ತನ್ನ ಕಾರ್ಯಶೈಲಿಯಿಂದ ಎಲ್ಲರ ಮನಗೆದ್ದ ಒಬಾಮಾ

Published : Jan 14, 2017, 03:34 AM ISTUpdated : Apr 11, 2018, 12:39 PM IST
ತನ್ನ ಕಾರ್ಯಶೈಲಿಯಿಂದ ಎಲ್ಲರ ಮನಗೆದ್ದ ಒಬಾಮಾ

ಸಾರಾಂಶ

ಒಬಾಮಗಿಂತ ಮೊದಲು ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್‌ ಸೀನಿಯರ್‌ ಮತ್ತು ಜೂನಿಯರ್‌ ಇಬ್ಬರೂ ಈ ಸಾಲಿಗೆ ಸೇರಿದವರು. ಅಷ್ಘಾನಿಸ್ತಾನ-ಇರಾಕ್‌ ಸಮಸ್ಯೆಗಳು, ಇರಾನ್‌ನೊಂದಿಗೆ ಅಪನಂಬಿಕೆ, ಒಸಾಮಾ ಬಿನ್‌ ಲಾಡೆನ್‌ ತಲೆನೋವು ಇತ್ಯಾದಿಗಳು ಒಬಾಮ ಅವರಿಗೆ ಹಿಂದಿನ ಸರ್ಕಾರಗಳಿಂದ ಬಳುವಳಿಯಾಗಿ ಬಂದವು. ಪಾಕ್‌ ನೆಲದಲ್ಲಿ ಒಸಾಮಾ ಬಿನ್‌ ಲಾಡೆನ್‌ ಹತ್ಯೆ, ಅಷ್ಘಾನಿಸ್ತಾನ-ಇರಾಕ್‌ಗಳಲ್ಲಿ ಹಂತಹಂತವಾಗಿ ಶಾಂತಿ ನೆಲೆಗೊಳಿಸಿದ್ದು ಜಾಗತಿಕವಾಗಿ ಒಬಾಮಗೆ ಹೆಸರು ತಂದುಕೊಟ್ಟವು. ಇರಾನ್‌ ಜೊತೆ ಅಣು ಒಪ್ಪಂದ, ಕ್ಯೂಬಾ ಐತಿಹಾಸಿಕ ಭೇಟಿ ಒಬಾಮ ಟೊಪ್ಪಿಗೆಯಲ್ಲಿ ಹೊಸ ಗರಿ ಮೂಡಿಸಿದವು.

ತಮ್ಮ ಅಧಿಕಾರದ ಕೊನೆಯ ಹಂತದಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅಶ್ರುಪೂರಿತ ವಿದಾಯ ಭಾಷಣ ಮಾಡಿದ್ದಾರೆ. ಜಾಗತಿಕ ಶಾಂತಿ, ಸಹಬಾಳ್ವೆ ಅವರ ಭಾಷಣದ ಪ್ರಮುಖ ಆಶಯವಾಗಿತ್ತು. ಎಂಟು ವರ್ಷದ ಹಿಂದೆ ಅಧ್ಯಕ್ಷ­ರಾಗಿ ಒಬಾಮ ಅಧಿಕಾರ ಸ್ವೀಕರಿಸಿದಾಗ ಜಗತ್ತಿನಾದ್ಯಂತ ಆಶ್ಚರ್ಯಪಟ್ಟವರೇ ಹೆಚ್ಚು. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಕುಟುಂಬದ, ಕರಿಯ ಜನಾಂಗದ ವ್ಯಕ್ತಿಯೊಬ್ಬರು ಅಮೆರಿಕ ಅಧ್ಯಕ್ಷ ಗಾದಿಗೆ ಏರುವುದೆಂದರೆ ಸಣ್ಣ ಮಾತೇ? ಹಲವು ಅನನುಕೂಲತೆ ನಡುವೆಯೂ ಅವರು ಅಧ್ಯಕ್ಷ ಪದವಿಗೆ ಏರಿದ್ದು ಅಮೆರಿಕದ ಪ್ರಜಾಪ್ರಭುತ್ವದ ನೈಜ ಗೆಲವೇ ಆಗಿತ್ತು.

