ಗಣೇಶ ಮೂರ್ತಿ ವಿಚಾರಕ್ಕೆ ಉಲ್ಟಾ ಹೊಡೆದ ಬಿಬಿಎಂಪಿ

By Web DeskFirst Published 8, Sep 2018, 9:29 AM IST
Highlights

ಪಿಒಪಿ ಗಣೇಶಗಳನ್ನು ಕೂರಿಸಲು ಮುಂದಾಗುವವರಿಗೆ ಅನುಮತಿಯನ್ನೇ ನೀಡದಿರುವ ಆಲೋಚನೆಯಲ್ಲಿದ್ದ ಬಿಬಿಎಂಪಿ ಈಗ ಉಲ್ಟಾ ಹೊಡೆದಿದೆ. ಯಾವ ಮೂರ್ತಿ ಪ್ರತಿಷ್ಠಾಪಿಸಬೇಕೆಂಬುದು ಜನರಿಗೆ ಬಿಟ್ಟ ವಿಚಾರ. ಜಾಗೃತಿ ಮೂಡಿಸುವುದಷ್ಟೇ ನಮ್ಮ ಕೆಲಸ ಎಂದು ಹೇಳಿದೆ. 

ಬೆಂಗಳೂರು :  ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶಗಳ ಮಾರಾಟ ತಡೆಯುವ ದೃಷ್ಟಿಯಿಂದ ಈ ಬಾರಿ ಸಾರ್ವಜನಿಕವಾಗಿ ಗಣೇಶ ಕೂರಿಸಲು ಅನುಮತಿ ನೀಡುವಾಗ ಪಿಒಪಿ ಗಣೇಶಗಳನ್ನು ಕೂರಿಸಲು ಮುಂದಾಗುವವರಿಗೆ ಅನುಮತಿಯನ್ನೇ ನೀಡದಿರುವ ಆಲೋಚನೆಯಲ್ಲಿದ್ದ ಬಿಬಿಎಂಪಿ ಈಗ ಉಲ್ಟಾ ಹೊಡೆದಿದೆ.

ಯಾವ ಮೂರ್ತಿ ಪ್ರತಿಷ್ಠಾಪಿಸಬೇಕೆಂಬುದು ಜನರಿಗೆ ಬಿಟ್ಟ ವಿಚಾರ. ಜಾಗೃತಿ ಮೂಡಿಸುವುದಷ್ಟೇ ನಮ್ಮ ಕೆಲಸ. ಪಿಒಪಿ ಗಣೇಶಗಳ ಪ್ರತಿಷ್ಠಾಪನೆಗೆ ಅನುಮತಿ ನಿರಾಕರಿ ಸುವ ಬದಲು ಪರಿಸರಕ್ಕೆ ಹಾನಿಯಾಗದಂತೆ ಇಂತಹ ಗಣೇಶ ಮೂರ್ತಿಗಳ ವಿಸರ್ಜನೆಗೆ ಪ್ರತ್ಯೇಕ ವ್ಯವಸ್ಥೆ ಮಾಡುವುದು ಅಥವಾ ವಿಸರ್ಜಿಸಿದ ಕೂಡಲೇ ಅದನ್ನು ಹೊರಗೆ ತೆಗೆಯಲು ನಿರ್ಧರಿಸಿದೆ. 

ಧರ್ಮ, ದೇವರು ವಿಚಾರಗಳಲ್ಲಿ ತುಂಬಾ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ. ಪಿಒಪಿ ಗಣೇಶ ತಯಾರಕರು ಮತ್ತು ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬಹುದೇ ಹೊರತು, ಇಂತಹದ್ದೇ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾ ಪಿಸಬೇಕೆಂದು ಜನರ ಮೇಲೆ ಒತ್ತಡ ಹೇರುವುದರಿಂದ ಸಮಸ್ಯೆಯುಂಟಾಗಬಹುದು. 

