
ಪಾಟ್ನಾ(ಜು.26): ಅನಿರೀಕ್ಷಿತ ಬೆಳವಣಿಗೆಯಲ್ಲಿ ಇಂದು ಸಂಜೆ ಮಿತ್ರ ಪಕ್ಷ ಆರ್'ಜೆಡಿಯೊಂದಿಗೆ ಮೈತ್ರಿ ಕಳೆದುಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್ ಕುಮಾರ್ ಇಂದು ಸಂಜೆ 5 ಗಂಟೆಗೆ ಎನ್'ಡಿಎ ಅಭ್ಯರ್ಥಿಯಾಗಿ ಪುನಃ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬಿಹಾರದ ರಾಜ್ಯ ಘಟಕದ ಅಧ್ಯಕ್ಷ ಸುಶೀಲ್ ಕುಮಾರ್ ಮೋದಿ ಉಪ ಮುಖ್ಯಮಂತ್ರಿಯಾಗುವ ಸಂಭವವಿದೆ. ಬಿಜೆಪಿ ಹಾಗೂ ಜೆಡಿಯುನಿಂದ ತಲ 14 ಮಂದಿ ಮಂತ್ರಿಗಳು ನೂತನ ಸರ್ಕಾರದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯ ಬಿಜೆಪಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷಕ್ಕೆ ಯಾವುದೇ ಷರತ್ತು ವಿಧಿಸದೆ ಭೇಷರತ್ ಬೆಂಬಲ ಘೋಷಿಸಿದೆ.
ಒಂದೇ ದಿನದಲ್ಲಿ ರಾಜೀನಾಮೆ ಹಾಗೂ ಮುಖ್ಯಮಂತ್ರಿ
ಬುಧವಾರ ಸಂಜೆ ಜೆಡಿಯು ಶಾಸಕಾಂಕ ಸಭೆ ನಡೆಸಿ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದರು. ರಾಜಕೀಯ ಹಸ್ತಕ್ಷೇಪ, ಭ್ರಷ್ಟಾಚಾರ ವಿಷಯಗಳ ಕಾರಣದಿಂದ ಇತ್ತೀಚಿನ ಕೆಲವು ದಿನಗಳಿಂದ ಬಿಹಾರದಲ್ಲಿ ಸಮ್ಮಿಶ್ರ ಪಕ್ಷಗಳಾದ ಜೆಡಿಯು ಹಾಗೂ ಆರ್'ಜೆಡಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.
ಕೆಲವು ದಿನಗಳ ಹಿಂದಷ್ಟೆ ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ನಿವಾಸದ ಮೇಲೆ ಸಿಬಿಐ ದಾಳಿ ಮಾಡಿ ಎಫ್'ಐಆರ್ ದಾಖಲಿಸಿತ್ತು. ಅನಂತರ ತೇಜಸ್ವಿ ರಾಜೀನಾಮೆ ನೀಡಬೇಕೆಂದು ಮಿತ್ರ ಪಕ್ಷ ಜೆಡಿಯು ಪಟ್ಟು ಹಿಡಿದಿತ್ತು. ರಾಜೀನಾಮೆ ನೀಡದ ಕಾರಣ ಮೈತ್ರಿಯಿಂದ ಹೊರ ಬಂದಿರುವ ನಿತೀಶ್ ಕುಮಾರ್ ಬಿಜೆಪಿ ಜೊತೆ ಕೈಜೋಡಿಸಿ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ.
ಪ್ರಧಾನಿ ಮೋದಿ ಬೆಂಬಲ
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದ್ದಕ್ಕೆ ಧನ್ಯವಾದಗಳು.ದೇಶದ 125 ಕೋಟಿ ನಾಗರಿಕರು ನಿಮ್ಮ ಪ್ರಾಮಾಣಿಕ ನಡೆಯನ್ನು ಸ್ವಾಗತಿಸಿ ಬೆಂಬಲಿಸಲಿದ್ದಾರೆ'ಎಂದು ತಿಳಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.