ಶೌಚಾಲಯ, ಚರಂಡಿ ಸ್ವಚ್ಛ ಮಾಡಲು ಎಂಪಿ ಆಗಿಲ್ಲ: ಮೋದಿ ಯೋಜನೆಗೆ ಪ್ರಜ್ಞಾ ಅಪಸ್ವರ!

By Web DeskFirst Published Jul 22, 2019, 8:52 AM IST
Highlights

ಶೌಚಾಲಯ, ಚರಂಡಿ ಸ್ವಚ್ಛ ಮಾಡಲು ಸಂಸದೆ ಆಗಿಲ್ಲ| ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ವಿವಾದಿತ ಹೇಳಿಕೆ

ಸೆಹೋರ್‌[ಜು.22]: ಒಂದೆಡೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತ ದೇಶದ ಅತಿದೊಡ್ಡ ಸ್ವಚ್ಛತಾ ಆಂದೋಲನ ಎಂದೇ ಪರಿಗಣಿತವಾದ ‘ಸ್ವಚ್ಛ ಭಾರತ ಅಭಿಯಾನ’ಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ.

ಆದರೆ, ಆಡಳಿತಾರೂಢ ಬಿಜೆಪಿಯ ನೂತನ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರು, ತಾನು ಶೌಚಾಲಯಗಳು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವ ಸಲುವಾಗಿ ಸಂಸದೆಯಾಗಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನಕ್ಕೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾನುವಾರ ಮಧ್ಯಪ್ರದೇಶದ ಸೆಹೋರ್‌ ಜಿಲ್ಲೆಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರೊಂದಿಗಿನ ಸಭೆಯಲ್ಲಿ ಸಾರ್ವಜನಿಕರು ತಾವು ಎದುರಿಸುತ್ತಿರುವ ಶುಚಿತ್ವ ಹಾಗೂ ನೈರ್ಮಲ್ಯ ಸಮಸ್ಯೆ ಕುರಿತು ಸಂಸದೆ ಪ್ರಜ್ಞಾ ಸಿಂಗ್‌ ಅವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಜ್ಞಾ ಸಿಂಗ್‌, ನನ್ನ ಜವಾಬ್ದಾರಿಯನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಆದರೆ, ಚರಂಡಿ ಮತ್ತು ನಿಮ್ಮ ಶೌಚಾಲಯಗಳನ್ನು ಶುಚಿಗೊಳಿಸಲು ನಾನು ಸಂಸದೆಯಾಗಿ ಆಯ್ಕೆಯಾಗಿಲ್ಲ. ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ನನ್ನ ಕೆಲಸವಲ್ಲ ಎಂದು ಹೇಳಿದರು.

click me!