ವಿರೋಧಿಗಳ ನಿಗ್ರಹಕ್ಕೆ ಈ ಹಿಂದು ಸಂಘಟನೆಯಿಂದ ಕೋಟಿ ಕೋಟಿ ಹಣ ವ್ಯಯ

First Published Jul 1, 2018, 8:12 AM IST
Highlights

ಹಿಂದು ವಿರೋಧಿ ನೀತಿಯನ್ನು ಪ್ರತಿಪಾದಿಸುವ ಹಾಗೂ ಬಲಪಂಥೀಯ ವಿಚಾರಧಾರೆ ವಿರೋಧಿಸುವ ವ್ಯಕ್ತಿಗಳನ್ನು ಮಟ್ಟಹಾಕಲು ಹಿಂದು ಸಂಘಟನೆಯೊಂದು ಕೋಟ್ಯಂತರ ರುಪಾಯಿ ಹಣ ಪೂರೈಕೆ ಮಾಡುತ್ತಿದೆ!

ಎನ್‌. ಲಕ್ಷ್ಮಣ್‌

ಬೆಂಗಳೂರು :  ಹಿಂದು ವಿರೋಧಿ ನೀತಿಯನ್ನು ಪ್ರತಿಪಾದಿಸುವ ಹಾಗೂ ಬಲಪಂಥೀಯ ವಿಚಾರಧಾರೆ ವಿರೋಧಿಸುವ ವ್ಯಕ್ತಿಗಳನ್ನು ಮಟ್ಟಹಾಕಲು ಹಿಂದು ಸಂಘಟನೆಯೊಂದು ಕೋಟ್ಯಂತರ ರುಪಾಯಿ ಹಣ ಪೂರೈಕೆ ಮಾಡುತ್ತಿದೆ!

ಇಂತಹದೊಂದು ಆಘಾತಕಾರಿ ವಿಷಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪುಣೆಯ ಅಮೋಲ್‌ ಕಾಳೆ ಅಲಿಯಾಸ್‌ ದಾದಾ ಸಾಹೇಬ್‌ ಬಳಿ ಸಿಕ್ಕಿರುವ ಡೈರಿಯಲ್ಲಿ ದಾಖಲಾಗಿರುವ ಹಣ ವ್ಯವಹಾರದ ಮಾಹಿತಿಯಿಂದ ಸ್ಪಷ್ಟವಾಗಿದೆ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ವಿಶ್ವಾಸಾರ್ಹ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಹಿಂದು ವಿರೋಧಿಗಳನ್ನು ಮಟ್ಟಹಾಕುವ ಉದ್ದೇಶಕ್ಕಾಗಿಯೇ ದೇಶಾದ್ಯಂತ ಕಟಿಬದ್ಧರಾಗಿ ಕೆಲಸ ಮಾಡಲು ಸ್ಲೀಪಿಂಗ್‌ ಸೆಲ್‌ ಮಾದರಿಯಲ್ಲಿ ನೂರಾರು ಮಂದಿ ಯುವಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಯುವಕರಿಗೆ ಮಾಸಿಕ ವೇತನದ ಮಾದರಿಯಲ್ಲಿ ಹಣ ತಲುಪಿಸಲಾಗುತ್ತಿದೆ. ಹೀಗೆ ತಲುಪಿಸಲಾಗುತ್ತಿರುವ ಹಣದ ಮೂಲ ಪ್ರಖ್ಯಾತ ಹಿಂದು ಸಂಘಟನೆಯಲ್ಲಿದೆ. ಈ ಸಂಘಟನೆ ತನ್ನ ಆದಾಯದಿಂದಲೇ ಪ್ರತಿ ತಿಂಗಳು ಕೋಟ್ಯಂತರ ರುಪಾಯಿಯನ್ನು ಈ ಕಾರ್ಯಕ್ಕಾಗಿ ವ್ಯಯಿಸುತ್ತಿದೆ ಎಂದು ತಿಳಿದುಬಂದಿದೆ.

ಕುತೂಹಲಕಾರಿ ಸಂಗತಿಯೆಂದರೆ, ಈ ಸಂಘಟನೆಯಿಂದ ಪ್ರತಿ ತಿಂಗಳು ವೇತನದ ರೀತಿ ಹಣ ಪಡೆಯುತ್ತಿರುವ ಈ ಯುವಕರು ಸಂಘಟನೆಯ ಕಾರ್ಯಕರ್ತರಲ್ಲ. ಸಂಘಟನೆಗೂ ಈ ಯುವಕರಿಗೂ ಯಾವುದೇ ಸಂಬಂಧವಿಲ್ಲ. ಈ ಯುವಕರು ಸ್ಲೀಪಿಂಗ್‌ ಸೆಲ್‌ ಮಾದರಿಯಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಾರೆ. ಈ ಕಾರ್ಯ ನಿರ್ವಹಿಸಲು ಅವರಿಗೆ ಬೇಕಾದ ತರಬೇತಿ ಹಾಗೂ ಹಣಕಾಸಿನ ನೆರವನ್ನು ಈ ಸಂಸ್ಥೆ ಪೂರೈಸುತ್ತದೆ. ಆದರೆ, ಯಾವುದನ್ನೂ ಅಧಿಕೃತವಾಗಿ ಮಾಡುವುದಿಲ್ಲ. ಬದಲಾಗಿ ಪ್ರತಿಯೊಂದು ವ್ಯವಹಾರವನ್ನು ನಗದು ರೂಪದಲ್ಲಿ ಸಂಘಟನೆಯಿಂದ ಹೊರಗಿನ ವ್ಯಕ್ತಿಗಳ ಮೂಲಕ ನಿರ್ವಹಿಸುತ್ತದೆ ಎಂದು ಗೊತ್ತಾಗಿದೆ.

