ದೃಢಪಡದ ಹಕ್ಕಿ ಜ್ವರ ಸೋಂಕು – ಆತಂಕ ಪಡುವ ಅಗತ್ಯವಿಲ್ಲ

By Suvarna Web DeskFirst Published Jan 6, 2018, 10:48 AM IST
Highlights

ನಗರದ ದಾಸರಹಳ್ಳಿಯಲ್ಲಿ ಹಕ್ಕಿ ಜ್ವರ ಪತ್ತೆ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ಪಶುಪಾಲನಾ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳು ಮುಂದುವರಿಸಿದ್ದು, ಕೇಂದ್ರ ಸರ್ಕಾರದ ತಜ್ಞರ ತಂಡ ಸ್ಥಳ ಪರಿಶೀಲನೆ ನಡೆಸಿ ವಿವಿಧ ಕೋಳಿಗಳ ಮಾದರಿಗಳನ್ನು ಪರೀಕ್ಷಿಸಿದೆ.

ಬೆಂಗಳೂರು (ಜ.06): ನಗರದ ದಾಸರಹಳ್ಳಿಯಲ್ಲಿ ಹಕ್ಕಿ ಜ್ವರ ಪತ್ತೆ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ಪಶುಪಾಲನಾ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳು ಮುಂದುವರಿಸಿದ್ದು, ಕೇಂದ್ರ ಸರ್ಕಾರದ ತಜ್ಞರ ತಂಡ ಸ್ಥಳ ಪರಿಶೀಲನೆ ನಡೆಸಿ ವಿವಿಧ ಕೋಳಿಗಳ ಮಾದರಿಗಳನ್ನು ಪರೀಕ್ಷಿಸಿದೆ. ಸೋಂಕಿತ ಕೋಳಿ ಪೂರೈಸಿದ ಫಾರ್ಮ್‌ಗಳಿಂದ ಸಂಗ್ರಹಿಸಿದ್ದ 200 ಕೋಳಿಗಳ 12 ಮಾದರಿಗಳನ್ನು ಕೇಂದ್ರ ತಜ್ಞರ ತಂಡವು ಹೆಬ್ಬಾಳದ ಪಶುವೈದ್ಯಕೀಯ ಸಂಸ್ಥೆಯ ಪ್ರಯೋಗಾಲಯದಲ್ಲಿ ಶುಕ್ರವಾರ ಪರೀಕ್ಷೆ ನಡೆಸಿದ್ದು, ಸೋಂಕು ದೃಢಪಟ್ಟಿಲ್ಲ. ಹೀಗಾಗಿ ಹಕ್ಕಿ ಜ್ವರ ಹತೋಟಿಗೆ ಬಂದಿದ್ದು, ಆತಂಕ ಪಡುವ ಅಗತ್ಯವಿಲ್ಲ.  ಆದಾಗ್ಯೂ ಮುಂಜಾಗ್ರತಾ ಕ್ರಮಗಳನ್ನು ಮುಂದುವರಿಸಿ ಎಂದು ರಾಜ್ಯ ಆರೋಗ್ಯ ಮತ್ತು ಪಶುಪಾಲನಾ ಇಲಾಖೆಗಳಿಗೆ ಸೂಚನೆ ನೀಡಿದೆ.

ಬೆಂಗಳೂರಿನ ದಾಸರಹಳ್ಳಿ ಬಳಿಯ ಭುವನೇಶ್ವರಿನಗರದ ಕೋಳಿ ಮಾಂಸ ಮಾರಾಟ ಅಂಗಡಿಯೊಂದರಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡು ಆತಂಕವನ್ನುಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಗುರುವಾರದ ವೇಳೆಗೆ 1 ಕಿ.ಮೀ. ವ್ಯಾಪ್ತಿಯಲ್ಲಿನ 865 ಕೋಳಿ ನಾಶಪಡಿಸಿದ್ದ ಅಧಿಕಾರಿಗಳು ಶುಕ್ರವಾರ ಮತ್ತೆ 77 ಕೋಳಿಗಳನ್ನು ನಾಶಪಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

ನಿಷೇಧಿತ ವಲಯದಲ್ಲಿ ಯಾವುದೇ ಕೋಳಿಗಳ ಅಸ್ವಾಭಾವಿಕ ಮರಣ ವರದಿಯಾಗಿಲ್ಲ. ಆದ್ಯಾಗ್ಯೂ 10 ಕಿ.ಮೀ. ವ್ಯಾಪ್ತಿಯಲ್ಲಿನ ಮನೆಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಅಂತಿಮ ಸಭೆ: ಗುರುವಾರದಿಂದ ನಗರದಲ್ಲೇ ಉಳಿದಿರುವ ಕೇಂದ್ರ ತಂಡ, ಶನಿವಾರ ಹಕ್ಕಿ ಜ್ವರ ನಿಯಂತ್ರಣಕ್ಕೆ ರಚಿಸಲಾಗಿರುವ ಉನ್ನತ ಅಧಿಕಾರಿಗಳ ಸಮಿತಿಯೊಂದಿಗೆ ನಡೆಸಲಿದೆ. ಈವರೆಗೂ ಇಲಾಖೆಗಳ ಮುಂಜಾಗ್ರತಾ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇದರ ಜತೆಗೆ ಮಾರ್ಚ್ 2015ರ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಹಕ್ಕಿ ರೋಗ ನಿಯಂತ್ರಣ ಹಾಗೂ ಹತೋಟಿ ಕ್ರಮಗಳ ಬಗ್ಗೆ ಚರ್ಚೆ ಆಗಲಿದೆ. ಈ ವೇಳೆ ಮತ್ತಷ್ಟು ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಕೇಂದ್ರ ತಂಡ ನಿರ್ದೇಶಿಸುವ ಸಾಧ್ಯತೆ ಇದೆ.

click me!