
ದಾವಣಗೆರೆ : ತಾವು ಅನ್ಯಾಯಕ್ಕೊಳಗಾದಾಗ ಸ್ವಾಮೀಜಿ ಎಲ್ಲಿ ಹೋಗಿದ್ದರು ಎಂಬ ಶಾಸಕ ಎಚ್.ವಿಶ್ವನಾಥ್ ಅವರ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಶ್ರೀಗಳು, ಸ್ವಯಂಕೃತ ಅಪರಾಧದಿಂದ ಎಚ್.ವಿಶ್ವನಾಥ್ ರಾಜಕೀಯ ಹಾಳಾಗಿದೆಯೇ ಹೊರತು ಯಾರೋ ಮಾಡಿದ್ದಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಜಿಲ್ಲೆಯ ಹರಿಹರ ತಾಲೂಕಿನಲ್ಲಿರುವ ಕಾಗಿನೆಲೆ ಗುರುಪೀಠದ ಶಾಖಾಮಠದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಕಾಂಗ್ರೆಸ್ ಪಕ್ಷ ಬಿಡುವಾಗಲೂ ನಾನೇ ಸಿದ್ದರಾಮಯ್ಯ ಬಳಿ ಹೋಗಿ, ವಿಶ್ವನಾಥ್ರನ್ನು ಪಕ್ಷ ತೊರೆಯದಂತೆ ನೋಡಿಕೊಳ್ಳಿ ಎಂದಿದ್ದೆ. ಆದರೆ ವಿಶ್ವನಾಥ್ ಅವರು ಸಿದ್ದರಾಮಯ್ಯ ವಿರುದ್ಧವೇ ಕಾಂಗ್ರೆಸ್ ಹೈಕಮಾಂಡ್ಗೆ ಪತ್ರ ಬರೆದಿದ್ದು, ಆ ಪತ್ರವನ್ನು ಸಿದ್ದರಾಮಯ್ಯ ನನಗೆ ತೋರಿಸಿದ್ದರು. ಸಿದ್ದರಾಮಯ್ಯ ಸುಮ್ಮನಿದ್ದರೂ ವಿಶ್ವನಾಥ್ ಅವರು ಸಿದ್ದರಾಮಯ್ಯ ವಿರುದ್ಧ ಟೀಕೆ ಮುಂದುವರಿಸಿದ್ದರು ಎಂದು ವಿವರಿಸಿದರು.
ವಿಶ್ವನಾಥ್ ಅವರ ಜೆಡಿಎಸ್ ಸೇರ್ಪಡೆ ಬಗ್ಗೆಯೂ ಟಾಂಗ್ ನೀಡಿದ ಅವರು, ದೇವೇಗೌಡ್ರು ಘಟಸರ್ಪವಿದ್ದಂತೆ, ಆ ಸರ್ಪದ ಮುಂದೆ ನೀನೊಬ್ಬ ಕಪ್ಪೆ ಎಂದು ಸಿದ್ದರಾಮಯ್ಯಗೆ ಒಂದು ಕಾಲದಲ್ಲಿ ಹೋಲಿಸಿ, ಎಚ್ಚರಿಸಿದ್ದ ವಿಶ್ವನಾಥ್ ಈಗ ಯಾವ ಘಟಸರ್ಪ, ಕಾಳಿಂಗ ಸರ್ಪದ ಬಳಿ ನಿಂತಿದ್ದಾರೆಂಬುದೇ ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ಆನೆಯು ಕೆರೆ, ಹೊಂಡದಲ್ಲಿ ಸ್ಥಾನ ಮಾಡಿ, ದಡಕ್ಕೆ ಬಂದ ನಂತರ ತನ್ನ ಮೈಮೇಲೆ, ತಲೆ ಮೇಲೆ ತಾನೇ ಮಣ್ಣು ಹಾಕಿಕೊಳ್ಳುತ್ತದೆ. ಆನೆ ತಲೆ ಮೇಲೆ ಯಾರೂ ಮಣ್ಣು ಹಾಕುವುದಿಲ್ಲ. ಅದೇ ರೀತಿಯಲ್ಲಿ ತಮ್ಮ ಮೇಲೆ ತಾವೇ ಮಣ್ಣು ಹಾಕಿಕೊಂಡಿರುವ ವಿಶ್ವನಾಥ್ ಈಗ ಕುರುಬ ಸಮಾಜದ ಮೇಲೆ, ಕಾಗಿನೆಲೆ ಕನಕ ಗುರು ಪೀಠದ ಮೇಲೆ ಆಪಾದನೆ ಮಾಡುವುದು ವಿಶೋಭೆ ತರುವುದಿಲ್ಲ ಎಂದರು.
ಮಠಾಧಿಪತಿಗಳು ರಾಜಕೀಯ ವಿಚಾರಗಳನ್ನು ಮಾತನಾಡುವುದು ಸರಿಯಲ್ಲ ಎಂಬ ವಿಶ್ವನಾಥ್ ಟೀಕೆಗೆ ಉತ್ತರಿಸಿರುವ ಶ್ರೀಗಳು, ನನ್ನ ಸಮಾಜದ ನಾಯಕರಿಗೆ ಅನ್ಯಾಯವಾದಾಗ ಧ್ವನಿ ಎತ್ತುತ್ತೇನೆ ಎಂದರು. ಬಿಜೆಪಿಯಲ್ಲಿ ಕೆ.ಎಸ್.ಈಶ್ವರಪ್ಪಗೆ ತೊಂದರೆಯಾದಾಗಲೂ ಮಾತನಾಡಿದ್ದೇನೆ ಎಂದು ಸಮರ್ಥಿಸಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.