ಲೀಲಾವತಿ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ; ರೋಗಿಗಳ ಸ್ಥಿತಿ ಕೇಳೋರಿಲ್ಲ!

By Web DeskFirst Published Mar 8, 2019, 11:12 AM IST
Highlights

ಹಿರಿಯ ನಟಿ ಲೀಲಾವತಿ ಆಸ್ಪತ್ರೆ ನಿರ್ಮಾಣ ಮಾಡಿದ ಆಸ್ಪತ್ರೆಗೆ ವೈದ್ಯರ ಸಮಸ್ಯೆ |  ನೂರಾರು ರೋಗಿಗಳಿಗೆ ಸಂಕಷ್ಟ | ರೋಗಿಗಳ ಸ್ಥಿತಿ ಕೇಳೋರಿಲ್ಲ 

ಬೆಂಗಳೂರು (ಮಾ. 08): ಗ್ರಾಮೀಣ ಭಾಗದ ರೈತಾಪಿ ಹಾಗೂ ಬಡಜನರ ಅನುಕೂಲಕ್ಕಾಗಿ, ಹಿರಿಯ ಚಿತ್ರನಟಿ ಡಾ.ಲೀಲಾವತಿ ನಿರ್ಮಾಣ ಮಾಡಿರುವ ಆಸ್ಪತ್ರೆಗೆ ಮತ್ತೆ ಸಂಕಷ್ಟ ಎದುರಾಗಿದೆ. 

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ 2009ರಲ್ಲಿ, ಹಿರಿಯ ಚಿತ್ರನಟಿ ಲೀಲಾವತಿಯವರು ತಮ್ಮ ಸ್ವಂತ ಜಮೀನಿನಲ್ಲಿ, ಆಸ್ಪತ್ರೆ ನಿರ್ಮಾಣ ಮಾಡಿದ್ದರು. ನಂತರ ಆಸ್ಪತ್ರೆಯನ್ನು ಸರ್ಕಾರದ ಸ್ವಾಧೀನಕ್ಕೆ ನೀಡಿ, ನೆಲಮಂಗಲ ಆಡಳಿತ ವೈಧ್ಯಾಧಿಕಾರಿ ಹೆಸರಿಗೆ ದಾಖಲಾತಿಗಳನ್ನ ವರ್ಗಾವಣೆ ಮಾಡಿದ್ದಾರೆ. 

ಆಸ್ಪತ್ರೆ ನಿರ್ಮಾಣ ಮಾಡಿ, ಸರ್ಕಾರದ ಸ್ವಾಧೀನಕ್ಕೆ ನೀಡಿದ್ದರೂ ಇದುವರೆಗೂ ಸೂಕ್ತ ವೈದ್ಯರಿಲ್ಲದೇ ಆಸ್ಪತ್ರೆ ಸದಾ ಕಾಲ ಬಾಗಿಲು ಮುಚ್ಚಿರುವ ಸ್ಥಿತಿಯಲ್ಲೇ ಇದೆ. ಇನ್ನು ಕಳೆದ ವರ್ಷ ದುಷ್ಕರ್ಮಿಗಳ ಗುಂಪೊಂದು ಆಸ್ಪತ್ರೆಯ ಮೇಲ್ಚಾವಣಿ ಸೇರಿದಂತೆ ಪೀಠೋಪಕರಣಗಳನ್ನು ಧ್ವಂಸಗೊಳಿಸಿತ್ತು, ಇಂತಹ ಘಟನೆಗಳನ್ನು ನಿಯಂತ್ರಿಸಲು ನೆಲಮಂಗಲ ತಾಲೂಕು ಆಸ್ಪತ್ರೆಯ ವೈಧ್ಯಾಧಿಕಾರಿಗಳು ಲೀಲಾವತಿಯವರಿಗೆ, ಆಸ್ಪತ್ರೆಗೆ ಸೆಕ್ಯುರಿಟಿ ಗಾರ್ಡ್ ನೇಮಿಸುವಂತೆ ತಿಳಿಸಿತ್ತು. ಆದ್ರೆ ಇದುವರೆಗೂ ಅವರಿಗೆ ಸಂಬಳ ನೀಡದೇ ಆರೋಗ್ಯ ಇಲಾಖೆ ಸತಾಯಿಸುತ್ತಲೇ ಬಂದಿದೆ. 

ಸೆಕ್ಯುರಿಟಿ ಗಾರ್ಡ್‍ಗಳಿಗೂ ಸ್ವತಃ ಲೀಲಾವತಿಯವರೇ ಸಂಬಳ ಕೊಟ್ಟು ನಿಬಾಯಿಸಿಕೊಳ್ಳುತ್ತಾ ಬಂದಿದ್ದಾರೆ. ಇನ್ನೂ ಈ ಹಿಂದಿನ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಯು.ಟಿ ಖಾದರ್ ಹಾಗೂ ರಮೇಶ್ ಕುಮಾರ್ ಸಹ ಆಸ್ಪತ್ರೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದ್ರೆ ಎಲ್ಲಾ ಭರವಸೆಗಳು ಇತ್ತೀಚೆಗೆ ಹುಸಿಯಾಗಿದೆ ಎನ್ನಲಾಗಿದೆ. 

ಕಳೆದ ಕೆಲ ದಿನಗಳಿಂದ ಮಂಜುಳಾ ಎನ್ನುವ ವೈದ್ಯರು ಆಸ್ಪತ್ರೆಗೆ ಬರುತ್ತಿದ್ದರು. ಆದರೆ ತಾಲೂಕು ಆಸ್ಪತ್ರೆ ಮುಖ್ಯ ವ್ಯವಸ್ಥಾಪಕ ಅಧಿಕಾರಿ ನರಸಿಂಹಯ್ಯ, ಆಸ್ಪತ್ರೆಗೆ ಬಾಗಿಲು ಹಾಕಿಕೊಂಡು ಬರುವಂತೆ ಸೂಚನೆ ನೀಡಿದ್ದಾರಂತೆ. ಹೀಗಾಗಿ ಗ್ರಾಮೀಣ ಪ್ರದೇಶದ ಸಾವಿರಾರು ರೋಗಿಗಳಿಗೆ ಅನಾನುಕೂಲವಾಗಿದೆ ಎಂದು ಹಿರಿಯ ನಟಿ ಲೀಲಾವತಿಯವರು ತಮ್ಮ ದುಖಃವನ್ನು ವ್ಯಕ್ತಪಡಿಸಿದ್ದಾರೆ. 
 

click me!