ನ್ಯಾಯ ಕೋರಿ ಆತ್ಮಹತ್ಯೆ ಮಾಡಿಕೊಂಡಿದ್ದ ಡಿವೈಎಸ್'ಪಿ ಗಣಪತಿಯವರ ಪುತ್ರ ನಿಹಾಲ್'ನಿಂದ ದಾಂಧಲೆ

By Suvarna Web DeskFirst Published Dec 4, 2016, 9:13 AM IST
Highlights

ಬಸ್ಸು ಪಡುಬಿದ್ರಿ ತಲುಪುತ್ತಿದ್ದಂತೆ ಯುವಕರು ಬಸ್ಸಿನ ಮುಂದೋಗಿ ತಡೆದು ನಿಲ್ಲಿಸುತ್ತಾರೆ. ಬಳಿಕ ಚಾಲಕನನ್ನು ಹಿಡಿದು ಬಟ್ಟೆ ಹರಿದು ಹಲ್ಲೆ ಮಾಡುತ್ತಾರೆ. ಅದನ್ನು ತಡೆಯಲು ಹೋದ ಸಹಚಾಲಕ ಹಾಗೂ ನಿರ್ವಾಹಕನ ಮೇಲೂ ಇವರು ಹಲ್ಲೆ ನಡೆಸುತ್ತಾರೆ.

ಉಡುಪಿ(ಡಿ. 04): ದ್ವಿಚಕ್ರ ವಾಹನಗಳಲ್ಲಿ ಬೆನ್ನಟ್ಟಿ ಬಂದ ಯುವಕರ ತಂಡವೊಂದು ಸರ್ಕಾರಿ ರಾಜಹಂಸ ಬಸ್ಸನ್ನು ಪಡುಬಿದ್ರಿಯ ಭವ್ಯ ಪೆಟ್ರೋಲ್ ಬಂಕ್ ಬಳಿ ತಡೆದು ನಿಲ್ಲಿಸಿ, ಚಾಲಕನಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಕೊಡಗಿನ ಗಣಪತಿ ಅವರ ಪುತ್ರ ನೇಹಾಲ್ ಗಣಪತಿ ಕೂಡಾ ಹಲ್ಲೆ ನಡೆಸಿದ್ದ ಗ್ಯಾಂಗ್'ನಲ್ಲಿ ಸೇರಿದ್ದ ಅನ್ನುವ ಸಂಗತಿ ಬೆಳಕಿಗೆ ಬಂದಿದೆ. ಗಲಾಟೆ ತಡೆಯಲು ಬಂದ ನಿರ್ವಾಹಕ, ಹೆಚ್ಚುವರಿ ಚಾಲಕನಿಗೂ ಹಲ್ಲೆ ನಡೆಸಿ ಗಾಯಗೊಳಿಸಿದ್ದ ಈ ಗ್ಯಾಂಗ್'ನ ಒಬ್ಬ ಸದಸ್ಯರನ್ನು ಪ್ರಯಾಣಿಕರೇ ಹಿಡಿದು ಪಡುಬಿದ್ರಿ ಪೊಲೀಸರಿಗೊಪ್ಪಿಸಿದ್ದಾರೆ. ಶನಿವಾರ ಬೆಂಗಳೂರಿನಿಂದ ಭಟ್ಕಳಕ್ಕೆ ಪ್ರಯಾಣಿಸುತ್ತಿದ್ದ ರಾಜಹಂಸ ಬಸ್ ಸುರತ್ಕಲ್ ಬಳಿ ಬರುತ್ತಿರುವ ವೇಳೆ ಮುಂಜಾನೆ 4:30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಡಿವೈಎಸ್ಪಿ ಗಣಪತಿ ಪುತ್ರ ಸಹಿತ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಘಟನೆಯಲ್ಲಿ ಗಾಯಗೊಂಡವರು ಚಾಲಕ ಗಿರೀಶ್, ನಿರ್ವಾಹಕ ನಾಗರಾಜ್ ಶೆಟ್ಟಿ ಹಾಗೂ ಹೆಚ್ಚುವರಿ ಚಾಲಕ ಜತ್ತಪ್ಪ. ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ನಿಹಾಲ್ ಗಣಪತಿ, ಕೌಶಿಕ್, ಜೋವಿಯಲ್, ಚಿಂತನ್ ಹಾಗೂ ಹಿತೇಶ್ ಇವರು ಹದಿನೆಂಟು ಹತ್ತೊಂಭತ್ತು ವಯಸ್ಸಿನ ಆಸುಪಾಸಿನವರಾಗಿದ್ದು ಮಂಗಳೂರಿನ ಖಾಸಗಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

