ಮೊಬೈಲ್’ನಲ್ಲಿ ಆಡಿಯೋ ಮಾಡಿಟ್ಟು ನರ್ಸ್ ಆತ್ಮಹತ್ಯೆ

By Suvarna Web DeskFirst Published Jan 23, 2018, 7:47 AM IST
Highlights

ಪ್ರೇಮ ವೈಫಲ್ಯದಿಂದ ಬೇಸರಗೊಂಡ ಖಾಸಗಿ ಆಸ್ಪತ್ರೆ ಶುಶ್ರೂಷಕಿ, ಮೊಬೈಲ್‌ನಲ್ಲಿ ಆಡಿಯೋ ಮಾಡಿ ಬಳಿಕ ಆಸ್ಪತ್ರೆಯ ವಸತಿ ಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಗರಬಾವಿಯಲ್ಲಿ ಸೋಮವಾರ ನಡೆದಿದೆ.

ಬೆಂಗಳೂರು: ಪ್ರೇಮ ವೈಫಲ್ಯದಿಂದ ಬೇಸರಗೊಂಡ ಖಾಸಗಿ ಆಸ್ಪತ್ರೆ ಶುಶ್ರೂಷಕಿ, ಮೊಬೈಲ್‌ನಲ್ಲಿ ಆಡಿಯೋ ಮಾಡಿ ಬಳಿಕ ಆಸ್ಪತ್ರೆಯ ವಸತಿ ಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಗರಬಾವಿಯಲ್ಲಿ ಸೋಮವಾರ ನಡೆದಿದೆ.

ಇಲ್ಲಿನ ಮಾರುತಿನಗರದ ‘ದೇವಿ’ ನರ್ಸಿಂಗ್ ಹೋಂನ ನರ್ಸ್ ನಿಷ್ಕಳಾ (25) ಮೃತ ದುರ್ದೈವಿ. ಆಸ್ಪತ್ರೆ ಮಹಡಿಯಲ್ಲಿರುವ ಮಹಿಳಾ ಸಿಬ್ಬಂದಿ ವಸತಿ ಗೃಹದಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ನಿಷ್ಕಳಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಕೊಠಡಿಗೆ ಸಹೋದ್ಯೋಗಿಗಳು ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.

 ಈ ಆತ್ಮಹತ್ಯೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಅದೇ ಆಸ್ಪತ್ರೆ ಶುಶ್ರೂಷಕ ಗಂಗಾಧರ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ನಿಷ್ಕಳಾ, ಮೂಲತಃ ಚಾಮರಾಜನಗರದ ದೊಡ್ಡಪೇಟೆಯವರಾಗಿದ್ದು, ವರ್ಷದ ಹಿಂದೆ ‘ದೇವಿ’ ನರ್ಸಿಂಗ್ ಹೋಂನಲ್ಲಿ ನರ್ಸ್ ಆಗಿ ಸೇರಿದ್ದರು.

ಬಳಿಕ ಆಸ್ಪತ್ರೆ ಕಟ್ಟಡದ ಮಹಡಿಯಲ್ಲಿದ್ದ ಮಹಿಳಾ ಸಿಬ್ಬಂದಿ ವಸತಿ ಗೃಹದಲ್ಲಿ ಆಕೆ ನೆಲೆಸಿದ್ದಳು. ಹೀಗಿರುವಾಗ ಆಕೆಗೆ ಆ ಆಸ್ಪತ್ರೆಯ ಹಿರಿಯ ಶ್ರುಶೂಷಕ ಹಾಸನ ಮೂಲದ ಗಂಗಾಧರ್ ಪರಿಚಯವಾಯಿತು. ಈ ಗೆಳೆತನವು ಕ್ರಮೇಣ ಅವರಿಬ್ಬರಲ್ಲಿ ಪ್ರೇಮಕ್ಕೆ ತಿರುಗಿದ್ದು,ವಿವಾಹವಾಗುವುದಾಗಿ ಸಹ ಗಂಗಾಧರ್ ಮಾತು ಕೊಟ್ಟಿದ್ದ. ಆದರೆ ಇತ್ತೀಚಿಗೆ ಈ ಪ್ರೇಮವೂ ಮುರಿದಿತ್ತು ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಮದುವೆ ವಿಷಯವಾಗಿ ಗಂಗಾಧರ್ ಮತ್ತು ನಿಷ್ಕಳಾ ಮಧ್ಯೆ ಮನಸ್ತಾಪವಾಗಿತ್ತು. ಆ ವೇಳೆ ‘ನಮ್ಮ ಮನೆಯಲ್ಲಿ ಅಂತರ್ಜಾತಿ ಮದುವೆಗೆ ಒಪ್ಪುತ್ತಿಲ್ಲ. ನೀನು ಬೇರೆ ಯಾರನ್ನಾದರೂ ಮದುವೆ ಮಾಡಿಕೋ’ ಎಂದು ಗಂಗಾಧರ್ ಹೇಳಿದ್ದ.

ಈ ಮಾತಿಗೆ ನೊಂದ ಆಕೆ, ಪ್ರಿಯಕರನ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿ ವಿಫಲವಾಗಿದ್ದಳು. ನಿಷ್ಕಳಾ ಕಿರಿಯ ಸೋದರ ರಾಕೇಶ್, ಎರಡು ದಿನಗಳ ಹಿಂದೆ ಗಂಗಾಧರ್ ನನ್ನು ಭೇಟಿಯಾಗಿ ಅಕ್ಕನ ಪರವಾಗಿ ರಾಜಿ ಸಂಧಾನಕ್ಕೆ ಯತ್ನಿಸಿದ್ದ ವೇಳೆ ನನ್ನ ಕುಟುಂಬದವರ ವಿರೋಧ ಕಟ್ಟಿಕೊಂಡು ಪ್ರೇಮ ವಿವಾಹವಾಗಲು ನನ್ನಿಂದ ಸಾಧ್ಯವಿಲ್ಲವೆಂದು ಆತ ಸ್ಪಷ್ಟಪಡಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇದರಿಂದ ಬೇಸರಗೊಂಡ ನಿಷ್ಕಳಾ, ಸಹೋದ್ಯೋಗಿಗಳು ಕೆಲಸಕ್ಕೆ ತೆರಳಿದ ಬಳಿಕ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೆಲ ಹೊತ್ತಿನ ಬಳಿಕ ಕೊಠಡಿಗೆ ಆಗಮಿಸಿದ ಆಕೆ ಸಹವರ್ತಿಗಳು, ನೇಣಿನ ಕುಣಿಕೆಯಲ್ಲಿ ನೇತಾಡುತ್ತಿದ್ದ ನಿಷ್ಕಳಾಳನ್ನು ರಕ್ಷಿಸಿ ಆರೈಕೆ ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಆಕೆ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತಳ ಕುಟುಂಬದವರು ನೀಡಿದ ದೂರು ಆಧರಿಸಿ ಗಂಗಾಧರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!