
ಅಂಕಗಳೇ ಜೀವನವಲ್ಲ, ಅಂಕಗಳು ಯಶಸ್ಸಿನ ಮಾನದಂಡವೂ ಅಲ್ಲ. ಅಂಕಗಳಿಗೂ ಬುದ್ಧವಂತಿಕೆಗೂ ಯಾವುದೇ ಸಂಬಂಧವಿಲ್ಲ.
ಎಲ್ಲಾ ಮಕ್ಕಳು ಒಂದೇ ರೀತಿಯಾಗಿರಲು ಸಾಧ್ಯವಿಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆಗಳಿರುತ್ತವೆ, ಆದರೆ ಅದು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ.
ಆಸಕ್ತಿ ಬೇರೆ ಬೇರೆಯಾಗಿರುತ್ತದೆ, ವಿಷಯಗಳನ್ನು ಗ್ರಹಿಸುವ ರೀತಿ, ಕೆಲಸ ಮಾಡುವ ಸಾಮರ್ಥ್ಯ ವಿಭಿನ್ನವಾಗಿರುತ್ತದೆ.
ಮಕ್ಕಳನ್ನು ಒಂದೇ ಮಾನದಂಡವಿಟ್ಟು ನೋಡುವುದು ಸರಿಯಾದ ಕ್ರಮವಲ್ಲ. ಮಕ್ಕಳನ್ನು ಇತರ ಮಕ್ಕಳಿಗೆ ಹೋಲಿಸಬೇಡಿ. ನಿಮ್ಮ ಮಗು ಅಂಕ ಕಡಿಮೆ ಪಡೆದಿರಬಹುದು, ಆದರೆ ಇತರ ಮಕ್ಕಳಿಗಿಂತ ಹೆಚ್ಚು ಬುದ್ಧಿವಂತ ಹಾಗೂ ವಿವೇಕವಂತನಾಗಿರಬಹುದು.
ಯಾವ ರೀತಿ ಪೋಷಕರು ತಮ್ಮನ್ನು ಇತರ ಪೋಷಕರೊಂದಿಗೆ ಹೋಲಿಸಿಕೊಳ್ಳಲು ಸಾಧ್ಯವಿಲ್ಲವೋ ಹಾಗೇನೆ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸಲು ಸಾಧ್ಯವಿಲ್ಲ.
ಮಗುವಿನ ವ್ಯಕ್ತಿತ್ವ ಹಾಗೂ ಆತ/ಆಕೆಯ ಅಭಿರುಚಿಯಾಧರದಲ್ಲಿ ಮಾಡುವ ಸಾಧನೆಯೇ ಮುಖ್ಯ. ಅದುವೇ ಆತ/ಆಕೆಗೆ ಆತ್ಮಸಂತೃಪ್ತಿ ತರಬಲ್ಲುದು, ಹಾಗೂ ಸಮಾಜಕ್ಕೂ ಅದು ಒಳ್ಳೆಯದು.
ಸಾಧನೆಗೆ ಅಂಕಗಳ ಹಂಗಿಲ್ಲ, ಹಾಗೂ ಯಶಸ್ಸಿಗೆ ಅಂಕಗಳು ಅನಿವಾರ್ಯವೂ ಅಲ್ಲ.
ಪರೀಕ್ಷೆ ಪಾಸಾಗುವುದು ಅಥವಾ ಹೆಚ್ಚೆಚ್ಚು ಅಂಕಗಳನ್ನು ಗಳಿಸುವುದೇ ಜೀವನವಲ್ಲ. ಜೀವನ ಬಹಳ ವಿಶಾಲವಾದುದು. ಪರೀಕ್ಷೆ ಹಾಗೂ ಅವುಗಳ ಫಲಿತಾಂಶಗಳು ಜೀವನದ ಒಂದು ಅತೀ ಸಣ್ಣ ಭಾಗ.
