ಏರಿಯಾ ಬಿಡಿಸಿದ್ದಕ್ಕೆ ಕದಿರೇಶ್ ಹತ್ಯೆ!

By ಎನ್. ಲಕ್ಷ್ಮಣ್First Published Feb 24, 2018, 9:54 AM IST
Highlights
  • ನಮಗೆ ಸುಖಾಸುಮ್ಮನೆ ಹೊಡೆಸುತ್ತಿದ್ದ  ಕದಿರೇಶ್
  • ಹತ್ಯೆ ಹಿಂದೆ ರಾಜಕೀಯ ಉದ್ದೇಶ ಇಲ್ಲ: ಹಂತಕರು

ಬೆಂಗಳೂರು: 'ಕದಿರೇಶ್ ಏರಿಯಾದಲ್ಲಿರುವ ಹುಡುಗರಿಗೆ ಬಾಸ್ ಆಗಿದ್ದ. ಆತ ಬೆಳೆಸುತ್ತಿದ್ದ ಹುಡ್ಗರು ನಮ್ಮ ಮೇಲೆ ಆಗ್ಗಾಗ್ಗೆ ಹಲ್ಲೆ ನಡೆಸುತ್ತಿದ್ರು. ಹೀಗಾಗಿ ಬಾಸ್‌ನ್ನೇ ಮುಗಿಸಿ ಬಿಟ್ರೆ ಹೇಗೆ? ಎಂದು ಚರ್ಚಿಸಿ ಕದಿರೇಶನ ಹತ್ಯೆ ಮಾಡಿ ಬಿಟ್ಟೆವು..!’ ಇದೇ ತಿಂಗಳ 7ರಂದು ನಡೆದಿದ್ದ ಛಲವಾದಿ ಪಾಳ್ಯ ವಾರ್ಡ್‌ನ ಬಿಜೆಪಿ ಕಾರ್ಪೋರೇಟರ್ ರೇಖಾ ಅವರ ಪತಿ ಕದಿರೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವಶಂಕರ್ ಅಲಿಯಾಸ್ ಶಿವ ತನಿಖೆ ವೇಳೆ ಹೀಗೆ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನೆ.

ಕದಿರೇಶ್ ಹತ್ಯೆಯ ಹಿಂದೆ ಯಾವುದೇ ರಾಜಕೀಯ ಕಾರಣಗಳಿಲ್ಲ. ಕದಿರೇಶ್ ತೊಂದರೆಯಾಗಿ ಪರಿಣಮಿಸಿದ್ದರು ಎಂಬ ಒಂದೇ ಕಾರಣಕ್ಕೆ ಅವರ ಹತ್ಯೆ ನಡೆದಿದೆ ಎಂದು ತನಿಖಾಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಶಿವಶಂಕರ್ ಅಲಿಯಾಸ್ ಶಿವ ಈತನ ಸಹಚರರಾದ ವಿಜಯ್ ಅಲಿಯಾಸ್ ಕುಂಟಿಯಾ ಹಾಗೂ ರಾಜೇಶ್ ಅಲಿಯಾಸ್ ಬಿಲ್ಲಾ ಎಂಬಾತನನ್ನು ಪೊಲೀಸರು ಬಂಧಿಸಿ, ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕದಿರೇಶ್ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಸ್ಥಳೀಯ ಮುಖಂಡರಾಗಿದ್ದು ಸಂಸದ ಪಿ.ಸಿ.ಮೋಹನ್ ಬೆಂಬಲಿಗರಾಗಿದ್ದರು. ಕಳೆದ ಪಾಲಿಕೆ ಚುನಾವಣೆಯಲ್ಲಿ ಛಲವಾದಿಪಾಳ್ಯ ವಾರ್ಡ್‌ನಿಂದ ಪತ್ನಿ ರೇಖಾ ಅವರನ್ನು ನಿಲ್ಲಿಸಿ ಗೆಲ್ಲಿಸಿದ್ದರು.  ಇದಕ್ಕೂ ಮುನ್ನ ಕದಿರೇಶ್ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದರು.

