹುಣಸೆಕಟ್ಟೆ ಗ್ರಾಮದಲ್ಲಿ, ಮಾರುಕಟ್ಟೆಗಳಲ್ಲಿ ಹಮಾಲಿಗಳು ಮೂಟೆ ಹೊತ್ತೊಯ್ಯೋಕೆ ಬಳಸುವಂತಹ ತಳ್ಳುಗಾಡಿಗಳನ್ನು ಇಲ್ಲಿನ ಜನ ನೀರಿಗಾಗಿ ಮಾಡಿಕೊಂಡಿದ್ದಾರೆ.

ಬಂದು ಕುಳಿತರೆ ನೀರು ಬರುತ್ತೆ ಅನ್ನೋ ಗ್ಯಾರಂಟಿಯಿಲ್ಲ. ಅಕಸ್ಮಾತ್ ಹೊರ ಹೋದಾಗ ನೀರು ಬಂದುಬಿಟ್ಟರೆ? ಅದೊಂದೇ ಕಾರಣಕ್ಕಾಗಿ ಇಲ್ಲಿನ ಜನ ನೀರು ಬರದ ನಲ್ಲಿಯ ಬಳಿಯೇ ಕಾವಲು ಕಾಯುತ್ತಾರೆ.

ಈ ಊರಲ್ಲಿ ನೀರು ಬಿಡೋದು ರಾತ್ರಿ 10ರಿಂದ ಮಧ್ಯರಾತ್ರಿ ಎರಡು ಗಂಟೆ ವೇಳೆಯಲ್ಲಿ. ಜನರು ಆ ಹೊತ್ತಿನಲ್ಲಿ ನಿದ್ರೆ ಬಿಟ್ಟು ನೀರು ಹಿಡೀತಾರೆ. ಈ ಊರಲ್ಲಿ ನೀರಿನ ಟ್ಯಾಂಕುಗಳಿವೆ ಆದರೆ ಆ ಟ್ಯಾಂಕುಗಳಿಗೆ ನೀರು ಬಿಡಲ್ಲ! ಕಾರಣ ಏನೆಂದು ಹುಡುಕಿದಾಗ ಉತ್ತರವಾಗಿ ಸಿಗೋದು ಹೊಲಸು ರಾಜಕಾರಣ!
ಅದಕ್ಕಿಂತ ದುರಂತ ಇನ್ನೊಂದಿದೆ. ನೀರು ಇರುವ ಬೋರ್'​ವೆಲ್​ಗೆ ಊರಿನ ಬುದ್ದಿವಂತರು ಎರಡೆರಡು ಅಳತೆಯ ಪೈಪುಗಳನ್ನು ಹಾಕಿ, ಇದ್ದ ನೀರೂ ಬರದಂತೆ ಮಾಡಿ ಕುಳಿತಿದ್ದಾರೆ. ಇಲ್ಲಿ ಸರ್ಕಾರ ಅನ್ನೋದು ಸಣ್ಣ ಮಟ್ಟದ ಕೆಲಸ ಮಾಡಿದರೂ ಸಮಸ್ಯೆ ಇರಲ್ಲ. ಅದನ್ನು ಸುವರ್ಣ ನ್ಯೂಸ್ ಅಧಿಕಾರಿಗಳ ಗಮನಕ್ಕೂ ತಂದಿದೆ. ಆದರೆ, ಆ ಅಧಿಕಾರಿಗಳಿಗೋ ವಾಸ್ತವದ ಪ್ರಜ್ಞೆಯೂ ಇಲ್ಲ. ಕೆಲಸ ಮಾಡಬೇಕು ಅನ್ನೋ ಸಾಮಾನ್ಯ ಜ್ಞಾನವೂ ಕೂಡಾ ಇಲ್ಲ. ಈಗಲೇ ಹೀಗೆ, ಮುಂದೆ ಹೇಗೋ..?

click me!