ಅನಿವಾಸಿ ಭಾರತೀಯರ ವಿರುದ್ಧ ಎಫ್ಐಆರ್ ರದ್ದು

By Internet deskFirst Published Sep 28, 2016, 6:25 PM IST
Highlights

ಬೆಂಗಳೂರು(ಸೆ.28): ಕೇರಳ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಜೋಸೆಫ್ ಚಾಕೋ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದ ಪ್ರಕರಣದಲ್ಲಿ 39 ಅನಿವಾಸಿ ಭಾರತೀಯರ ವಿರುದ್ಧ ದಾಖಲಾಗಿದ್ದ ಎಫ್ಐಆರ್‌ಗಳನ್ನು ಹೈಕೋರ್ಟ್ ಬುಧವಾರ ರದ್ದುಪಡಿಸಿ ಆದೇಶಿಸಿದೆ.

ತಮ್ಮ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್‌ ರದ್ದುಪಡಿಸುವಂತೆ ಕೋರಿ ಬಿಜು ಎಂ.ಪಾರೆಲ್ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದಭೈರಾರೆಡ್ಡಿ ಅವರಿದ್ದ ನ್ಯಾಯಪೀಠ, ಎಲ್ಲ 39 ಎಫ್ಆರ್‌ಗಳು ಮತ್ತು ಈ ಸಂಬಂಧ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದಲ್ಲಿ ಅರ್ಜಿದಾರರ ಯಾವುದೇ ಅವ್ಯವಹಾರ ನಡೆಸಿಲ್ಲ, ಅಮಾಯಕರಾಗಿದ್ದಾರೆ. ಇವರಿಗೆ ಜೋಸೆಫ್  ಚಾಕೋ ಅಕ್ರಮವಾಗಿ ನಿವೇಶನ ಮಾರಾಟ ಮಾಡಿದ್ದಾರೆ. ಇವರ ವಿರುದ್ಧದ ನಿವೇಶನ ಕಬಳಿಕೆ ಆರೋಪದಲ್ಲಿ ಹುರಳಿಲ್ಲ. ಅಧೀನ ನ್ಯಾಯಾಲಯ ಈ ಪ್ರಕರಣದಲ್ಲಿ ಸರಿಯಾಗಿ ತನ್ನ ವಿವೇಚನೆ ಬಳಸದೆ ತನಿಖೆಗೆ ಆದೇಶಿಸಿದೆ. ಈ ಕ್ರಮ ಸರಿಯಲ್ಲ ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಎಫ್ಐಆರ್‌ ರದ್ದುಪಡಿಸಿ ಆದೇಶಿಸಿತು.

ಪ್ರಕರಣದ ಹಿನ್ನೆಲೆ

ಅನಿವಾಸಿ ಭಾರತೀಯರಿಗೆ ನಿವೇಶನ ನೀಡುವ ಉದ್ದೇಶದಿಂದ ರಿಯಲ್‌ಎಸ್ಟೇಟ್ ಉದ್ಯಮಿ ಜೋಸೆಫ್ ಚಾಕೋ 1994ರ ನಂತರ ಕೊತ್ತನೂರು, ಹೆಣ್ಣೂರು, ಕೆ.ಆರ್.ಪುರ, ಸೂಲಿಬೆಲೆ, ಹೊಸಕೋಟೆ ಸೇರಿದಂತೆ ವಿವಿಧೆಡೆ 25 ಬಡಾವಣೆಗಳನ್ನು ನಿರ್ಮಾಣ ಮಾಡಿದ್ದರು. ಅದರಲ್ಲಿ ಕೆಲವೊಂದು ನಿವೇಶನಗಳನ್ನು ಸಂಬಂಧಪಟ್ಟ ಸರ್ಕಾರಿ ಇಲಾಖೆಗಳಿಂದ ಅನುಮೋದನೆ ಪಡೆಯದೇ ಸ್ಥಳೀಯರಿಗೆ ಮಾರಾಟ ಮಾಡಿದ್ದರು. ನಂತರ ಅದೇ ನಿವೇಶನಗಳನ್ನು ಅನಮೋದನೆ ಪಡೆದು ಅನಿವಾಸಿ ಭಾರತೀಯರಿಗೂ ಮಾರಾಟ ಮಾಡಿದ್ದರು.

ಈ ನಡುವೆ ಸ್ಥಳೀಯ ನಿವೇಶನದಾರರಿಗೆ ತಮ್ಮ ನಿವೇಶನಗಳನ್ನು ಅನಿವಾಸಿ ಭಾರತೀಯರು ಕಬಳಿಸುವುದಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ ನಗರದ ಎಸಿಎಂಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಕೊತ್ತನೂರು, ಸೂಲಿಬೆಲೆ ಮತ್ತು ಹೊಸಕೋಟೆ ಸೇರಿದಂತೆ ವಿವಿಧ ಠಾಣೆಗಳಿಗೆ ಎಸಿಎಂಎಂ ನ್ಯಾಯಾಲಯ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್‌ ದಾಖಲಿಸಿ ತನಿಖೆ ನಡೆಸುತ್ತಿದ್ದದ್ದರು.

click me!