ಜೆಡಿಎಸ್‌, ಕಾಂಗ್ರೆಸ್‌ ವಿರುದ್ಧ ಐಟಿ ದೂರು

By Web DeskFirst Published Apr 10, 2019, 7:53 AM IST
Highlights

ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಮಗ್ನವಾಗಿದ್ದ ವೇಳೆ ಗುತ್ತಿಗೆದಾರರು ಮತ್ತು ಸರ್ಕಾರಿ ನೌಕರರ ಮೇಲೆ ದಾಳಿ ನಡೆಸಿ ಕಾಂಗ್ರೆಸ್‌-ಜೆಡಿಎಸ್‌ ಪಕ್ಷದ ಮುಖಂಡರಿಗೆ ಬಿಸಿ ಮುಟ್ಟಿಸಿದ್ದ ಆದಾಯ ತೆರಿಗೆ ಇಲಾಖೆ ಇದೀಗ ಮತ್ತೊಂದು ಶಾಕ್‌ ನೀಡಿದೆ. ಐಟಿ ದಾಳಿಯನ್ನು ಖಂಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಮಿತ್ರ ಪಕ್ಷದ ಮುಖಂಡರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಬೆಂಗಳೂರು (ಏ. 10): ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಮಗ್ನವಾಗಿದ್ದ ವೇಳೆ ಗುತ್ತಿಗೆದಾರರು ಮತ್ತು ಸರ್ಕಾರಿ ನೌಕರರ ಮೇಲೆ ದಾಳಿ ನಡೆಸಿ ಕಾಂಗ್ರೆಸ್‌-ಜೆಡಿಎಸ್‌ ಪಕ್ಷದ ಮುಖಂಡರಿಗೆ ಬಿಸಿ ಮುಟ್ಟಿಸಿದ್ದ ಆದಾಯ ತೆರಿಗೆ ಇಲಾಖೆ ಇದೀಗ ಮತ್ತೊಂದು ಶಾಕ್‌ ನೀಡಿದೆ. ಐಟಿ ದಾಳಿಯನ್ನು ಖಂಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಮಿತ್ರ ಪಕ್ಷದ ಮುಖಂಡರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಹಾಗೂ ನೀತಿ ಸಂಹಿತೆ ವೇಳೆ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿರುವುದು ಕಾನೂನುಬಾಹಿರ. ಹೀಗಾಗಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌-ಜೆಡಿಎಸ್‌ ಪಕ್ಷದ ಮುಖಂಡರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಐಟಿ ಇಲಾಖೆ ದೂರು ನೀಡಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಖಂಡರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಕರ್ನಾಟಕ-ಗೋವಾ ವಲಯದ ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ ಬಿ.ಆರ್‌.ಬಾಲಕೃಷ್ಣನ್‌ ದೂರಿನಲ್ಲಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಏಕಪಕ್ಷೀಯವಾಗಿ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ. ಸ್ವಾಯತ್ತ ಸಂಸ್ಥೆಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದು ಕಾನೂನಿಗೆ ವಿರುದ್ಧವಾದುದು. ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವ ಕಾರಣಕ್ಕಾಗಿ ಪ್ರತಿಭಟನೆ ನಡೆಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಇಲಾಖೆ ವಿರುದ್ಧ ಘೋಷಣೆ ಕೂಗುವ ಮೂಲಕ ಇಲಾಖೆಯ ಗೌರವಕ್ಕೆ ಧಕ್ಕೆ ತರಲಾಗಿದೆ. ಇಲ್ಲ-ಸಲ್ಲದ ಆರೋಪಗಳನ್ನು ಮಾಡುವ ಮೂಲಕ ಮಾನಹಾನಿ ಮಾಡಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿರುವುದನ್ನು ಕ್ರಿಮಿನಲ್‌ ಪ್ರಕರಣ ಎಂದು ಪರಿಗಣಿಸಲಾಗಿದೆ.

ಹೀಗಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನಾಯಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಪ್ರತಿಭಟನೆಯಲ್ಲಿ ಭಾಗಿಯಾದ ಮುಖಂಡರು ಉನ್ನತ ಸ್ಥಾನದಲ್ಲಿರುವವರು. ಅಂಥವರು ಆಧಾರ ರಹಿತ ಆರೋಪಗಳನ್ನು ಮಾಡುವುದು ಸರಿಯಲ್ಲ. ತನಿಖೆ ದಿಕ್ಕು ತಪ್ಪಿಸಲು ಇಂತಹ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಇಲಾಖೆಯು ಭಾವಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಾಜಕೀಯ ಮುಖಂಡರ ಪ್ರತಿಭಟನೆಯು ಇಲಾಖೆ ಸಿಬ್ಬಂದಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ದಾಳಿಗೆ ಸಂಬಂಧಪಟ್ಟಂತೆ ಯಾರ ಹಸ್ತಕ್ಷೇಪವೂ ಇಲ್ಲ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಕರ್ತವ್ಯ ಪ್ರಶ್ನಿಸಿ ಪ್ರತಿಭಟನೆ ನಡೆಸುವುದರಿಂದ ಐಟಿ ಇಲಾಖೆ ಸಿಬ್ಬಂದಿ ಕರ್ತವ್ಯ ನಿಭಾಯಿಸುವುದು ಕಷ್ಟವಾಗಲಿದೆ ಎಂದಿದ್ದಾರೆ.

ದಾಳಿ ವೇಳೆ ಕೋಟ್ಯಂತರ ರು. ನಗದು ಸೇರಿದಂತೆ ಅಪಾರ ಪ್ರಮಾಣದ ದಾಖಲೆಗಳು ಪತ್ತೆಯಾಗಿವೆ. ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲ ಎಂದು ಸ್ಪಷ್ಟಪಡಿಸಿದರೂ ಪ್ರತಿಭಟನೆ ನಡೆಸಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದಾಳಿಯಲ್ಲಿ ಕೇಂದ್ರದ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ದಾಳಿಗೆ ಸಂಬಂಧಪಡದ ವ್ಯಕ್ತಿಗಳು ಇಂತಹ ಹೇಳಿಕೆ ನೀಡುವುದು ಸಮಂಜಸವಲ್ಲ ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಐಟಿ ದಾಳಿ

ಮಾ.28ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು, ಮಂಡ್ಯ, ಹಾಸನ, ಮೈಸೂರು, ಶಿವಮೊಗ್ಗ, ಕನಕಪುರ ಸೇರಿದಂತೆ 22 ಸ್ಥಳಗಳ ಮೇಲೆ 13 ಗುತ್ತಿಗೆದಾರರು ಮತ್ತು ಐವರು ಸರ್ಕಾರಿ ನೌಕರರಿಗೆ ಸೇರಿದ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ಈ ವೇಳೆ 10 ಕೋಟಿ ರು.ಗಿಂತ ಹೆಚ್ಚಿನ ನಗದು ಸೇರಿದಂತೆ ಅಪಾರ ಮೌಲ್ಯದ ಆಸ್ತಿ-ಪಾಸ್ತಿಯ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ದಾಳಿ ನಡೆದ ದಿನವೇ ಮಧ್ಯಾಹ್ನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಪರಮೇಶ್ವರ್‌, ಸಚಿವರಾದ ಡಿ.ಕೆ.ಶಿವಕುಮಾರ್‌, ಸಿ.ಎಸ್‌.ಪುಟ್ಟರಾಜು, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೇರಿದಂತೆ ಮಿತ್ರ ಪಕ್ಷಗಳ ಹಲವು ನಾಯಕರು, ಕಾರ್ಯಕರ್ತರು ಭಾಗಿಯಾಗಿದ್ದರು.

 

click me!