ರಾಜ್ಯದಲ್ಲಿ ನಡೆದ ಗೌರಿ ಲಂಕೇಶ್‌ ಅವರ ಹತ್ಯೆಗೆ ಸಂಚು ರೂಪಿಸುವುದಕ್ಕೂ ಏಳೆಂಟು ತಿಂಗಳು ಮುನ್ನ ಪ್ರತಿ ತಿಂಗಳು ಎರಡರಿಂದ ಮೂರು ಲಕ್ಷದಂತೆ ಒಟ್ಟಾರೆ ಅಂದಾಜು .30 ಲಕ್ಷ ರು.ನಷ್ಟುಹಣ ವ್ಯಯಿಸಲಾಗಿದೆ. ಹತ್ಯೆ ಬಳಿಕ ಕೂಡ ಇದೇ ರೀತಿ ಪ್ರತಿ ತಿಂಗಳು ಆಗಂತುಕರಿಗೆ ಹಣ ಪೂರೈಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ 12 ಮಂದಿಗೆ ಹಣ:

ಅಮೋಲ್‌ ಕಾಳೆ ಬಳಿ ಪತ್ತೆಯಾಗಿರುವ ಡೈರಿಯಲ್ಲಿ ಯಾರಿಗೆ ಎಷ್ಟೆಷ್ಟುಹಣ ನೀಡಲಾಗಿದೆ ಎಂಬುದನ್ನು ಉಲ್ಲೇಖಿಸಲಾಗಿದೆ. ಹೆಸರುಗಳನ್ನು ಕೋಡ್‌ವರ್ಡ್‌ (ವಸ್ತುವಿನ ಹೆಸರು) ಬಳಸಿ ಬರೆಯಲಾಗಿದೆ. ಈ ಪೈಕಿ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಶಿಕಾರಿಪುರದ ಕಪ್ಪನಹಳ್ಳಿಯ ಸುಜೀತ್‌ ಕುಮಾರ್‌ ಅಲಿಯಾಸ್‌ ಪ್ರವೀಣ್‌, ವಿಯಜಪುರದ ದುಂಡಪ್ಪ ಯಡನೆ ಅಲಿಯಾಸ್‌ ಮನೋಹರ್‌, ಕೆ.ಟಿ.ನವೀನ್‌ ಕುಮಾರ್‌ ಸೇರಿದಂತೆ 12 ಮಂದಿಗೆ ಹಣ ನೀಡಲಾಗಿರುವ ಬಗ್ಗೆ ಉಲ್ಲೇಖಿಸಲಾಗಿದೆ.

ಹೀಗೆ ಮಹಾರಾಷ್ಟ್ರದ ಪುಣೆಯಲ್ಲಿನ ನೂರು ಮಂದಿಗೆ ಹಣ ಪೂರೈಕೆ ಮಾಡಿರುವ ಹಾಗೂ ಮಾಡುತ್ತಿರುವ ಬಗ್ಗೆ ಡೈರಿಯಲ್ಲಿ ಉಲ್ಲೇಖಿಸಲಾಗಿದೆ. 2013ರಿಂದ ನಿರಂತರವಾಗಿ ಐದು ವರ್ಷ ಕೋಟಿಗಟ್ಟಲೇ ಹಣ ಪೂರೈಕೆಯಾಗಿದೆ. 2013ರ ಆ.20ರಂದು ನರೇಂದ್ರ ದಾಭೋಲ್ಕರ್‌ ಹಾಗೂ 2015ರ ಫೆಬ್ರವರಿ ತಿಂಗಳಲ್ಲಿ ನಡೆದ ಗೋವಿಂದ ಪಾನ್ಸರೆ ಹತ್ಯೆ ಹಾಗೂ ಗೌರಿ ಲಂಕೇಶ್‌ ಹತ್ಯೆಗೆ ಬರೋಬ್ಬರಿ .1.44 ಕೋಟಿ ಹಣ ಬಳಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಅದನ್ನು ಹೊರತುಪಡಿಸಿ ಕೇವಲ ಯುವಕರನ್ನು ಸಜ್ಜುಗೊಳಿಸಲೆಂದೇ ಸುಮಾರು ಮೂರರಿಂದ ನಾಲ್ಕು ಕೋಟಿ ಹಣ ಪೂರೈಕೆಯಾಗಿರುವ ಶಂಕೆ ಇದೆ. ಇದರಲ್ಲಿ ನಾಲ್ವರು ವಿಚಾರವಾದಿಗಳ ಹತ್ಯೆಗೆ ಪೂರೈಸಿರುವ ಹಣವನ್ನು ಡೈರಿಯಲ್ಲಿ ಬರೆಯಲಾಗಿದೆ. ಹೀಗೆ ದೇಶದ ಉದ್ದಗಲಕ್ಕೂ ಚಾಚಿರುವ ಸಂಘಟನೆಯಿಂದ ಯುವಕರಿಗೆ ಹಣ ಪೂರೈಕೆಯಾಗಿದೆ ಎಂದು ವಿಶೇಷ ತನಿಖಾ ತಂಡದ ಮೂಲಗಳು ಮಾಹಿತಿ ನೀಡಿವೆ.