ಆದುದರಿಂದ,
ವಿದ್ಯಾರ್ಥಿಗಳಾಗಲಿ ಅಥವಾ ಪೋಷಕರಾಗಲಿ ಬಯಸಿದ ಅಥವಾ ವ್ಯತಿರಿಕ್ತ ಫಲಿತಾಂಶ ಬಂದಲ್ಲಿ ಆತಂಕ್ಕೊಳಗಾಗಬಾರದು, ಸಿಟ್ಟಾಗಬಾರದು. ಅಥವಾ ಯಾವುದೇ ಕೆಟ್ಟ ನಿರ್ಧಾರಕ್ಕೂ ಮುಂದಾಗಬಾರದು. ಫಲಿತಾಂಶವನ್ನು ಸವಾಲಾಗಿ ಸ್ವೀಕರಿಸಬೇಕು.
ಪೋಷಕರು ಮಕ್ಕಳ ಜತೆ ಫಲಿತಾಂಶ ವೀಕ್ಷಿಸಲು ಹೋಗುವುದು ಒಳಿತು. ಕಡಿಮೆ ಅಂಕ ಬಂದರೆ ಅಥವಾ ಅನುತ್ತೀರ್ಣರಾದರೆ, ಮಕ್ಕಳನ್ನು ನಿಂದಿಸದೇ ಧೈರ್ಯತುಂಬುವ ಕೆಲಸವನ್ನು ಪೋಷಕರು ಮಾಡಬೇಕು. ಆ ಸಂದರ್ಭದಲ್ಲಿ ಅವರಿಗೆ ಅತೀ ಅಗತ್ಯವಿರುವುದು ಧೈರ್ಯ ಹಾಗೂ ಆತ್ಮವಿಶ್ವಾಸ. ಪೋಷಕರೇ ಹಾಗೂ ಆತ್ಮಿಯರೇ ಅದನ್ನು ತುಂಬದಿದ್ದರೆ ಬೇರಾರು ಆ ಕೆಲಸ ಮಾಡುತ್ತಾರೆ?
ಪರಿಸ್ಥಿತಿ ಏನೇ ಇರಲಿ ಪೋಷಕರು/ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಪರ್ಯಾಯ ಯೋಜನೆಯನ್ನು (Plan B) ಮಾಡಿಕೊಳ್ಳಬೇಕು. ಸಮಯಾವಕಾಶ ಎಲ್ಲರ ಬಳಿ ಇದ್ದೇ ಇರುವುದು. ಯಾವುದೇ ಫಲಿತಾಂಶ ಅಂತಿಮವಲ್ಲ. ಮರಳಿ ಪ್ರಯತ್ನ ಮಾಡುವ ಅವಕಾಶ ಎಲ್ಲರಿಗೂ ಇದೆಯೆಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಿ.
ಓದಲು, ಸಾಧಿಸಲು ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಬಿಟ್ಟು ಸಾವಿರಾರು ಕ್ಷೇತ್ರಗಳಿವೆ. ಅವುಗಳಲ್ಲಿ ತಮಗೆ ಆಸಕ್ತಿ, ಸಾಮರ್ಥ್ಯವಿರುವ ಕ್ಷೇತ್ರವನ್ನು ವಿದ್ಯಾರ್ಥಿಗಳೇ ಆಯ್ಕೆ ಮಾಡಿಕೊಳ್ಳಲಿ.
ಪೋಷಕರು ಶೋಷಕರಾಗಬಾರದು. ಪೋಷಕರು ತಮ್ಮ ಮಕ್ಕಳು ಮುಂದಿನ ಸುಲಭವಾಗಿ ಆಯ್ಕೆ ಮಾಡಿಕೊಳ್ಳಲು ಬೇಕಾದ ಬೆಂಬಲ, ಸಲಹೆ, ಮಾರ್ಗದರ್ಶನವೊದಗಿಸುವ ಕೆಲಸ ಮಾಡಬೇಕೇ ಹೊರತು ತಮ್ಮ ನಿರೀಕ್ಷೆ/ಗುರಿಗಳನ್ನು ಅವರ ಮೇಲೆ ಹೇರುವ ಕೆಲಸ ಮಾಡಬಾರದು. ನೆನಪಿರಲಿ ಮಕ್ಕಳಿಗೆ ಅವರದ್ದೇ ಆದ ವ್ಯಕ್ತಿತ್ವಯಿದೆ, ಜೀವನವಿದೆ, ಗುರಿಯಿದೆ.
ಎಲ್ಲರಿಗೂ All The Best
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.