
ಬೆಂಗಳೂರು (ಸೆ.26): ಮುಟ್ಟಾದ ಮಹಿಳೆಯರು ಮೂರು ದಿನಗಳು ಗ್ರಾಮದಿಂದ ಹೊರಗಡೆಯೇ ಬದುಕಬೇಕಾದ ಅಮಾನವೀಯ, ಅನಿಷ್ಟ ಪದ್ದತಿಯೊಂದು ಮಲೆನಾಡು ಚಿಕ್ಕಮಗಳೂರಿನಲ್ಲಿ ಇನ್ನೂ ಜೀವಂತವಾಗಿದೆ. ಈ ಬಗ್ಗೆ ಸುವರ್ಣ ನ್ಯೂಸ್ ನಿನ್ನೆ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ವರದಿಗೆ ಸ್ಪಂದಿಸಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಮಹಿಳೆಯರ ಹಾಗೂ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡಿದರು.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಸ್, ಬಿದರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬಿ. ಗೊಲ್ಲರಹಟ್ಟಿ ಗ್ರಾಮದಲ್ಲಿ ಮುಟ್ಟಾದ ಮಹಿಳೆಯರು ಮೂರು ದಿನಗಳ ಕಾಲ ಗ್ರಾಮದಿಂದ ಹೊರಗಡೆ ಹೊಲಗಳಲ್ಲಿ ಕಾಲ ಕಳೆಯುವ ಅನಿಷ್ಟ ಪದ್ದತಿ ಈಗಲೂ ಜಾರಿಯಲ್ಲಿದೆ. ಮುಟ್ಟಾದ ಮೂರು ದಿನಗಳ ಕಾಲ ಹಾಗೂ ಮೊದಲ ಬಾರಿ ಋತುಮತಿಯಾದ ಒಂದು ವಾರಗಳ ಕಾಲ ಮಹಿಳೆಯರು ಹೊಲಗಳಲ್ಲಿ ಹಾಗೂ ಸಂಜೆಯಾದರೆ ಗ್ರಾಮದ ಶಾಲೆಯ ಕಟ್ಟೆಯ ಮೇಲೆಯೇ ಮಲಗಬೇಕಾಗಿತ್ತು. ಈ ಪದ್ದತಿ ಶತಮಾನಗಳಿಂದ ಇಂದಿಗೂ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಅನಿಷ್ಟ ಪದ್ದತಿಯ ಸಂಬಂಧ ನಿನ್ನೆ ಸುವರ್ಣ ನ್ಯೂಸ್ ವಿಸ್ತೃತ ವರದಿ ಪ್ರಸಾರಮಾಡಿತ್ತು. ಈ ಸಂಬಂಧ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸುವತ್ತ ಗಮನ ನೀಡಿದರು.
ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿದ ಕೂಡಲೇ ಕೆಲ ಮಹಿಳೆಯರು ಕಣ್ಮರೆಯಾದರು. ಈ ವೇಳೆ ಅಧಿಕಾರಿಗಳು ಮಹಿಳೆಯರ ಮನವೊಲಿಸುವ ಪ್ರಯತ್ನ ಮಾಡಿದರು. ಈ ವೇಳೆ ಗ್ರಾಮದ ಸಮುದಾಯ ಭವನದಲ್ಲಿ ಮಹಿಳೆಯರು ಹಾಗೂ ಊರಿನ ಗ್ರಾಮಸ್ಥರ ಜೊತೆ ಚರ್ಚೆ ನಡೆಸಲಾಯಿತು. ಈ ವೇಳೆ ಕೆಲ ಕಾಲ ವಾದ ವಿವಾದ ನಡೆಯಿತು. ನಂತರ ಅಧಿಕಾರಿಗಳು ಮನವೊಲಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಗ್ರಾಮದ ಕೆಲ ಮಹಿಳೆಯರು ಮುಟ್ಟಾದ ಮೂರು ದಿನಗಳ ಕಾಲ ನಮ್ಮ ಪಾಡು ಅಮಾನವೀಯ ಹಾಗಾಗಿ ಇದಕ್ಕೆ ಒಂದು ಪರಿಹಾರ ನೀಡಬೇಕು ಕೇಳಿಕೊಂಡರು.
ಒಟ್ಟಾರೆ ಇಂತಹ ಅನಿಷ್ಟ ಪದ್ದತಿಯೊಂದು ಇನ್ನು ಜೀವಂತವಾಗಿರುವುದು ವಿಪರ್ಯಾಸ. ಈ ಬಗ್ಗೆ ಅಧಿಕಾರಿಗಳು ಹಾಗೂ ಗ್ರಾಮದ ಹಿರಿಕರು ಎಚ್ಚೆತ್ತುಕೊಂಡು ಇನ್ನಷ್ಟು ಕಾರ್ಯೋನ್ಮುಖರಾಗಿ ಇದಕ್ಕೆ ತಾರ್ಕಿಕ ಅಂತ್ಯ ನೀಡಬೇಕಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.