ಒಬಾಮ ಅವರ ಎಂಟು ವರ್ಷಗಳ ಅಧಿಕಾರಾವಧಿ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಅವರ ಆಡಳಿತ ಇಷ್ಟುಬೇಗ ಮುಗಿದುಹೋಯಿತೇ ಎಂಬ ಭಾವನೆ ಕಾಡಿದರೆ, ಅದಕ್ಕೆ ಒಬಾಮ ಅವರ ಕಾರ್ಯಶೈಲಿಯೇ ಕಾರಣ. ಒಬಾಮ ಅಮೆರಿಕದ ಅಧ್ಯಕ್ಷರಾದರೂ ಜಗತ್ತಿನಾದ್ಯಂತ ಮಧ್ಯಮ ವರ್ಗಗಳು, ತಳ ವರ್ಗಗಳ ನೋವು-ನಲಿವುಗಳನ್ನು ಪ್ರತಿನಿಧಿಸಿದರು. ಅವರ ಆಪ್ತ ಮಾತು, ಪ್ರತಿಪಾದಿಸುತ್ತಿದ್ದ ಮೌಲ್ಯಗಳಲ್ಲಿ ಅಂಥ ಅಂಶಗಳು ಢಾಳಾಗಿ ಕಾಣುತ್ತಿದ್ದವು. ಜಾಗತಿಕವಾಗಿ ಅಮೆರಿಕ ಸದಾ ಮುನ್ನುಗ್ಗುವ, ಪ್ರತಿಗಾಮಿ ನಾಯಕತ್ವಕ್ಕೆ ಹೆಸರುವಾಸಿ.

ಒಬಾಮಗಿಂತ ಮೊದಲು ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್‌ ಸೀನಿಯರ್‌ ಮತ್ತು ಜೂನಿಯರ್‌ ಇಬ್ಬರೂ ಈ ಸಾಲಿಗೆ ಸೇರಿದವರು. ಅಷ್ಘಾನಿಸ್ತಾನ-ಇರಾಕ್‌ ಸಮಸ್ಯೆಗಳು, ಇರಾನ್‌ನೊಂದಿಗೆ ಅಪನಂಬಿಕೆ, ಒಸಾಮಾ ಬಿನ್‌ ಲಾಡೆನ್‌ ತಲೆನೋವು ಇತ್ಯಾದಿಗಳು ಒಬಾಮ ಅವರಿಗೆ ಹಿಂದಿನ ಸರ್ಕಾರಗಳಿಂದ ಬಳುವಳಿಯಾಗಿ ಬಂದವು. ಪಾಕ್‌ ನೆಲದಲ್ಲಿ ಒಸಾಮಾ ಬಿನ್‌ ಲಾಡೆನ್‌ ಹತ್ಯೆ, ಅಷ್ಘಾನಿಸ್ತಾನ-ಇರಾಕ್‌ಗಳಲ್ಲಿ ಹಂತಹಂತವಾಗಿ ಶಾಂತಿ ನೆಲೆಗೊಳಿಸಿದ್ದು ಜಾಗತಿಕವಾಗಿ ಒಬಾಮಗೆ ಹೆಸರು ತಂದುಕೊಟ್ಟವು. ಇರಾನ್‌ ಜೊತೆ ಅಣು ಒಪ್ಪಂದ, ಕ್ಯೂಬಾ ಐತಿಹಾಸಿಕ ಭೇಟಿ ಒಬಾಮ ಟೊಪ್ಪಿಗೆಯಲ್ಲಿ ಹೊಸ ಗರಿ ಮೂಡಿಸಿದವು.

ಇನ್ನು ಅವರ ಆಡಳಿತಾವಧಿಯಲ್ಲಿ ರಷ್ಯಾ ಮತ್ತು ಚೀನಾ ಕುರಿತಾದ ಹಲವು ವಿಚಾರಗಳಲ್ಲಿ ಅಮೆರಿಕ ಕಠಿಣವಾಗಿ ನಡೆದುಕೊಂಡಿಲ್ಲ. ಇದರಿಂದಾಗಿಯೇ ಹಲವು ರಂಗಗಳಲ್ಲಿ ಈ ಎರಡೂ ದೇಶಗಳು ಅಮೆರಿಕಕ್ಕೆ ಸವಾಲು ಹಾಕುವಂತಾಯಿತು ಎಂಬ ಆರೋಪ ಕೇಳಿಬಂದಿವೆ. ಆಂತರಿಕವಾಗಿ, ಸಾಮಾಜಿಕ ಭದ್ರತಾ ಕಾಯ್ದೆ, ಬಂದೂಕು ನಿಯಂತ್ರಣ ಕುರಿತ ಸುಧಾರಣೆಗಳು, ಡ್ರೋನ್‌ ಯುದ್ಧ ಕೌಶಲಗಳಿಗೆ ಒತ್ತು, ದೇಶಾದ್ಯಂತ ವ್ಯಾಪಕ ವಿಚಕ್ಷಣಾ ಕ್ರಮಗಳ ವಿಷಯಗಳಲ್ಲಿ ತೀವ್ರ ವಿರೋಧ ಎದುರಿಸಬೇಕಾಯಿತು.

