
ಬಂಟ್ವಾಳ[ಜು.28]: ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೇನಾರಾಯಣ ಆಳ್ವ (94) ಹೃದಯಾಘಾತದಿಂದ ಶನಿವಾರ ರಾತ್ರಿ 8.30ರಂದು ನಿಧನರಾದರು.
ಸಂಜೆ ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲಕ್ಷ್ಮೀನಾರಾಯಣ ಆಳ್ವ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಭಾನುವಾರ ಸಂಜೆ 3 ಗಂಟೆಗೆ ಏರ್ಯಬೀಡಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಅಂಕಣಕಾರರಾಗಿ, ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿ, ಅನೇಕ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳ ರೂವಾರಿಯಾಗಿ, ಸಾಹಿತ್ಯ ರಂಗದ ಹಿರಿಯ ಚೇತನರಾಗಿ ಹೆಸರು ಮಾಡಿದ್ದ ಲಕ್ಷ್ಮೇನಾರಾಯಣ ಆಳ್ವ ಅವರಿಗೆ ಪತ್ನಿ, ಮಗಳು ಇದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪುವಿನವರಾದ ಲಕ್ಷ್ಮೀನಾರಾಯಣ ಆಳ್ವ ಅವರು ಬರೆದ ‘ರಾಮಾಶ್ವಮೇಧ ತರಂಗಗಳು’ ಮೈಸೂರು ಮತ್ತು ಮದರಾಸು ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕವಾಗಿತ್ತು. ಸ್ನೇಹಸೇತು-ಪತ್ರರೂಪದ ಕಾದಂಬರಿ, ಮುಳಿಯ ತಿಮ್ಮಪ್ಪಯ್ಯನವರ ಕುರಿತ ಜೀವನ ಚರಿತ್ರೆ, ಮೊದಲ ಮಳೆ, ಸಂಚಯ, ಓರಗೆಗೆ ಒಲವಿನ ಒಸಗೆ ಮತ್ತಿತರ ಅನೇಕ ಕೃತಿಗಳನ್ನು ಆಳ್ವರು ಬರೆದಿದ್ದಾರೆ. ತುಳುನಾಡಿನ ಭೂತಾರಾಧನೆಯ ಕುರಿತಾದ ಸಮಗ್ರ ಅಧ್ಯಯನ ಗ್ರಂಥ ‘ಮಂಗಳ ತಿಮರು’ನಂಥ ಗ್ರಂಥಗಳನ್ನೂ ರಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.