ಸುಖಾಸುಮ್ಮನೆ ಕಿರುಕುಳ: ಕದಿರೇಶ್ ವಿರುದ್ಧ ಒಂದು ಕೊಲೆ, ಕೊಲೆ ಯತ್ನ ಪ್ರಕರಣ ಸೇರಿದಂತೆ 12 ಅಪರಾಧ ಪ್ರಕರಣಗಳಿವೆ. ಕದಿರೇಶ್ ಆಗಿನ ಕುಖ್ಯಾತ ರೌಡಿ ಬೆಕ್ಕಿನ ಕಣ್ಣು ರಾಜೇಂದ್ರ ತಂಡದ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ರಾಜಕೀಯಕ್ಕೆ ಪ್ರವೇಶ ಪಡೆದ ಬಳಿಕ ಕದಿರೇಶ್ ಸ್ಥಳೀಯವಾಗಿ ಹುಡುಗರನ್ನು ಬೆಳೆಸುತ್ತಿದ್ದರು. ಕದಿರೇಶನ ಅಕ್ಕನ ಮಕ್ಕಳು ಸುಖಾಸುಮ್ಮನೆ ನವೀನ್ ಸಹೋದರರ ಹಾಗೂ ಶಿವನ ಮೇಲೆ ಹಲ್ಲೆ ನಡೆಸಿ ತೊಂದರೆ ನೀಡುತ್ತಿದ್ದರು. ಕಳೆದ ವರ್ಷ ಮೇ ತಿಂಗಳಲ್ಲಿ ನವೀನ್, ವಿನಯ್, ವಿಜಯ್ ಕಾಟನ್‌ಪೇಟೆಯ ಆಂಜನಪ್ಪ ಗಾರ್ಡನ್‌ನಲ್ಲಿ ತಮಿಳು ನಟ ಅಜಿತ್ ಹುಟ್ಟುಹಬ್ಬ ಆಚರಿಸುತ್ತಿದ್ದರು. ಈ ವೇಳೆ ಕದಿರೇಶ್‌ನ

ಅಕ್ಕನ ಮಗ ಅರುಣ್ ಹಾಗೂ ಇನ್ನಿತರರು ಸ್ಥಳಕ್ಕೆ ಬಂದು ನವೀನ್ ಗುಂಪಿನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಅಲ್ಲದೆ, ಆರು ತಿಂಗಳ ಹಿಂದೆ ನಾಗವಾರ ಬಳಿ ಕೂಡ ಕೊಲೆಗೆ ಯತ್ನಿಸಿದ್ದರು. ಅಂದಿನಿಂದ ಶಿವ ಅಂಡ್ ಗ್ಯಾಂಗ್ ಕಾಟನ್‌ಪೇಟೆಗೆ ಬರುತ್ತಿರಲಿಲ್ಲ.

‘ಆಂಜನಪ್ಪ ಗಾರ್ಡನ್‌ನಲ್ಲಿ ನವೀನ್ ಸಹೋದರರು, ಪೋಷಕರು ವಾಸವಿದ್ದರು. ಆದರೆ, ಕದಿರೇಶ್ ಹುಡುರನ್ನು ಬೆಳೆಸುತ್ತಾ ಮುಳುವಾಗಿದ್ದ. ಕದಿರೇಶ್‌ನನ್ನು ಸುಮ್ಮನೆ ಬಿಟ್ಟರೆ ನಮ್ಮನ್ನೇ ಕೊಲೆ ಮಾಡ್ತಾರೆ. ಕದಿರೇಶ್‌ನಿಂದಾಗಿ ನಾವು ಆಂಜನಪ್ಪ ಗಾರ್ಡನ್‌ಗೆ ಬರಲು ಹಿಂದೇಟು ಹಾಕುವಂತಾಗಿದೆ.

ಹುಡುಗರನ್ನು ಬೆಳೆಸುತ್ತಿರುವ ಕದಿರೇಶ್‌ನನ್ನು ಮುಗಿಸಿ ಬಿಟ್ಟರೆ ಏರಿಯಾದಲ್ಲಿ ನಾವೇ ಬಾಸ್. ಬಳಿಕ ಅರಾಮ ಆಗಿ ಇರಬಹುದು ಎಂದು ನಿರ್ಧಾರ ಮಾಡಿದೆವು. ಬಳಿಕ ಶಿವ ಹೇಳಿದಂತೆ ನವೀನ್ ಫೆ.7ರಂದು ಐವರು ಸಹಚರರೊಂದಿಗೆ ಬಂದು ಕೃತ್ಯ ಎಸಗಿದ್ದಾನೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಕದಿರೇಶ್‌ನ ಅಕ್ಕ ರೌಡಿಶೀಟರ್!