ಘಟನೆ ಏನು?
ಸುರತ್ಕಲ್ ಬಳಿ ಯುವಕರ ತಂಡವು ದ್ವಿಚಕ್ರ ವಾಹನಗಳಲ್ಲಿ ಜಾಲಿ ರೈಡ್ ಮಾಡಿಕೊಂಡು ಹೋಗುತ್ತಿತ್ತು. ಹಿಂದೆ ಬರುತ್ತಿದ್ದ ರಾಜಹಂಸ ಬಸ್'ನ ಚಾಲಕ ದಾರಿಗಾಗಿ ಹಾರ್ನ್ ಮಾಡುತ್ತಾರೆ. ಆದರೆ, ಯುವಕರು ಕಿವಿಗೊಡದೇ ಅಡ್ಡಾದಿಡ್ಡಿ ಚಾಲನೆ ಮಾಡುತ್ತಿರುತ್ತಾರೆ. ಸ್ವಲ್ಪ ದೂರ ಹೋದ ಮೇಲೆ ಬಸ್ಸು ಹೇಗೋ ದಾರಿ ಮಾಡಿಕೊಂಡು ಓವರ್'ಟೇಕ್ ಮಾಡುತ್ತದೆ. ಆದರೆ, ಬಸ್ಸು ಪಡುಬಿದ್ರಿ ತಲುಪುತ್ತಿದ್ದಂತೆ ಯುವಕರು ಬಸ್ಸಿನ ಮುಂದೋಗಿ ತಡೆದು ನಿಲ್ಲಿಸುತ್ತಾರೆ. ಬಳಿಕ ಚಾಲಕನನ್ನು ಹಿಡಿದು ಬಟ್ಟೆ ಹರಿದು ಹಲ್ಲೆ ಮಾಡುತ್ತಾರೆ. ಅದನ್ನು ತಡೆಯಲು ಹೋದ ಸಹಚಾಲಕ ಹಾಗೂ ನಿರ್ವಾಹಕನ ಮೇಲೂ ಇವರು ಹಲ್ಲೆ ನಡೆಸುತ್ತಾರೆ.

ಇಷ್ಟರಲ್ಲಿ ಬಸ್ಸಿನ ಪ್ರಯಾಣಿಕರು ಗಲಾಟೆಯ ಶಬ್ದ ಕೇಳಿ ಎಚ್ಚರಗೊಂಡು ಚಾಲಕರ ಸಹಾಯಕ್ಕೆ ಧಾವಿಸುತ್ತಾರೆ. ಹಲ್ಲೆ ಎಸಗಿದ ಗ್ಯಾಂಗ್'ನ ಯುವಕರ ಪೈಕಿ ಒಬ್ಬನನ್ನು ಹಿಡಿದು ಬಸ್ಸಿನಲ್ಲಿ ಕೂರಿಸಿಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದು ಒಪ್ಪಿಸುತ್ತಾರೆ. ಚಾಲಕ ಗಿರೀಶ್ ಹೇಳುವ ಪ್ರಕಾರ, ದಾಂಧಲೆ ನಡೆಸಿದ ಯುವಕರು ಪಾನಮತ್ತರಾಗಿದ್ದರು. ಸೋಮವಾರ ಈ ಯುವಕರನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸುವ ಸಾಧ್ಯತೆ ಇದೆ.

ವರದಿ: ಶಶಿಧರ ಮಾಸ್ತಿಬೈಲು, ಉಡುಪಿ

click me!