ದಸರಾ ವೇಳೆ ಉಗ್ರರ ದಾಳಿ ಭೀತಿ : ರಾಜ್ಯದ 8 ಕಡೆ ಎಚ್ಚರಿಕೆ

By Kannadaprabha NewsFirst Published Oct 1, 2019, 7:20 AM IST
Highlights

ರಾಜ್ಯದಲ್ಲಿ ಸದ್ಯ ದಸರಾ ಸಂಭ್ರಮವಿದ್ದು ಈ ವೇಳೆ ಹಲವು ಜಿಲ್ಲೆಗಳಿಗೆ ಉಗ್ರ ದಾಳಿಯ ಎಚ್ಚರಿಕೆ ನೀಡಲಾಗಿದೆ. 

ಬೆಂಗಳೂರು [ಸೆ.01]:  ವಿಶ್ವವಿಖ್ಯಾತ ದಸರಾ ಸಂಭ್ರಮಾಚರಣೆ ಮೇಲೆ ಉಗ್ರರ ಕರಿನೆರಳು ಆವರಿಸಿದ್ದು, ಈ ಬಾರಿಯ ದಸರೆಯನ್ನು ಅತ್ಯಂತ ಕಟ್ಟೆಚ್ಚರದಿಂದ ಆಚರಿಸುವಂತೆ ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಕೇಂದ್ರ ಸರ್ಕಾರ ಇಂತಹದೊಂದು ಎಚ್ಚರಿಕೆಯನ್ನು ನೀಡಲು ಮುಖ್ಯ ಕಾರಣ- ರಾಜ್ಯದ ಹಲವು ಕಡೆ ಸ್ಯಾಟಲೈಟ್‌ ಫೋನ್‌ನ ಸತತ ಬಳಕೆ!

ಕರ್ನಾಟಕದ ಮಂಡ್ಯ ಹಾಗೂ ಕರಾವಳಿ ಭಾಗದಲ್ಲಿ ಸೆಪ್ಟೆಂಬರ್‌ ಮಾಸದಲ್ಲಿ ಸ್ಯಾಟಲೈಟ್‌ ಫೋನ್‌ ಬಳಕೆಯಾಗಿದೆ ಎಂಬುದನ್ನು ಪತ್ತೆ ಮಾಡಿದ ಇಸ್ರೋ ಸಂಸ್ಥೆಯು ಈ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ಮಾಹಿತಿ ರವಾನಿಸಿದೆ. ಈ ಮಾಹಿತಿ ಆಧರಿಸಿ ರಾಜ್ಯಕ್ಕೆ ಉಗ್ರ ದಾಳಿಯ ಸಾಧ್ಯತೆ ಬಗ್ಗೆ ಎಚ್ಚರಿಸಿರುವ ಕೇಂದ್ರ ಸರ್ಕಾರವು ದಸರಾ ಆಚರಣೆ ವೇಳೆ ತೀವ್ರ ನಿಗಾ ವಹಿಸುವಂತೆ ಎಚ್ಚರಿಸಿದೆ ಎಂದು ತಿಳಿದುಬಂದಿದೆ.

ಇಸ್ರೋ ಸಂಸ್ಥೆಯು ಮೈಸೂರಿನ ನೆರೆಯ ಮಂಡ್ಯ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸ್ಯಾಟಲೈಟ್‌ ಫೋನ್‌ ಬಳಕೆಯಾಗಿರುವುದನ್ನು ಪತ್ತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆ ರಾಜ್ಯ ಸರ್ಕಾರಕ್ಕೆ ಸೂಚನೆ ರವಾನಿಸಿದ್ದು, ಸ್ಯಾಟಲೈಟ್‌ ಫೋನ್‌ ಬಳಕೆ ಮಾಡಿರುವ ಜಿಲ್ಲೆ ಸೇರಿದಂತೆ ಪ್ರತಿಯೊಂದು ಜಿಲ್ಲೆಗಳಲ್ಲಿ ತೀವ್ರ ನಿಗಾವಹಿಸಲಾಗಿದೆ. ಈ ಬಗ್ಗೆ ಎಲ್ಲಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೂ ರಾಜ್ಯ ಗುಪ್ತಚರ ಇಲಾಖೆಯಿಂದ ಪತ್ರ ರವಾನೆಯಾಗಿದ್ದು, ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.

ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆಯಿಂದ ಏಳು ಕಿ.ಮೀ. ದೂರದ ಕಿಕ್ಕೇರಿ ಬಳಿ ಸ್ಯಾಟಲೈಟ್‌ ಫೋನ್‌ ಪತ್ತೆಯಾಗಿರುವುದನ್ನು ಗುಪ್ತದಳ ಪತ್ತೆ ಹಚ್ಚಿದೆ. ಇದರ ಜತೆಗೆ, ಹೊಳೆನರಸೀಪುರದಿಂದ ದಕ್ಷಿಣ ಪೂರ್ವಾಭಿಮುಖವಾಗಿ 15 ಕಿ.ಮೀ. ದೂರದಲ್ಲಿ ಮತ್ತೊಂದು ಸ್ಯಾಟಲೈಟ್‌ ಫೋನ್‌ ಸಕ್ರಿಯವಾಗಿದೆ. ಸೆ.6ರಂದು ಈ ಎರಡೂ ಸ್ಯಾಟ್‌ಲೈಟ್‌ ಫೋನ್‌ ಬಳಕೆಯಾಗಿದೆ. ಸೆ.7ರಂದು ಉಡುಪಿಯಿಂದ 88 ಕಿ.ಮೀ. ದೂರದ ಸಮುದ್ರದಲ್ಲಿ ಬೆಳಗ್ಗೆ 10.38ರ ಸುಮಾರಿಗೆ ಈ ಸ್ಯಾಟಲೈಟ್‌ ಫೋನ್‌ ಬಳಕೆಯಾಗಿದೆ. ಅದೇ ದಿನ ಕಾರವಾರದ ಕಡಲ ತೀರದಲ್ಲಿ ಸಂಜೆ ಐದು ಗಂಟೆ ಸುಮಾರಿಗೆ ಆಗಂತುಕರು ಈ ಫೋನ್‌ ಬಳಸಿದ್ದಾರೆ.

ಸೆ.9ರಂದು ಕಾರವಾರದಿಂದ 154 ಕಿ.ಮೀ. ದೂರದಲ್ಲಿ ಹಾಗೂ ಭಟ್ಕಳದಲ್ಲಿ ಬಳಕೆಯಾಗಿದ್ದರೆ, ಸೆ.10ರಂದು ಮಂಗಳೂರಿನಲ್ಲಿ ಬಳಸಿರುವುದು ಕಂಡು ಬಂದಿದೆ. ಪ್ರಮುಖವಾಗಿ ದಸರಾ ನಡೆಯುವ ಮುನ್ನ ಹೆಚ್ಚು ಸಂಭ್ರಮಾಚರಣೆ ನಡೆಯುವ ಜಿಲ್ಲೆಗಳಲ್ಲಿ ಸ್ಯಾಟಲೈಟ್‌ ಫೋನ್‌ ಬಳಕೆ ಮಾಡಿರುವುದನ್ನು ನೋಡಿದರೆ ದಸರಾವನ್ನೇ ಗುರಿಯಾಗಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ದೇಶದಲ್ಲಿ ನಿಷೇಧಿತವಾಗಿರುವ ಸ್ಯಾಟಲೈಟ್‌ ಫೋನನ್ನು ಉಗ್ರ ಚಟುವಟಿಕೆಯಲ್ಲಿ ಬಳಸಲಾಗುತ್ತದೆ. ಇದರಿಂದ ರಾಜ್ಯದಲ್ಲಿ ಈ ಸ್ಯಾಟಲೈಟ್‌ ಫೋನ್‌ ಬಳಕೆಯಾಗಿರುವುದು ಉಗ್ರರು ರಾಜ್ಯ ಪ್ರವೇಶಿಸಿದ್ದಾರೆಯೇ ಎಂಬ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆ ಹಾಗೂ ಸೂಕ್ಮ ಪ್ರದೇಶದಲ್ಲಿ ರಾಷ್ಟ್ರೀಯ ತನಿಖಾ ತಂಡಗಳು ಸಕ್ರಿಯವಾಗಿವೆ ಎಂದು ತಿಳಿದುಬಂದಿದೆ.

