ಭ್ರಷ್ಟಾಚಾರ ವಿಷಯದಲ್ಲಿ ಯಾರೂ 24 ಕ್ಯಾರೆಟ್‌ ಗೋಲ್ಡ್‌ ಅಲ್ಲ!

First Published Jun 13, 2018, 12:39 PM IST
Highlights

ಭ್ರಷ್ಟಾಚಾರದ ವಿಷಯದಲ್ಲಿ ಯಾರಾದರೂ ಅಪರಂಜಿ, 24 ಕ್ಯಾರೆಟ್‌ ಚಿನ್ನ ಎಂದು ಹೇಳಿಕೊಂಡರೆ ಅದು ಆತ್ಮವಂಚನೆ ಮಾಡಿಕೊಂಡಂತೆ. ಕಳೆದ 20 ವರ್ಷಗಳಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಇದು ಏಕಾಏಕಿ ಆಗಿಲ್ಲ. ಮೇಲಿನಿಂದ ಕೆಳಗಿನವರಿಗೆ ಭ್ರಷ್ಟಾಚಾರ ವ್ಯಾಪಿಸಿದೆ. ಈಗಿನ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಉಳಿಯುವುದು ಕಷ್ಟಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿದ್ದಾರೆ.
 

ಬೆಂಗಳೂರು (ಜೂ. 13):  ಭ್ರಷ್ಟಾಚಾರದ ವಿಷಯದಲ್ಲಿ ಯಾರಾದರೂ ಅಪರಂಜಿ, 24 ಕ್ಯಾರೆಟ್‌ ಚಿನ್ನ ಎಂದು ಹೇಳಿಕೊಂಡರೆ ಅದು ಆತ್ಮವಂಚನೆ ಮಾಡಿಕೊಂಡಂತೆ. ಕಳೆದ 20 ವರ್ಷಗಳಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಇದು ಏಕಾಏಕಿ ಆಗಿಲ್ಲ. ಮೇಲಿನಿಂದ ಕೆಳಗಿನವರಿಗೆ ಭ್ರಷ್ಟಾಚಾರ ವ್ಯಾಪಿಸಿದೆ. ಈಗಿನ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಉಳಿಯುವುದು ಕಷ್ಟಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೋಮವಾರ ಮಾತನಾಡುತ್ತಾ ವಿಧಾನಸೌಧದಲ್ಲಿ ಕಳೆದ 10 ವರ್ಷದಲ್ಲಿ ಭ್ರಷ್ಟಾಚಾರ ಜಾಸ್ತಿಯಾಗಿದೆ ಎಂದು ಹೇಳಿದ್ದಕ್ಕೆ ಅವರು ಪ್ರತಿಕ್ರಿಯಿಸಿದರು.

ಹಿಂದೆ ವ್ಯವಸ್ಥೆ ಹಾಗಿತ್ತು, ಈಗ ಹೀಗಾಗಿದೆ ಎಂದು ಹೇಳುವ ಬದಲು ವ್ಯವಸ್ಥೆ ಸುಧಾರಣೆ ಮಾಡುವ ಬಗ್ಗೆ ನಾವು ಚಿಂತನೆ ಮಾಡಬೇಕು. ಜನರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಆ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕು. ಎಲ್ಲ ಪ್ರಾಮಾಣಿಕ ಕೆಲಸಗಳಿಗೂ ಫಲ ಸಿಗದೇ ಇರಬಹುದು, ಆದರೆ ಆತ್ಮವಂಚನೆ ಇಲ್ಲದೇ ನಮ್ಮ ಕರ್ತವ್ಯ ಮಾಡಬೇಕು ಎಂದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಕೃಷಿ ಸಚಿವನಾಗಿ ಹೇಗೆ ಕೆಲಸ ಮಾಡಿದ್ದೇನೆ ಎಂಬುದು ಎಲ್ಲರಿಗೂ ಗೊತ್ತು. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ವ್ಯವಸ್ಥೆ ಸುಧಾರಿಸುವ ಪ್ರಯತ್ನ ಮಾಡಿದರು. ಫಸ್ಟ್‌ ಕ್ಲಾಸ್‌ ಎಂದು ಹೇಳಿಕೊಂಡರೆ ಅದು ನಮ್ಮನ್ನು ನಾವೇ ಮೂರ್ಖರನ್ನಾಗಿ ಮಾಡಿಕೊಂಡಂತೆ. ಆದರೆ ಹಿಂದಿನ ಸರ್ಕಾರ ತನ್ನ ಇತಿಮಿತಿಯಲ್ಲಿ ಉತ್ತಮವಾಗಿ ಕೆಲಸ ಮಾಡಿದೆ. ನಾನು ಭ್ರಷ್ಟಾಚಾರ ಮಾಡಿಲ್ಲ, ನನ್ನ ಇಲಾಖೆಯಲ್ಲೂ ಭ್ರಷ್ಟಾಚಾರ ನಿಗ್ರಹಿಸಿದ್ದೇನೆ ಎಂದರು. 

click me!