ಜೆಡಿಎಸ್ ಮುಖಂಡರಿಗೆ ಕಾಂಗ್ರೆಸ್ ಸಚಿವರ ಸವಾಲು

By Web DeskFirst Published Dec 30, 2018, 8:35 AM IST
Highlights

ಎಚ್‌.ಡಿ.ರೇವಣ್ಣ ಅವರಿಗೆ ಸಕ್ಕರೆ ಸಚಿವ ಆರ್‌.ಬಿ.ತಿಮ್ಮಾಪುರ ತಿರುಗೇಟು ನೀಡಿದ್ದು, ಜೆಡಿಎಸ್‌ನಿಂದ ದಲಿತರೊಬ್ಬರಿಗೆ ಸಚಿವ ಸ್ಥಾನ ನೀಡಿ ಅವರು ದಲಿತ ಪ್ರೀತಿ ತೋರ್ಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಬೆಂಗಳೂರು :  ಕಾಂಗ್ರೆಸ್‌ ಪಕ್ಷದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರಿಗೆ ಅನ್ಯಾಯವಾಗುತ್ತಿದೆ ಎಂದಿರುವ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರಿಗೆ ಸಕ್ಕರೆ ಸಚಿವ ಆರ್‌.ಬಿ.ತಿಮ್ಮಾಪುರ ತಿರುಗೇಟು ನೀಡಿದ್ದು, ಜೆಡಿಎಸ್‌ನಿಂದ ದಲಿತರೊಬ್ಬರಿಗೆ ಸಚಿವ ಸ್ಥಾನ ನೀಡಿ ಅವರು ದಲಿತ ಪ್ರೀತಿ ತೋರ್ಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೇವಣ್ಣ ಆಗಾಗ ನಮ್ಮ (ದಲಿತ) ಮೇಲೆ ಪ್ರೀತಿ ತೋರ್ಪಡಿಸುತ್ತಾರೆ. ದಲಿತರೊಬ್ಬರನ್ನು ಸಚಿವರನ್ನಾಗಿ ಮಾಡಿ ಇನ್ನೂ ಹೆಚ್ಚಿನ ಪ್ರೀತಿ ತೋರ್ಪಡಿಸಲಿ ಎಂದರು.

ಸಚಿವ ಸ್ಥಾನದಿಂದ ಕೈಬಿಟ್ಟಬಳಿಕ ಕಳೆದ ಒಂದು ವಾರದಿಂದ ಯಾರ ಕೈಗೂ ಸಿಗದಿರುವ ರಮೇಶ ಜಾರಕಿಹೊಳಿ ಅವರಿಗೂ ಟಾಂಗ್‌ ನೀಡಿರುವ ಅವರು, ಸಚಿವ ಸ್ಥಾನ ಕಳೆದುಕೊಂಡಿದ್ದಕ್ಕೆ ಸ್ವಲ್ಪ ಬೇಸರವಾಗಿರಬಹುದು. ಹೀಗಾಗಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುತ್ತಿರಬಹುದು ಎಂದು ವ್ಯಂಗ್ಯವಾಗಿ ಹೇಳಿದರು. ಅವರು ಕಾಂಗ್ರೆಸ್‌ ಬಿಡುವುದಿಲ್ಲ. ಪಕ್ಷದಲ್ಲೇ ಇರುತ್ತಾರೆ. ಬೇಸರವಾಗಿದ್ದರಿಂದ ಹೊರಗಡೆ ಕಾಣಿಸಿಕೊಂಡಿಲ್ಲ ಎಂದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿಅವರು ಮೈತ್ರಿ ಸರ್ಕಾರದ ಬಗ್ಗೆ ಅಪಸ್ವರ ಹೊರ ಹಾಕಿದ್ದರ ಕುರಿತೂ ಪ್ರತಿಕ್ರಿಯಿಸಿದ ಅವರು, ಹೊರಟ್ಟಿಅವರಿಗೆ ಏನಾಗಿದೆ ಎಂದು ಕಾದು ನೋಡಬೇಕು ಎಂದಷ್ಟೇ ಹೇಳಿದರು.

ಇದೇವೇಳೆ ಮೈತ್ರಿ ಸರ್ಕಾರ ಐದು ವರ್ಷ ಸುಭದ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ ಅವರು, ಉಮೇಶ್‌ ಕತ್ತಿ ಅವರಿಗೆ ಮಂತ್ರಿಯಾಗಬೇಕು ಎಂಬ ಆಸೆ ಇತ್ತು ಎನಿಸುತ್ತಿದೆ. ಹೀಗಾಗಿ ಸರ್ಕಾರ 3 ಗಂಟೆಗೆ ಬೀಳುತ್ತದೆ. 6 ಗಂಟೆಗೆ ಬೀಳುತ್ತದೆ ಎಂದು ಹೇಳುತ್ತಾ ಕಾಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.


ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ ಹೊಂದಿದ್ದು ತಾಂತ್ರಿಕ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಕಬ್ಬು ಬೆಳೆಗಾರರ ಬಾಕಿ ಹಣ ತೀರಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ ಗಡುವಿನಂತೆ ಹಣ ಪಾವತಿಸುವುದಕ್ಕೆ ನಾನು ಬದ್ಧವಾಗಿದ್ದೇನೆ.

- ಆರ್‌.ಬಿ.ತಿಮ್ಮಾಪುರ, ಸಕ್ಕರೆ ಸಚಿವ

click me!