[ವೈರಲ್ ಚೆಕ್] ಪ್ರಧಾನಿ ಮೋದಿ ಬೆಲೆಬಾಳುವ ಸೂಟ್ ಖರೀದಿಸಿದ್ದು ನೀರವ್ ಮೋದಿ..?

By Suvarna Web DeskFirst Published Feb 24, 2018, 11:51 AM IST
Highlights

ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿಯಾಗುವ ವೇಳೆ ಧರಿಸಿದ್ದ ಹಾಗೂ ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿರುವ ಬೆಲೆಬಾಳುವ ಸೂಟ್ ಇದೀಗ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗುತ್ತಿದೆ.

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿಯಾಗುವ ವೇಳೆ ಧರಿಸಿದ್ದ ಹಾಗೂ ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿರುವ ಬೆಲೆಬಾಳುವ ಸೂಟ್ ಇದೀಗ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗುತ್ತಿದೆ. ಕೋಟ್ಯಂತರ ರು. ಬೆಲೆಬಾಳುವ ಸೂಟ್ ಅನ್ನು ಮೋದಿ ಧರಿಸಿದ್ದ ಹಿನ್ನೆಲೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್, ‘ಇದು ಸೂಟು ಬೂಟು ಸರ್ಕಾರ’ ಎಂದು ಹರಿಹಾಯ್ದಿತ್ತು.

ಬಳಿಕ ಆ ಸೂಟ್ ಅನ್ನು ಹರಾಜು ಹಾಕಲಾಗಿತ್ತು. ಅದು 4.31 ಕೋಟಿ ರು.ಗೆ ಬಿಕರಿಯಾಗಿತ್ತು. ಅಂದು ಆ ಸೂಟ್ ಅನ್ನು ಖರೀದಿಸಿದ್ದು ಬೇರಾರೂ ಅಲ್ಲ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 11000 ಕೋಟಿ ರು. ಕೊಳ್ಳೆ ಹೊಡೆದು ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಈಗ ಹರಿದಾಡುತ್ತಿದೆ.

ಇದು ನಿಜವೇ ಎಂಬುದನ್ನು ಪರಿಶೀಲಿಸಿದಾಗ, ಅದು ಸುಳ್ಳು ಎಂದು ಸಾಬೀತಾಗಿದೆ. ಮೋದಿ ಅವರ ಬೆಲೆಬಾಳುವ ಸೂಟ್ ಅನ್ನು ಹರಾಜಿನಲ್ಲಿ ಖರೀದಿಸಿದ್ದವರು ಲಾಲ್ ಜಿ ಬಾಯ್ ಪಟೇಲ್. ಅಂದ ಹಾಗೆ, ಮೋದಿ ಅವರಿಗೆ ಆ ಸೂಟ್ ಕೊಟ್ಟಿದ್ದು ವಜ್ರ ವ್ಯಾಪಾರಿ ರಮೇಶ್ ಬಾಯಿ ಮೀರಾನಿ. ತಮ್ಮ ಮಗನ ವಿವಾಹಕ್ಕೆ ಮೋದಿ ಅವರನ್ನು ಆಹ್ವಾನಿಸುವ ಸಂದರ್ಭದಲ್ಲಿ, ‘ನರೇಂದ್ರ ಮೋದಿ’ ಎಂಬ ಅಕ್ಷರಗಳನ್ನು ಬರೆಯಲಾದ ಸೂಟ್ ಅನ್ನು ನೀಡಿದ್ದಾಗಿ ಅವರು ವಿವಾದ ತಾರಕಕ್ಕೇರಿದ್ದಾಗ ತಿಳಿಸಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ನೀರವ್ ಮೋದಿ ಹೆಸರನ್ನು ಸುಮ್ಮನೆ ಎಳೆದು ತರಲಾಗಿದೆ.

click me!