ರಂಗಾಯಣ ನೋಡುವ ಓಂಪುರಿ ಆಸೆ ಈಡೇರಲೇ ಇಲ್ಲ!

Published : Jan 06, 2017, 05:58 PM ISTUpdated : Apr 11, 2018, 12:36 PM IST
ರಂಗಾಯಣ ನೋಡುವ ಓಂಪುರಿ ಆಸೆ ಈಡೇರಲೇ ಇಲ್ಲ!

ಸಾರಾಂಶ

ಕಾರಂತರು ಮೆಚ್ಚಿ ಬೆನ್ನುತಟ್ಟಿದ್ದ ಹಲವು ನಟರ ಪೈಕಿ ಬಾಲಿವುಡ್ ನಟ ಓಂಪುರಿ ಕೂಡ ಒಬ್ಬರು. ಆ ಕ್ಷಣಗಳನ್ನು ಆಗಾಗ ಸ್ಮರಿಸುತ್ತಿದ್ದ ಓಂಪುರಿ ಮೈಸೂರಿನಿಂದ ಯಾವುದೇ ಕಲಾವಿದರು ದೆಹಲಿ ಅಥವಾ ಇನ್ನಿತರ ಕಡೆ ಸಿಕ್ಕರೆ ರಂಗಾಯಣ ನೋಡಬೇಕೆಂಬ ಬಯಕೆ ತೋಡಿಕೊಂಡಿದ್ದರು.

-ಉತ್ತನಹಳ್ಳಿ ಮಹದೇವ, ಮೈಸೂರು

ರಂಗಭೀಷ್ಮ ಬಿ.ವಿ. ಕಾರಂತರು ಮೆಚ್ಚಿದ್ದ ಹಲವು ನಟರ ಪೈಕಿ ನಾಸಿರುದ್ದಿನ್ ಷಾ ಅವರಿಗೇನೋ ರಂಗಾಯಣ ನೋಡುವ ಆಸೆ ಈಡೇರಿತು, ಆದರೆ ಅವರ ಸಾಲಿನಲ್ಲಿದ್ದ ಮತ್ತೊಬ್ಬ ನಟ ಓಂಪುರಿ ಅವರ ಆಸೆ ಈಡೇರುವ ಮೊದಲೇ ಅವರು ಇಹಲೋಕ ತ್ಯಜಿಸಿ, ಬದುಕಿನ ನಾಟಕಕ್ಕೆ ವಿದಾಯ ಹೇಳಿದ್ದಾರೆ.

2014ರಲ್ಲಿ ನಾಸಿರುದ್ದಿನ್ ಷಾ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ಉದ್ಘಾಟಿಸಿ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಾರಂತರ ಜತೆಗಿನ ಒಡನಾಟವನ್ನು ಸ್ಮರಿಸಿದ್ದರು. ಈ ಬಾರಿ ಜ.13ರಿಂದ 18ರವರೆಗೆ ನಡೆಯುವ ಬಹುರೂಪಿ ಉದ್ಘಾಟನೆಗೆ ಓಂಪುರಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಓಂಪುರಿ ಅವರ ಸಾವು ಕೇವಲ ಬಾಲಿವುಡ್‌ಗೆ ಮಾತ್ರವಲ್ಲ, ಮೈಸೂರಿನ ರಂಗಾಸಕ್ತರಿಗೂ ಆಘಾತವನ್ನುಂಟು ಮಾಡಿದೆ.

ಕಾರಂತರು ಮೆಚ್ಚಿ ಬೆನ್ನುತಟ್ಟಿದ್ದ ಹಲವು ನಟರ ಪೈಕಿ ಬಾಲಿವುಡ್ ನಟ ಓಂಪುರಿ ಕೂಡ ಒಬ್ಬರು. ಆ ಕ್ಷಣಗಳನ್ನು ಆಗಾಗ ಸ್ಮರಿಸುತ್ತಿದ್ದ ಓಂಪುರಿ ಮೈಸೂರಿನಿಂದ ಯಾವುದೇ ಕಲಾವಿದರು ದೆಹಲಿ ಅಥವಾ ಇನ್ನಿತರ ಕಡೆ ಸಿಕ್ಕರೆ ರಂಗಾಯಣ ನೋಡಬೇಕೆಂಬ ಬಯಕೆ ತೋಡಿಕೊಂಡಿದ್ದರು. ಎಷ್ಟೋ ಸಲ ಮೈಸೂರಿಗೆ ಬರಲು ತವಕಿಸುತ್ತಿದ್ದರು. ಅದಕ್ಕೊಂದು ಸೂಕ್ತ ಸಂದರ್ಭ ಒದಗಿ ಬರಲಿ ಎಂದು ಕಾಯುತ್ತಿದ್ದರು.