ಆದರೆ ಅವರ ಅಧಿಕಾರಾವಧಿಯಲ್ಲಿ ಅಮೆರಿಕದ ಉದ್ಯಮ ವಲಯ ಚೇತರಿಕೆ ಕಂಡಿತು. ದೇಶದ ಆಂತರಿಕ ನಿರುದ್ಯೋಗ ಮಟ್ಟಹತ್ತು ವರ್ಷದ ಹಿಂದೆ ಇದ್ದ ಪ್ರಮಾಣಕ್ಕೆ ತಗ್ಗಿದೆ. ಈಗ ಅಮೆರಿಕದ ಅರ್ಥವ್ಯವಸ್ಥೆ ತ್ವರಿತ ಬೆಳವಣಿಗೆಯ ಹಾದಿಯಲ್ಲಿದೆ. ಇನ್ನು, ಒಬಾಮ ಆಡಳಿತ ಭಾರತದ ಪಾಲಿಗೆ ಸಾಕಷ್ಟುಒಳಿತನ್ನೇ ಮಾಡಿದೆ. ಮನಮೋಹನ್‌ ಸಿಂಗ್‌ ಮತ್ತು ಒಬಾಮ ನಡುವೆ ಬಾಂಧವ್ಯ ಇದ್ದ ಕಾರಣ ಅಮೆರಿಕವು ಭಾರತದೊಂದಿಗೆ ಅಣುಬಂಧಕ್ಕೆ ಸಹಿ ಹಾಕುವಂತಾಯಿತು. ಅಮೆರಿಕದ ಮೊದಲ ಆಫ್ರಿಕ-ಅಮೆರಿಕ ಮೂಲದ ಅಧ್ಯಕ್ಷರೆನಿಸಿಕೊಂಡ ಒಬಾಮ, ಆ ದೇಶಕ್ಕೆ ಚಿಂತನಶೀಲ ನಾಯಕತ್ವ ಒದಗಿಸಿದರು. ಜೊತೆಗೆ ಬಂದೂಕು ಸಂಬಂಧಿ ಹಿಂಸಾಚಾರ ಮತ್ತು ಜನಾಂಗೀಯ ದ್ವೇಷಕ್ಕೆ ಹೆಸರಾದ ಅಮೆರಿಕಕ್ಕೆ ಪ್ರಗತಿಪರ ವ್ಯಕ್ತಿತ್ವ ಒದಗಿಸಲು ಹೆಣಗಾಡಿದರು. ಜನಪ್ರಿಯ ಸಂಸ್ಕೃತಿ ಮತ್ತು ಸಾಮಾಜಿಕ ಮಾಧ್ಯಮ ಎರಡರೊಂದಿಗೂ ಸುಲಲಿತವಾಗಿ ಹೊಂದಿಕೊಳ್ಳುತ್ತಿದ್ದ ಒಬಾಮ ನಿಜವಾಗಿಯೂ 21ನೇ ಶತಮಾನದ ಜನಮನದ ನಾಯಕ.

(ಕನ್ನಡ ಪ್ರಭ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸವಣೂರು ಘಟನೆ ಕಾಂಗ್ರೆಸ್ ಓಲೈಕೆ ರಾಜಕಾರಣದ ಪ್ರತಿಬಿಂಬ, ರಾಜ್ಯದಲ್ಲಿ ಪೊಲೀಸರ ನಿಷ್ಕ್ರಿಯತೆ ಬಗ್ಗೆಯೂ ಸಂಸದ ಬೊಮ್ಮಾಯಿ ಕಿಡಿ
ಕಾಂಗ್ರೆಸ್ ರ‍್ಯಾಲಿಯಲ್ಲಿ ಹೊಸ ಗ್ಯಾರೆಂಟಿ ಘೋಷಿಸಿದ ರಾಹುಲ್ ಗಾಂಧಿ, ಈ ಭಾರಿಯ ಭರವಸೆ ಏನು?