ಮಲೆನಾಡಲ್ಲಿ ಮಳೆಯ ಅಬ್ಬರ : ಹೆಚ್ಚಿದ ಕಾವೇರಿ ಮಟ್ಟ

Published : Jul 22, 2019, 08:43 AM IST
ಮಲೆನಾಡಲ್ಲಿ ಮಳೆಯ ಅಬ್ಬರ : ಹೆಚ್ಚಿದ ಕಾವೇರಿ ಮಟ್ಟ

ಸಾರಾಂಶ

ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಮುಂಗಾರಿನ ಅಬ್ಬರ ಹೆಚ್ಚಳವಾಗುತ್ತಿದೆ.

ಬೆಂಗಳೂರು [ಜು.22]:  ರಾಜ್ಯದ ಕರಾವಳಿ, ಮಲೆನಾಡುಗಳ ಬಹುತೇಕ ಭಾಗ ಮತ್ತು ಬಯಲು ಸೀಮೆಯಲ್ಲಿ ಭಾನುವಾರವೂ ಮಳೆಯಾಗಿದೆ. ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಕಾವೇರಿ ನದಿ ನೀರಿನ ಮಟ್ಟಹೆಚ್ಚಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜು.22ರವರೆಗೆ ಹವಾಮಾನ ಇಲಾಖೆಯ ರೆಡ್‌ ಅಲರ್ಟ್‌ ಘೋಷಣೆಯ ಹೊರತಾಗಿಯೂ ಹೇಳಿಕೊಳ್ಳುವಂಥ ಮಳೆಯ ಅಬ್ಬರ ಕಂಡುಬಂದಿಲ್ಲ. ಮುಂಜಾನೆ ಮಾತ್ರ ಧಾರಾಕಾರ ಮಳೆ ಸುರಿದಿದೆ. ಆದರೆ, ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ಪಾಣಾಜೆ ಸಂಪರ್ಕಿಸುವ ಇರ್ದೆ ಗ್ರಾಮದ ಚೆಲ್ಯಡ್ಕ ಸೇತುವೆ ಮುಳುಗಡೆಯಾಗಿದೆ. ‘ಮುಳುಗು ಸೇತುವೆ’ ಎಂದೇ ಕರೆಯಲ್ಪಡುವ ಈ ಸೇತುವೆ ಈ ಮಳೆಗಾಲದಲ್ಲಿ ಮುಳುಗಡೆಯಾಗಿದ್ದು ಇದೇ ಮೊದಲು. ಇನ್ನು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಳಿಯಾರಗೋಳಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದ್ದು, ಹೆಜಮಾಡಿ ಗ್ರಾಮದ ಪ್ರಾಥಮಿಕ ಶಾಲೆಯ ಮೇಲೆ ಮರಬಿದ್ದು ಭಾಗಶಃ ಹಾನಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸೇರಿ ಕರಾವಳಿ ಭಾಗದಲ್ಲಿ ಭರ್ಜರಿ ಮಳೆಯಾಗಿದೆ. ಭಾರೀ ಗಾಳಿಯಿಂದಾಗಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಸಾಂಪ್ರದಾಯಿಕ ಮೀನುಗಾರಿಕಾ ಬೋಟ್‌ಗಳು ಕಡಲಿಗೆ ಇಳಿಯುವ ಧೈರ್ಯ ತೋರಿಲ್ಲ.

ಕೊಡಗಿನಲ್ಲಿ ಮಳೆ:

ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದ್ದು, ಜಿಲ್ಲಾ ಕೇಂದ್ರ ಮಡಿಕೇರಿಯ ಹಳೆ ಬಸ್‌ ನಿಲ್ದಾಣದ ಬಳಿ ಮತ್ತೆ ಸಣ್ಣ ಪ್ರಮಾಣದಲ್ಲಿ ಬರೆ ಕುಸಿತ ಉಂಟಾಗಿದೆ. ಕಳೆದ ವರ್ಷವೂ ಇಲ್ಲಿ ಗುಡ್ಡ ಕುಸಿದಿತ್ತು. ಇದರಿಂದಾಗಿ ಬಸ್‌ ನಿಲ್ದಾಣವನ್ನು ಮುನ್ನೆಚ್ಚರಿಕಾ ಕ್ರಮವಾಗಿ ತೆರವುಗೊಳಿಸಲಾಗಿತ್ತು. ಪ್ರತಿಬಾರಿ ಮಳೆಗಾಲದಲ್ಲಿ ಮುಳುಗಡೆಯಾಗುವ ಭಾಗಮಂಡಲ-ನಾಪೋಕ್ಲು ರಸ್ತೆಯ ಮೇಲೆ ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ನೀರು ಬಂದಿದೆ. ಆದರೆ, ರಾತ್ರಿವರೆಗೂ ವಾಹನ ಸಂಚಾರಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಉಳಿದಂತೆ ಜಿಲ್ಲೆಯ ವಿರಾಜಪೇಟೆ, ಸುಂಟಿಕೊಪ್ಪ ಮತ್ತಿತರ ಕಡೆಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗಿದೆ.

ಹಾಸನ ಜಿಲ್ಲೆಯ ಮಲೆನಾಡು ತಾಲೂಕುಗಳಾದ ಸಕಲೇಶಪುರ, ಆಲೂರು, ಬೇಲೂರು ಮತ್ತು ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಹೋಬಳಿಯಲ್ಲಿ ಉತ್ತಮ ಮಳೆ ಆಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಉತ್ತಮ ಮಳೆಯಾಗಿದ್ದರೆ, ಮೂಡಿಗೆರೆ, ಕೊಪ್ಪ, ನ.ರಾ.ಪುರ, ಕಡೂರು, ತರೀಕೆರೆಗಳಲ್ಲಿ ಸಾಧಾರಣ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ಅಲ್ಪ ಮಳೆ ಬಿದ್ದಿದೆ. ಧಾರವಾಡ, ಹಾವೇರಿ, ಬೆಂಗಳೂರಲ್ಲಿ ಕೆಲಕಾಲ ಸಾಧಾರಣ ಮಳೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಒಂದು-ಎರಡು ಬಣಗಳೆರಡು..' ಹಾಡಿನ ಮೂಲಕ ಸರ್ಕಾರದ ಕಾಲೆಳೆದ ಅಭಯ್ ಪಾಟೀಲ್
ಎರಡು ತಿಂಗಳು ಇಂಟರ್ನ್‌ಶಿಪ್ ಮಾಡುವವರಿಗೆ 4 ಲಕ್ಷ ಸ್ಟೈಫಂಡ್ ಕೊಡುತ್ತದೆ ಈ ಕಾಲೇಜು