ಅ.3ರ ನಂತರ ಸಂಪುಟ ವಿಸ್ತರಣೆ : ಸರ್ಕಾರ ಪತನ ಕೇವಲ ಊಹಾಪೋಹ

By Web DeskFirst Published Sep 19, 2018, 1:45 PM IST
Highlights

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸೆಪ್ಟಂಬರ್‌ನಲ್ಲಿ ಸಂಪುಟ ವಿಸ್ತರಣೆ ನಡೆಯುವುದಿಲ್ಲ. ಚುನಾವಣೆ ನಂತರ ಅಂದರೆ ಅ. 3ರ ನಂತರ ಸಂಪುಟ ವಿಸ್ತರಣೆ ನಡೆಸಲಾಗುವುದು. 

ಬೆಂಗಳೂರು[ಸೆ.19]: ವಿಧಾನಪರಿಷತ್ ಚುನಾವಣೆ ನಂತರ ಅಂದರೆ ಅ. 3ರ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಸಮನ್ವಯ ಸಮಿತಿ ಸಭೆಯಲ್ಲಿ ಸೆಪ್ಟೆಂಬರ್ 2 ಅಥವಾ 3ನೇ ವಾರ ಸಂಪುಟ ವಿಸ್ತರಣೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸೆಪ್ಟಂಬರ್‌ನಲ್ಲಿ ಸಂಪುಟ ವಿಸ್ತರಣೆ ನಡೆಯುವುದಿಲ್ಲ. ಚುನಾವಣೆ ನಂತರ ಅಂದರೆ ಅ. 3ರ ನಂತರ ಸಂಪುಟ ವಿಸ್ತರಣೆ ನಡೆಸಲಾಗುವುದು. ಬುಧವಾರ ದೆಹಲಿ ಭೇಟಿಯ ವೇಳೆ ಹೈಕಮಾಂಡ್ ನೊಂದಿಗೆ ವಿಧಾನಪರಿಷತ್ ಅಭ್ಯರ್ಥಿ ಹೆಸರು ಅಖೈರುಗೊಳಿಸುವ ಬಗ್ಗೆ ಮಾತ್ರ ಚರ್ಚಿಸಲಾಗುವುದು. ಸಂಪುಟ ವಿಸ್ತರಣೆ ಕುರಿತು ಈ ಬಾರಿಯ ದೆಹಲಿ ಭೇಟಿ ವೇಳೆ ಚರ್ಚೆ ನಡೆಯುವುದಿಲ್ಲ ಎಂದರು.

ಯಾವ ಶಾಸಕರು ಕಾಂಗ್ರೆಸ್ ಬಿಡಲ್ಲ
ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸು ವಂತಹ ಯಾವುದೇ ಚಟುವಟಿಕೆ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆದಿಲ್ಲ. ನಮ್ಮ ಯಾವ ಶಾಸಕರು ಪಕ್ಷ ಬಿಡುವ ಅಥವಾ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಇದೆಲ್ಲ ಮಾಧ್ಯಮಗಳು ಸೃಷ್ಟಿಸಿದ ಊಹಾಪೋಹ. ಮಾಧ್ಯಮ ಗಳಲ್ಲಿ ಬರುತ್ತಿರುವ ಭಿನ್ನಮತದ ವರದಿಗಳಲ್ಲಿ ಶೇ. 1ರಷ್ಟು ಸತ್ಯವಿಲ್ಲ. ರಾಜ್ಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ವಿದೇಶದಿಂದ ಬೆಂಗಳೂರಿಗೆ ಹಿಂತಿರುಗಿದ ನಂತರ ಇದೇ ಮೊದಲ ಬಾರಿಗೆ ವಿಧಾನಸೌಧ ದಲ್ಲಿನ ತಮ್ಮ ಕಚೇರಿಗೆ ಭೇಟಿ ನೀಡಿ ವೇಳೆ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲ, ಅಸಮಾಧಾನ ಇಲ್ಲ. ಕೇವಲ ಮಾಧ್ಯಮಗಳು ಭಿನ್ನಮತವಿದೆ ಎಂದು ಬಿಂಬಿಸುತ್ತಿವೆ. ಇದೆಲ್ಲ ಸತ್ಯಕ್ಕೆ ದೂರವಾದ ಸುದ್ದಿ ಎಂದರು. 

ಪ್ರಧಾನಿ ಸ್ಥಾನದ ಆಕಾಂಕ್ಷಿಯಲ್ಲ!: 
‘ನೀವು ಪ್ರಧಾನಿ ಸ್ಥಾನದ ಆಕಾಂಕ್ಷಿಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ‘ನಾನು ಪ್ರಧಾನಿ ಆಕಾಂಕ್ಷಿಯಲ್ಲ. ಅದು ಕೈಗೆಟುಕದ ಸ್ಥಾನ. ಸಿಗದಿರುವುದಕ್ಕೆ ಆಸೆ ಪಡಬಾರದು. ಆ ಆಸೆ ನನಗಿಲ್ಲ’ ಎಂದರು.

click me!