ನೆರೆ ನೆರವು : ಸಿಎಂ ಕರೆಗೆ ಎನ್ನೆಸ್ಸೆಸ್‌ ಒಪ್ಪಿಗೆ

By Kannadaprabha NewsFirst Published Sep 12, 2019, 7:26 AM IST
Highlights

ರಾಜ್ಯಾದ್ಯಂತ 41 ಎನ್‌ಎಸ್‌ಎಸ್‌ ಘಟಕಗಳ ಸ್ವಯಂ ಸೇವಕರು ಮುಖ್ಯಮಂತ್ರಿಗಳ ಕರೆಗೆ ಓಗೊಟ್ಟು ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರ ನೆರವಿಗೆ ಮುಂದಾಗಿದ್ದಾರೆ.
 

ಬೆಂಗಳೂರು [ಸೆ.12] : ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ‘ಕನ್ನಡಪ್ರಭ ಪತ್ರಿಕೆ’ಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಕುರಿತು ಬುಧವಾರ ಬರೆದಿದ್ದ ಲೇಖನಕ್ಕೆ ನಾಡಿನ ಯುವಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ರಾಜ್ಯಾದ್ಯಂತ 41 ಎನ್‌ಎಸ್‌ಎಸ್‌ ಘಟಕಗಳ ಸ್ವಯಂ ಸೇವಕರು ಮುಖ್ಯಮಂತ್ರಿಗಳ ಕರೆಗೆ ಓಗೊಟ್ಟು ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರ ನೆರವಿಗೆ ಮುಂದಾಗಿದ್ದಾರೆ.

ಎನ್‌ಎಸ್‌ಎಸ್‌ನ ರಾಜ್ಯ ಸಮನ್ವಯಾಧಿಕಾರಿ ಡಾ.ಗಣನಾಥಶೆಟ್ಟಿಅವರು ಮುಖ್ಯಮಂತ್ರಿಗಳ ಲೇಖನವನ್ನು ಓದಿ ರಾಜ್ಯದ ಎನ್‌ಎಸ್‌ಎಸ್‌ ಘಟಕಗಳ ಸಮನ್ವಯಾಧಿಕಾರಿಗಳ ಗಮನ ಸೆಳೆದಿದ್ದು, ಆಯಾ ಜಿಲ್ಲೆಗಳಲ್ಲಿ ಸಮನ್ವಯಾಧಿಕಾರಿಗಳ ನೇತೃತ್ವದಲ್ಲಿ ಸಮುದಾಯ ಸೇವೆಗೆ ಮುಂದಾಗುವಂತೆ ಸಲಹೆ ಮಾಡಿದ್ದಾರೆ.

ನೆರೆ ಪೀಡಿತ ಪ್ರದೇಶಗಳಲ್ಲಿ ಪುನರ್‌ ನಿರ್ಮಾಣ ಕಾರ್ಯಗಳಲ್ಲಿ ತೊಡಗಲಿರುವ ಎನ್‌ಎಸ್‌ಎಸ್‌ ಸ್ವಯಂಸೇವಕರಿಗೆ ಅಗತ್ಯ ಮಾರ್ಗದರ್ಶನ ಮತ್ತು ನೆರವು ನೀಡಲು ರಾಜ್ಯ ಸರ್ಕಾರ ಸಿದ್ಧವಿದ್ದು, ಸಂಬಂಧಿಸಿದ ಸಮನ್ವಯಾಧಿಕಾರಿಗಳು ಕಾರ್ಯ ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ಮುಂದಾಗುವಂತೆ ಸೂಚನೆ ನೀಡಿದ್ದಾರೆ.

ರಾಜ್ಯದ 22 ಜಿಲ್ಲೆಗಳ 103 ತಾಲೂಕುಗಳು ನೆರೆ ಪೀಡಿತವಾಗಿದ್ದು, ಅಲ್ಲಿ ಅಪಾರ ಆಸ್ತಿ ಪಾಸ್ತಿಗೆ ಹಾನಿಯಾಗಿದೆ. ರಸ್ತೆ ಹಾಗೂ ಸೇತುವೆಗಳು ಜಖಂಗೊಂಡಿವೆ. ವಿದ್ಯುತ್‌ ಮಾರ್ಗಗಳಿಗೂ ಹಾನಿಯಾಗಿದೆ. ಹಾಗಾಗಿ ಪುನರ್‌ ನಿರ್ಮಾಣ ಕಾರ್ಯದಲ್ಲಿ ದೊಡ್ಡ ಮಟ್ಟದ ಮಾನವ ಸಂಪನ್ಮೂಲದ ಅಗತ್ಯವಿದೆ. ಎನ್‌ಎಸ್‌ಎಸ್‌ ಸ್ವಯಂ ಸೇವಕರು ಈ ಅಗತ್ಯವನ್ನು ತುಂಬಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹೇಳಿದ್ದಾರೆ.

click me!