ಗಣೇಶ ಹಬ್ಬ ಹಿಂದೂ ಧರ್ಮದ ಪ್ರಮುಖ ಹಬ್ಬ. ಸಾಮಾಜಿಕವಾಗಿ ಭಾವೈಕ್ಯತೆ ಮೆರೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ವೇಳೆ ಪಿಒಪಿ ಗಣೇಶಗಳ ಪ್ರತಿಷ್ಠಾಪನೆಗೆ ಅವಕಾಶ ನೀಡು ವುದಿಲ್ಲ ಎಂದರೆ ಜನರು ತಿರುಗಿ ಬೀಳಬಹುದು ಎಂದು ಪಾಲಿಕೆ ಸದಸ್ಯರಿಂದ ವ್ಯಕ್ತವಾದ ಅಭಿಪ್ರಾಯಗಳ ಹಿನ್ನೆಲೆ ಯಲ್ಲಿ ಬಿಬಿಎಂಪಿ ತನ್ನ ಚಿಂತನೆಯನ್ನು ಕೈಬಿಟ್ಟಿದೆ. ಈ ಬಾರಿಯೂ ಕೇವಲ ಪಿಒಪಿ ಗಣೇಶಗಳನ್ನು ಖರೀದಿಸದಂತೆ, ಪ್ರತಿಷ್ಟಾಪಿಸದಂತೆ ಸಾರ್ವಜನಿಕರಲ್ಲಿ ಕೇವಲ ಜಾಗೃತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಗಮನ ಹರಿಸಲಷ್ಟೇ ನಿರ್ಧರಿಸಿದೆ ಎಂದು ಶುಕ್ರವಾರ ನಡೆದ ಬಿಬಿ ಎಂಪಿ ಅಧಿಕಾರಿಗಳ ಸಭೆ ಯಲ್ಲಿ ತೀರ್ಮಾನಿಸಲಾಗಿದೆ ಎಂದು ಪಾಲಿಕೆ ಅಧಿಕಾರಿ ಮೂಲಗಳು ‘ಕನ್ನಡಪ್ರಭ’ಗೆ ಮಾಹಿತಿ ನೀಡಿವೆ.

ಸೋಮವಾರ ಈ ಸಂಬಂಧ ಮಾರ್ಗ ಸೂಚಿ ಪ್ರಕಟವಾಗುವ ಸಾಧ್ಯತೆ ಇದೆ. ಶೇ. 60 ಇಳಿಕೆ: ಪಿಒಪಿ ಗಣೇಶಗಳ ವಿರುದ್ಧ ಹಲವು ವರ್ಷಗಳಿಂದ ನಡೆಸಿ ಕೊಂಡು ಬರುತ್ತಿರುವ ಜನ ಜಾಗೃತಿ ಕಾರ್ಯಕ್ರಮಗಳಿಂದ ನಗರದಲ್ಲಿ ಕಳೆದ ವರ್ಷ ಪಿಒಪಿ ಗಣೇಶ ಕೊಳ್ಳುವವರ ಪ್ರಮಾಣ ಶೇ. 60 ರಷ್ಟು ಕಡಿಮೆಯಾಗಿದೆ. ಹಾಗಾಗಿ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಮೂಲಕವೇ ಪಿಒಪಿ ಗಣೇಶಗಳನ್ನು ಸಂಪೂರ್ಣ ರವಾಗಿಸಬೇಕೇ ಹೊರತು ಕಾನೂನು ಕ್ರಮದ ಪ್ರಯೋಗಕ್ಕೆ ಮುಂದಾದರೆ ಇದನ್ನೇ ಕೆಲವರು ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಅಸ್ತ್ರವಾಗಿ ಬಳಸಿಕೊಳ್ಳಬಹುದು ಎಂದು ಸಭೆಯಲ್ಲಿ ಅಭಿ ಪ್ರಾಯಗಳು ವ್ಯಕ್ತವಾಗಿವೆ. 

ಹಾಗಾಗಿ ಪಿಒಪಿ ಗಣೇಶಗಳ ಪ್ರತಿಷ್ಠಾಪನೆಗೆ ನಿಷೇಧ ಹೇರುವುದಾಗಲಿ, ಇಂತಹ ಗಣೇ ಶಗಳನ್ನು ಕೂರಿಸುವುದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಹಸಕ್ಕೆ ಕೈ ಹಾಕದಿರುವ ನಿರ್ಧಾರಕ್ಕೆ ಬರಲಾಗಿದೆ. ಪಿಒಪಿ ಗಣೇಶ ವಿಸರ್ಜನೆಗೆ ಪ್ರತ್ಯೇಕ ಜಾಗ: ಈ ಬಾರಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜ ನೆಗೆ ವಿವಿಧ ಕೆರೆ, ಕಲ್ಯಾಣಿ, ಹೊಂಡಗಳು ಸೇರಿದಂತೆ ಒಟ್ಟು ೧೩೫ ಕಡೆ ವಿಸರ್ಜನೆಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ.

ಲಿಂಗರಾಜು ಕೋರಾ

Last Updated 9, Sep 2018, 9:40 PM IST