ಈ ಹಿನ್ನೆಲೆಯಲ್ಲಿ ಸದರಿ ಸಂಘಟನೆಯ ಎಲ್ಲಾ ಹಣಕಾಸಿನ ವ್ಯವಹಾರಗಳ ಮೇಲೆ ವಿಶೇಷ ತನಿಖಾ ತಂಡ ಗಮನವಿಟ್ಟಿದೆ. ಜತೆಗೆ, ಆರೋಪಿಗಳಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಪ್ರಯತ್ನವನ್ನು ಮಾಡುತ್ತಿದೆ. ಮೂಲಗಳ ಪ್ರಕಾರ ಸಂಘಟನೆಗೂ ಹಣಕಾಸು ಪೂರೈಕೆಗೂ ಇರುವ ಕೊಂಡಿಯ ಮಾಹಿತಿ ಈಗಾಗಲೇ ತನಿಖಾ ತಂಡಕ್ಕೆ ದೊರಕಿದ್ದು, ಅದಕ್ಕೆ ಪೂರಕ ದಾಖಲೆಗಳಿಗೆ ತನಿಖೆ ಮುಂದುವರೆಸಿದೆ.

ಯಾವುದಕ್ಕೆ ಹಣ ಬಳಕೆ?

ಹಿಂದುಪರ ಸಂಘಟನೆಯ ಯುವಕರಿಗೆ ತರಬೇತಿ ನೀಡಿದ ಬಳಿಕ ಸಜ್ಜುಗೊಳಿಸಲು ಹಣ ಪೂರೈಸಲಾಗುತ್ತದೆ. ಬಲಪಂಥೀಯ ವಿಚಾರಧಾರೆ ವಿರೋಧಿಸುವವರನ್ನು ಹತ್ತಿಕ್ಕಲು ಅವರ ಹತ್ಯೆಗೆ ಸಂಚು ರೂಪಿಸುವ ಹಂತಕರಿಗೆ ಊಟ, ಪ್ರಯಾಣ, ವಸತಿ, ಶಸ್ತ್ರ ಖರೀದಿ ಹೀಗೆ ಪ್ರತಿ ತಿಂಗಳು ಎಲ್ಲಾ ರೀತಿಯ ವೆಚ್ಚಕ್ಕಾಗಿ ಹಣ ಪೂರೈಸಲಾಗುತ್ತಿದೆ. ಕೆಲಸ ಮುಗಿದ ಬಳಿಕವೂ ವೇತನದ ಮಾದರಿಯಲ್ಲಿ ಹಣ ಪೂರೈಕೆಯಾಗುತ್ತಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಕವರ್‌ನಲ್ಲಿ ಇಟ್ಟು ಪಾವತಿ

ಆರೋಪಿ ಅಮಿತ್‌ನನ್ನು ದಾವಣಗೆರೆಯಲ್ಲಿ ಬಂಧಿಸಿದ ವೇಳೆ ಆತನ ಬ್ಯಾಗ್‌ನಲ್ಲಿದ್ದ .1.9 ಲಕ್ಷ ಹಣ ಜಪ್ತಿ ಮಾಡಲಾಗಿದೆ. ಇಷ್ಟುಮೊತ್ತದ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಆರೋಪಿ ಬಾಯ್ಬಿಟ್ಟಿಲ್ಲ. .1.9 ಲಕ್ಷ ಹಣವನ್ನು ಐದು ಸಾವಿರ ಹಾಗೂ ಹತ್ತು ಸಾವಿರದಂತೆ ಪ್ರತ್ಯೇಕಿಸಿ ಕವರ್‌ನಲ್ಲಿ ಇಡಲಾಗಿತ್ತು. ಇದೇ ರೀತಿ ಕವರ್‌ನಲ್ಲಿ ಇಟ್ಟು ಕೃತ್ಯಕ್ಕೆ ಸಹಕರಿಸುವ ಯುವಕರಿಗೆ ಹಣ ಪೂರೈಸುತ್ತಾರೆ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

click me!