ಕದಿರೇಶ್‌ನ ಅಕ್ಕ ಮಾಲಾ ಕಾಟನ್‌ಪೇಟೆ ರೌಡಿಶೀಟರ್ ಆಗಿದ್ದು, ಈಕೆಯ ವಿರುದ್ಧ ನಾಲ್ಕೈದು ಗಾಂಜಾ ಮಾರಾಟ ಪ್ರಕರಣಗಳಿವೆ. ಈಕೆ ಸ್ಥಳೀಯವಾಗಿ ಹುಡುಗರನ್ನು ಸಾಕುತ್ತಿದ್ದಳು. ಇದೇ ಹುಡುಗರು ಕದಿರೇಶ್ ಬೆಂಬಲಕ್ಕೆ ನಿಂತಿದ್ದು, ಶಿವನ ಗ್ಯಾಂಗ್ ಮೇಲೆ ಕೊಲೆಗೆ ಯತ್ನಿಸಿದ್ದರು.

ಎಟಿಎಂ ದರೋಡೆ ಪ್ರಕರಣದ ಆರೋಪಿಗಳು:

ಪೊಲೀಸರಿಗೆ ಶರಣಾಗಿದ್ದ ನವೀನ್ ಮತ್ತು ವಿನಯ್ ಸಹೋದರರು ವಿಚಾರಣೆ ವೇಳೆ ಶಿವನ ಬಗ್ಗೆ ಬಾಯ್ಬಿಟ್ಟಿದ್ದರು. ಶಿವ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ. ತನ್ನ ಬಳಿ ಇದ್ದ ಹಣ ಖಾಲಿಯಾದ ಬಳಿಕ ಕೋಲಾರಕ್ಕೆ ಬಂದು ಅವಿತುಕೊಂಡಿದ್ದ. ಆತನನ್ನು ಬಂಧಿಸಲಾಯಿತು. ಶಿವ ಹಾಗೂ ನವೀನ್ ವಿನಯ್ ಸಹೋದರರು 2011 ಮತ್ತು 2013ರಲ್ಲಿ ಚಂದ್ರಾಲೇಔಟ್ ಠಾಣಾ  ವ್ಯಾಪ್ತಿಯಲ್ಲಿ ನಡೆದಿದ್ದ ಎಟಿಎಂ ದರೋಡೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಖಾಸಗಿ ಬ್ಯಾಂಕ್ ನಿಂದ ಹಣ ತರುತ್ತಿದ್ದ ವ್ಯಕ್ತಿಗೆ ಮಚ್ಚಿನಿಂದ ಹಲ್ಲೆ ನಡೆಸಿ ಹಣ ಕಸಿದು ಪರಾರಿಯಾಗಿದ್ದರು. ಮತ್ತೊಂದು ಪ್ರಕರಣದಲ್ಲಿ ಎಟಿಎಂ ಕೇಂದ್ರದ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದರು. ಕೃತ್ಯ ಎಸಗುವ ವೇಳೆ ಶಿವನ ಸಹೋದರ ಮಂಜುನಾಥ್ ನೇರವಾಗಿ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದ. ಆತನಿಗೆ ಪ್ರಕರಣದಲ್ಲಿ ನಾಲ್ಕು ವರ್ಷ ಶಿಕ್ಷೆಯಾಗಿತ್ತು. ಆರೋಪಿ ಶಿವನ ಫೋಟೋ ಯಾರ ಬಳಿಯೂ ಇರಲಿಲ್ಲ. ಅಲ್ಲದೆ, ಒಂದು ಕಡೆ ನೆಲೆ ನಿಲ್ಲದ ಶಿವ ಆತನ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಇದೀಗ ಪ್ರಕರಣದಲ್ಲಿ ಚಂದ್ರಾ ಲೇಔಟ್ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

 

click me!