‘ನಾನು ಹಲವು ಬಾರಿ ಓಂಪುರಿ ಅವರನ್ನು ಭೇಟಿಯಾದಾಗ ಮೈಸೂರು ರಂಗಾಯಣ ನೋಡುವ ಬಯಕೆ ವ್ಯಕ್ತಪಡಿಸಿದ್ದರು. ಕನ್ನಡ ಚಲನಚಿತ್ರ ಮತ್ತು ಕನ್ನಡ ರಂಗಭೂಮಿ ಜತೆ ಒಡನಾಟ ಹೊಂದಿದ್ದ ಓಂಪುರಿ ಬಿ.ವಿ. ಕಾರಂತರ ಬಹಳ ದೊಡ್ಡ ಅಭಿಮಾನಿ ಆಗಿದ್ದರು. ರಾಷ್ಟ್ರೀಯ ನಾಟಕ ಶಾಲೆಗೆ ನಟನೆ ಛಾಪು ಮೂಡಿಸಿದ ಕಾರಂತರು ಹೆಚ್ಚು ಪ್ರೀತಿಸುತ್ತಿದ್ದ ವಿರಳ ನಟರಲ್ಲಿ ಓಂಪುರಿ ಕೂಡ ಒಬ್ಬರಾಗಿದ್ದರು’’ ಎಂದು ಎನ್‌ಎಸ್‌ಡಿ ಹಿರಿಯ ವಿದ್ಯಾರ್ಥಿ ಹಾಗೂ ರಂಗಾಯಣದ ಮಾಜಿ ನಿರ್ದೇಶಕ ಎಚ್. ಜನಾರ್ದನ್ ಓಂ ಪುರಿ ಅವರ ಓಡನಾಟ ಸ್ಮರಿಸಿದರು.

ಓಂಪುರಿ ಬದಲು ಉಮಾಶ್ರೀ:

ರಂಗಾಯಣದಲ್ಲಿ ಜ.13ರಿಂದ 18ರವರೆಗೆ ನಡೆಯುವ ‘ಬಹುರೂಪಿ ಅಂತಾರಾಷ್ಟ್ರೀಯ ಬಹುಭಾಷಾ ನಾಟಕೋತ್ಸವ’ದ ಉದ್ಘಾಟನೆಯನ್ನು ಓಂಪುರಿ ಅವರ ನಿಧನದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರಿಂದ ಮಾಡಿಸಲು ರಂಗಾಯಣ ನಿರ್ದೇಶಕ ಕೆ.ಎ. ದಯಾನಂದ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಬಾರಿ ನಾಟಕೋತ್ಸವದಲ್ಲಿ ಲಂಡನ್ (ಮೀಡಿಯಾ ನಾಟಕ), ಪೋಲೆಂಡ್ (ಸಚ್ ಈಸ್ ಲೈ), ಬಾಂಗ್ಲಾದೇಶ (ಅಮೀನ ಸುಂದೋರಿ), ಶ್ರೀಲಂಕಾ (ಸೆಕ್ಕುವಾ) ನಾಟಕಗಳು, 9 ಹೊರ ರಾಜ್ಯ ಹಾಗೂ 6 ರಾಜ್ಯದ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಕಲಾವಿದರಿಗೆ ಆನಂದ- ಆಘಾತ!

ರಂಗಾಯಣ ಕಲಾವಿದರನ್ನು ಬಹುಕಾಲದಿಂದ ಕಾಡುತ್ತಿದ್ದ ನಿವೃತ್ತಿ ನಂತರದ ಇಡುಗಂಟು ಕನಸನ್ನು ಸರ್ಕಾರ ಈಡೇರಿಸಿದೆ. ಗುರುವಾರ ಸಂಜೆಯಷ್ಟೇ ಆದೇಶ ಹೊರಬಿದ್ದ ಹಿನ್ನೆಲೆಯಲ್ಲಿ ಸಂತೋಷದಲ್ಲಿದ್ದ ಕಲಾವಿದರಿಗೆ, ಶುಕ್ರವಾರ ಬೆಳಗ್ಗೆ ನಟ ಓಂಪುರಿ ಅವರ ಸಾವಿನ ಸುದ್ದಿ ಆಘಾತ ಉಂಟು ಮಾಡಿದೆ.

(ಕನ್ನಡಪ್ರಭ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಡಿ.20ಕ್ಕೆ ಚಿತ್ರಕಲಾ ಸ್ಪರ್ಧೆ: ಎಲ್ಲಿ?
ವಿಶ್ವೇಶ್ವರಯ್ಯ ಟರ್ಮಿನಲ್‌ ರೈಲು ನಿಲ್ದಾಣ ವಿಸ್ತರಣೆ ಕಾರ್ಯ ಆರಂಭ: ಪ್ರಯಾಣಿಕರು ಕಾಯುವ ದುಸ್ಥಿತಿ