ನಿಷೇಧಿತ ಸ್ಯಾಟಲೈಟ್‌ ಫೋನ್‌ ಬಳಕೆ:

2008ರಲ್ಲಿ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ಎಸಗಿದ್ದ ಉಗ್ರರು ಸ್ಯಾಟಲೈಟ್‌ ಫೋನ್‌ ಬಳಕೆ ಮಾಡಿದ್ದರು ಎಂಬುದು ಅಂದಿನ ತನಿಖಾ ಸಂಸ್ಥೆಗಳ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಹೀಗಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಸ್ಯಾಟಲೈಟ್‌ ಫೋನ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಒಂದು ವೇಳೆ ದೇಶದ ಯಾವುದೇ ಮೂಲೆಯಲ್ಲಿ ಸ್ಯಾಟಲೈಟ್‌ ಫೋನ್‌ ಬಳಕೆ ಮಾಡಿದರೆ ಕೂಡಲೇ ಕರೆ ಮಾಡಿದ ಮಾಹಿತಿಯನ್ನು ಸ್ಥಳದ ಸಹಿತ ಪತ್ತೆಹಚ್ಚುವ (ಎಲ್‌ಬಿಎಸ್‌- ಲೋಕೇಷನ್‌ ಬೇಸ್ಡ್‌ ಸಿಸ್ಟಂ) ವ್ಯವಸ್ಥೆಯನ್ನು ಇಸ್ರೋ ರೂಪಿಸಿದೆ. ಈ ಬಾರಿಯೂ ರಾಜ್ಯದ ಎಂಟು ಕಡೆ ಸ್ಯಾಟಲೈಟ್‌ ಫೋನ್‌ ಬಳಕೆಯಾಗಿರುವುದನ್ನು ಇಸ್ರೋ ಪತ್ತೆ ಹಚ್ಚಿ, ಕೇಂದ್ರ ಗೃಹ ಇಲಾಖೆಗೆ ರವಾನಿಸಿದೆ.

ಸೆ.13ರಂದು ಈ ಕುರಿತು ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮಾಹಿತಿ ರವಾನೆಯಾಗಿದೆ. ರಾಜ್ಯದಲ್ಲಿ ಎಂದಿನಂತೆ ಭದ್ರತೆ ಕಲ್ಪಿಸಲಾಗಿದೆ. ಆದರೆ ಸೂಕ್ಷ್ಮ ವಿಚಾರವಾದ ಕಾರಣ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಎಡಿಜಿಪಿ ಮಟ್ಟದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಸ್ಯಾಟಲೈಟ್‌ ಪೋನ್‌ ಬಳಕೆ ಎಲ್ಲೆಲ್ಲಿ?

1.ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆಯಿಂದ ಏಳು ಕಿ.ಮೀ. ದೂರದ ಕಿಕ್ಕೇರಿ ಬಳಿ ಸ್ಯಾಟಲೈಟ್‌ ಫೋನ್‌ ಬಳಕೆ

2. ಹೊಳೆನರಸೀಪುರದಿಂದ ದಕ್ಷಿಣ ಪೂರ್ವಾಭಿಮುಖವಾಗಿ 15 ಕಿ.ಮೀ. ದೂರದಲ್ಲಿ ಸ್ಯಾಟ್‌ಲೈಟ್‌ ಫೋನ್‌ ಸಕ್ರಿಯ

3.ಉಡುಪಿಯಿಂದ 88 ಕಿ.ಮೀ. ದೂರದ ಸಮುದ್ರದಲ್ಲಿ ಈ ಫೋನ್‌ ಬಳಕೆ

4.ಕಾರವಾರದ ಕಡಲ ತೀರದಲ್ಲೂ ಆಗಂತುಕರಿಂದ ಫೋನ್‌ ಕರೆ

5.ಕಾರವಾರದಿಂದ 154 ಕಿ.ಮೀ. ದೂರದಲ್ಲಿ, ಭಟ್ಕಳದಲ್ಲಿ ಮತ್ತು ಮಂಗಳೂರಿನಲ್ಲಿ ಬಳಕೆ

click me!