ಕೈ-ದಳ ಮೈತ್ರಿ ಮುಂದಿನ ಚುನಾವಣೆಗಿಲ್ಲ!

By Web DeskFirst Published Apr 10, 2019, 8:11 AM IST
Highlights

ಮುಂದಿನ ಚುನಾವಣೆಗೆ ಮೈತ್ರಿ ಇಲ್ಲ: ದಿನೇಶ್‌ |  ಜೆಡಿಎಸ್‌ ಜೊತೆ ಮೈತ್ರಿ ಲೋಕಸಭೆಗೆ ಸೀಮಿತ | ಸ್ಥಳೀಯ ಸಂಸ್ಥೆಗೆ ಸ್ವತಂತ್ರ ಸ್ಪರ್ಧೆ | ಗಡ್ಕರಿ ಹೆಸರೂ ಪ್ರಧಾನಿ ಹುದ್ದೆಗೆ ಕೇಳಿಸುತ್ತಿದೆ | ಮೋದಿಯೇ ಆಗ್ತಾರೆ ಎಂದೇನಿಲ್ಲ: ದಿನೇಶ್ ಗುಂಡೂರಾವ್ 

ಬೆಂಗಳೂರು (ಏ. 10):  ಜೆಡಿಎಸ್‌ ಪಕ್ಷದೊಂದಿಗಿನ ಕಾಂಗ್ರೆಸ್‌ ಮೈತ್ರಿ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಾಗಿದ್ದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳನ್ನೂ ಕಾಂಗ್ರೆಸ್‌ ಸ್ವಂತ ಬಲದಿಂದಲೇ ಎದುರಿಸಲಿದೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ಸರ್ವಾಧಿಕಾರಿ ಧೋರಣೆಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರವನ್ನು ಕೇಂದ್ರದಿಂದ ಕಿತ್ತೊಗೆಯಲು ಈ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದರು.

ಮಹಾಗಠಬಂಧನ್‌ ಅಧಿಕಾರಕ್ಕೆ ಬಂದರೆ ಯಾರು ಪ್ರಧಾನಿಯಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್‌ಗಾಂಧಿ ಅವರು ಕಾಂಗ್ರೆಸ್‌ ಪಕ್ಷದ ಪ್ರಧಾನಿ ಅಭ್ಯರ್ಥಿ. ರಾಹುಲ್‌ಗಾಂಧಿ ಅವರು ಪ್ರಧಾನಿಯಾಗಬೆಕೆಂಬುದು ನಮ್ಮ ಬಯಕೆ. ಅದರಲ್ಲಿ ಯಾವುದೇ ಗೊಂದಲ ಇಲ್ಲ. ಆದರೆ, ಈಗ ರಾಜ್ಯಗಳ ಮಟ್ಟದಲ್ಲಿ ಗಠಬಂಧನ್‌ ಮಾತ್ರ ಆಗಿದೆ, ಚುನಾವಣೆ ನಂತರ ಮಹಾಗಠಬಂಧನ್‌ ಪಕ್ಷಗಳು ಅಧಿಕಾರಕ್ಕೆ ಬಂದರೆ ಆಯಾ ಪಕ್ಷಗಳು ಪಡೆದ ಸೀಟಿನ ಮೇಲೆ ನಿರ್ಧಾರ ಮಾಡುತ್ತಾರೆ ಎಂದರು.

ಈಗ ಬಿಜೆಪಿಯಲ್ಲಿ ಕೂಡ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಆದರೆ, ಮೋದಿ ಅವರ ಸರ್ವಾಧಿಕಾರಿ ಧೋರಣೆ ಬಗ್ಗೆ ಬಿಜೆಪಿ ಆಂತರಿಕ ವಲಯದಲ್ಲೇ ಅಪಸ್ವರ ಇದೆ. ಮತ್ತೊಂದೆಡೆ ನಿತಿನ್‌ ಗಡ್ಕರಿ ಅವರ ಹೆಸರು ಕೂಡ ಪ್ರಧಾನಿ ಅಭ್ಯರ್ಥಿ ಎಂದು ಓಡಾಡುತ್ತಿದೆ. ಹಾಗಾಗಿ ಮೋದಿಯೇ ಮತ್ತೆ ಪ್ರಧಾನಿಯಾಗುತ್ತಾರೆ ಎಂದು ಹೇಳಲಾಗುವುದಿಲ್ಲ ಎಂದರು.

ನಿಖಿಲ್‌ ಗೆಲುವಿಗೆ ತಂತ್ರ ರಚನೆ

ಮಂಡ್ಯ ಮೈತ್ರಿ ಬಗ್ಗೆ ಕಾಂಗ್ರೆಸ್‌ನ ಕೆಲ ಮುಖಂಡರಲ್ಲಿ ಕೆಲ ಸಣ್ಣಪುಟ್ಟಸಮಸ್ಯೆಗಳಿರುವುದು ನಿಜ. ಸಮಸ್ಯೆ ಪರಿಹರಿಸುವ ಜೊತೆಗೆ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ನಮ್ಮದೇ ಆದ ತಂತ್ರಗಾರಿಕೆ ಹೆಣೆದಿದ್ದೇವೆ. ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ದಿನೇಶ್‌ ಗುಂಡೂರಾವ್‌ ವಿವರಿಸಿದರು.

ಚುನಾವಣೆಯಲ್ಲಿ ಮೈಸೂರು, ಮಂಡ್ಯ, ಹಾಸನ, ತುಮಕೂರು, ಉಡುಪಿ ಚಿಕ್ಕಮಗಳೂರು, ಕೋಲಾರ ಸೇರಿದಂತೆ 20ರಿಂದ 22 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ತಂತ್ರ ರೂಪುಗೊಂಡಿದೆ. ಕೋಲಾರದಲ್ಲಿ ಬಿಜೆಪಿಯವರೇ ಕಾಂಗ್ರೆಸ್‌ ಅಭ್ಯರ್ಥಿ ಮುನಿಯಪ್ಪ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಬೆಂಗಳೂರು ಕೇಂದ್ರ ಮತ್ತು ದಕ್ಷಿಣ ಕ್ಷೇತ್ರಗಳು ಸೇರಿದಂತೆ ಕೆಲವೆಡೆ ಮಾತ್ರ ಪೈಪೋಟಿ ಇದೆ ಎಂದು ಹೇಳಿದರು.

 

click me!