ಚಪ್ಪಲಿ, ಬೆಳ್ಳಿ ಕಡಗದೊಳಗೆ ಚಿನ್ನ ಸಾಗಾಟ!

By Web DeskFirst Published Sep 19, 2018, 12:48 PM IST
Highlights

ಪುಥಾನ್ ವೀಡು ಸಶ್ಮಿರ್ ಅಲಿ ಹಾಗೂ ಸಲ್ಮಾನ್ ಫಾರ್ಸಿ ಬಂಧಿತರಾಗಿದ್ದು, ಭಾನುವಾರ ರಾತ್ರಿ ದುಬೈನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಆರೋಪಿಗಳು ಕಸ್ಟಮ್ಸ್ ಬಲೆಗೆ ಬಿದ್ದಿದ್ದಾರೆ. ಆ ಇಬ್ಬರು ಬೆಂಗಳೂರು ಮಾರ್ಗವಾಗಿ ಅವರು ಗೋವಾಕ್ಕೆ ಹೊರಟ್ಟಿದ್ದರು.

ಬೆಂಗಳೂರು[ಸೆ.19]: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಕೋಟೆ ನುಸುಳಿ ಚಿನ್ನ ಸಾಗಿಸಲು ಯತ್ನಿಸಿದ ಐದು ಮಂದಿಯನ್ನು ಪ್ರತ್ಯೇಕವಾಗಿ ಬಂಧಿಸಿ 69.75 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಚಪ್ಪಲಿಯಲ್ಲಿ ಚಿನ್ನ: ಪಾದರಕ್ಷೆಗಳಲ್ಲಿ ಚಿನ್ನದ ಬಿಸ್ಕತ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಇಬ್ಬರನ್ನು ಸೆರೆಹಿಡಿದ ಕಸ್ಟಮ್ ಅಧಿಕಾರಿಗಳು,ಅವರಿಂದ 41.34 ಲಕ್ಷ ಮೌಲ್ಯದ 1.3 ಕೆ.ಜಿ ಚಿನ್ನ ಜಪ್ತಿ ಮಾಡಿದ್ದಾರೆ. ಪುಥಾನ್ ವೀಡು ಸಶ್ಮಿರ್ ಅಲಿ ಹಾಗೂ ಸಲ್ಮಾನ್ ಫಾರ್ಸಿ ಬಂಧಿತರಾಗಿದ್ದು, ಭಾನುವಾರ ರಾತ್ರಿ ದುಬೈನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಆರೋಪಿಗಳು ಕಸ್ಟಮ್ಸ್ ಬಲೆಗೆ ಬಿದ್ದಿದ್ದಾರೆ. ಆ ಇಬ್ಬರು ಬೆಂಗಳೂರು ಮಾರ್ಗವಾಗಿ ಅವರು ಗೋವಾಕ್ಕೆ ಹೊರಟ್ಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪುಥಾನ್ ಚಪ್ಪಲಿಯಲ್ಲಿ ಚಿನ್ನವನ್ನು ಅಡಗಿಸಿ ಪ್ರಯಾಣಿಕ ಸಲ್ಮಾನ್‌ಗೆ ಹಸ್ತಾಂತರಿಸಿದ್ದ. ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸಿದಾಗ ಸಿಕ್ಕಿಬಿದ್ದಿದ್ದಾನೆ. ಚಿನ್ನದ ಕಡಗ: ಬೆಳ್ಳಿಯ ಕಡಗದೊಳಗೆ ಚಿನ್ನ ಅಡಗಿಸಿ ಸಾಗಿಸಲು ಯತ್ನಿಸಿದ್ದ ಮತ್ತಿಬ್ಬರು ಚಾಲಾಕಿಗಳು ಚಾಲಾಕಿ ಕಸ್ಟಮ್ಸ್ ಬಲೆಗೆ ಬಿದ್ದಿದ್ದಾರೆ. ಪಿಂಟೋ ಕುಮಾರ್ ಹಾಗೂ ವಿನೋದ್ ಕುಮಾರ್ ಪರಸ್ಮಲ್ ಜೈನ್ ಬಂಧಿತರಾಗಿದ್ದು, ಆರೋಪಿಗಳಿಂದ 10 ಲಕ್ಷ ಮೌಲ್ಯದ 333.30 ಗ್ರಾಂ ಚಿನ್ನ ಜಪ್ತಿಯಾಗಿದೆ.

ದುಬೈ ಮಾರ್ಗವಾಗಿ ಮಸ್ಕಟ್‌ನಿಂದ ಓಮನ್ ಏರ್‌ಲೈನ್ಸ್ ವಿಮಾನದಲ್ಲಿ ಶುಕ್ರವಾರ ಕೆಂಪೇಗೌಡ ನಿಲ್ದಾಣಕ್ಕೆ ಆಗಮಿಸಿದ್ದರು. ಆಗ ಪರಿಶೀಲಿಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಚಿನ್ನದ ಸರ: ವಿದೇಶದಿಂದ ಅಕ್ರಮವಾಗಿ ಚಿನ್ನದ ಸರ ಹಾಗೂ ಕಡಗ ತರುತ್ತಿದ್ದ ಮೊಗದೊಬ್ಬ ಕಸ್ಟಮ್ಸ್ ಅಧಿಕಾರಿಗಳಿಗೆ ಸೆರೆಯಾಗಿದ್ದಾನೆ. ಕೌಲಾಂಂಪುರದಿಂದ ಶನಿವಾರ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋಹಿದ್ದೀನ್ ಕುಂಜು ಮೊಹಮ್ಮದ್ ಶಫಿ ಎಂಬಾತನನ್ನು ಅನುಮಾನದ ಮೇರೆ ತಪಾಸಣೆಗೆ ಒಳಪಡಿಸಲಾಯಿತು. ಆಗ ಆತನ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ 17.91 ಲಕ್ಷ ಮೌಲ್ಯದ 568 ಗ್ರಾಂ ಚಿನ್ನ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!
Last Updated Sep 19, 2018, 12:48 PM IST
click me!