
ಬೆಂಗಳೂರು(ಜೂನ್ 22): ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಸರ್ಕಾರಿ ಜಯಂತಿ ಆಚರಿಸುತ್ತಿದೆ. ಜಯಂತಿಯನ್ನು ಸಂಗ್ರಾಮವಾಗಿ ಆಚರಿಸದೇ ಸಂಭ್ರಮದ ಹಬ್ಬವಾಗಿ ಆಚರಿಸಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದ್ದಾರೆ.
ರಾಜ್ಯ ಸರ್ಕಾರ ಜೂ.27ರಂದು ಕೆಂಪೇಗೌಡ ಜಯಂತಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ರಾಜ್ಯ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಡಪ್ರಭು ಕೆಂಪೇಗೌಡರ ಆದರ್ಶ ಹಾಗೂ ಅವರ ಮೌಲ್ಯಗಳನ್ನು ನಾಡಿನ ಜನರಿಗೆ ಪರಿಚಯಿಸುವ ದೃಷ್ಟಿಕೋನದಲ್ಲಿ ಕಾರ್ಯಕ್ರಮ ನಡೆಯಬೇಕೇ ಹೊರತು ಒಕ್ಕಲಿಗ ಜನಾಂಗದ ಶಕ್ತಿ ಪ್ರದರ್ಶನಕ್ಕಲ್ಲ. ಸಮುದಾಯಕ್ಕೆ ಧಕ್ಕೆ ಬಂದಾಗ ಸಂಘಟಿ ತರಾಗಿ ಹಿಂದೆ ಹೋರಾಟ ಮಾಡಿದ್ದುಂಟು. ಮುಂದೆಯೂ ಮಾಡುತ್ತೇವೆ. ಆದರೆ, ಪ್ರಸ್ತುತ ಶಕ್ತಿ ಪ್ರದರ್ಶಿಸುವ ಬದಲು ಸಂಭ್ರಮಿಸುವ ಸಮಯ ಬಂದಿದೆ. ಅಂದಿನ ಕಾರ್ಯಕ್ರಮದಲ್ಲಿ ಯಾರೂ ಸಹ ಜೈ ಒಕ್ಕಲಿಗ ಎಂದು ಕೂಗಬೇಡಿ. ಇದರಿಂದ ಕೆಂಪೇಗೌಡರನ್ನು ನಾವೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತರಾಗಿಸುವುದು ತನಗೆ ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಅಭಿನಂದನೀಯ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಸರಕಾರದ ವತಿಯಿಂದ ಅಧಿಕೃತವಾಗಿ ಕೆಂಪೇಗೌಡ ಜಯಂತಿ ಆಚರಣೆಗೆ ಮುಂದಾಗಿರುವುದು ಅಭಿನಂದನೀಯ. ಆದರೆ, ಮೊದಲ ವರ್ಷದ ಜಯಂತಿಯನ್ನು ಕೆಂಪೇಗೌಡರು ಕಟ್ಟಿಸಿದ ಕೆರೆಗಳ ಸಂರಕ್ಷಣೆ ವರ್ಷವಾಗಿ ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು. ಮುಖ್ಯವಾಗಿ ನಗರದ ಕೆಂಪಾಂಬುಧಿ ಕೆರೆ ಸೇರಿದಂತೆ ನಗರದ ಅನೇಕ ಕೆರೆಗಳು ಕಲುಷಿತ ಗೊಂಡಿವೆ. ಈ ಕೆರೆಗಳನ್ನು ಶುದ್ಧೀಕರಣ ಮಾಡುವ ಮೂಲಕ ಅರ್ಥಪೂರ್ಣವಾಗಿ ಅಚರಿ ಸಬೇಕಿದೆ ಎಂದು ಹೇಳಿದರು.
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ಒಕ್ಕಲಿಗ ಸಂಘ ದೇವಸ್ಥಾನವಿದ್ದಂತೆ. ಆದರೆ ಕೆಲವು ಸಮಸ್ಯೆಗಳು ಉಂಟಾಗಿದ್ದವು. ಯಾರಾದರೂ ಸಂಘವನ್ನು ಒಡೆಯುವ ಪ್ರಯತ್ನ ಮಾಡಿದರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ. ಸಂಘದಲ್ಲಿ ಅವ್ಯವಹಾರ ನಡೆಯುತ್ತಿತ್ತು. ಬಾಳೆಹಣ್ಣಿನ ಸಿಪ್ಪೆ ಸುಲಿದು ತಿನ್ನುವುದನ್ನು ಬಿಟ್ಟು ಬಾಳೆಹಣ್ಣನ್ನೇ ನುಂಗುತ್ತಿದ್ದರು. ಪ್ರಸ್ತುತ ಇದಕ್ಕೆಲ್ಲ ಕಡಿವಾಣ ಹಾಕಲಾಗಿದೆ. ಜನಾಂಗದ ಹಿತಕ್ಕಾಗಿ ಶ್ರಮವಹಿಸಿದರೆ ಸಮಾಜಕ್ಕೆ ಉತ್ತಮ ಭವಿಷ್ಯವಿದೆ ಎಂದರು.
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡ ಮಾತನಾಡಿದರು.
ನಿರ್ಮಲಾನಂದ ಸ್ವಾಮೀಜಿಗಳ ಸಲಹೆಯಂತೆ ಜೂ.27ರಂದು ಕೆಂಪೇಗೌಡ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಿಸಲಾಗುತ್ತಿದೆ. ಪ್ರತಿವರ್ಷ ಕೆಂಪೇಗೌಡ ಜಯಂತಿ ಆಚರಣೆ ಸಂಬಂಧ ಸಮಿತಿಯೊಂದನ್ನು ರಚಿಸಬೇಕಿದೆ. ಈ ಸಮಿತಿ ಮೂಲಕ ಜನಾಂಗದ ನಾಯಕರನ್ನು ಬೆಳೆಸಬೇಕಿದೆ. ತಾನು ಮತ್ತು ಸದಾನಂದಗೌಡರು ಸೇರಿದಂತೆ ಸಮುದಾಯದ ಅನೇಕ ನಾಯಕರಿಗೆ ನಿವೃತ್ತಿ ತೆಗೆದುಕೊಳ್ಳುವ ಸಮಯ ಸಮೀಪಿಸುತ್ತಿದೆ. ಮುಂದಿನ ಪೀಳಿಗೆಯ ಪ್ರಗತಿಗಾಗಿ ನೂರಾರು ಯುವ ನಾಯಕರನ್ನು ಬೆಳೆಸಬೇಕಿದೆ.
- ಡಿ.ಕೆ. ಶಿವಕುಮಾರ್, ಇಂಧನ ಸಚಿವ
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.