
ನವದೆಹಲಿ: ವಿವಾದಾತ್ಮಕ ಧಾರ್ಮಿಕ ವಿದ್ವಾಂಸ ಡಾ. ಝಾಕಿರ್ ನಾಯಕ್ ವಿರುದ್ಧ ರಾಷ್ಟ್ರೀಯ ತನಿಖಾ ದಳವು (ಎನ್’ಐಎ) ಇಂದು ಆರೋಪ ಪಟ್ಟಿ ಸಲ್ಲಿಸಿದೆ. ಡಾ. ಝಾಕಿರ್ ನಾಯಕ್ ವಿರುದ್ಧ ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರಚೋದನೆ, ಹಣಕಾಸು ನೆರವು ಹಾಗೂ ಅಕ್ರಮ ಹಣಕಾಸು ವ್ಯವಹಾರ ಆರೋಪಗಳನ್ನು ಮಾಡಲಾಗಿದೆ.
ಅಕ್ರಮ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಜಾರಿ ನಿರ್ದೇಶನಾಲಯವು (ಈಡಿ) ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ್ದ ವಿಶೇಷ ಪಿಎಂಎಲ್ಏ ನ್ಯಾಯಾಲಯವು ಈಗಾಗಲೇ ಝಾಕಿರ್ ನಾಯಕ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟನ್ನು ಜಾರಿಗೊಳಿಸಿದೆ.
ಝಾಕಿರ್ ನಾಯಕ್ ಸಂಸ್ಥೆಯ ವಿರುದ್ಧ ಹಣದ ಅಕ್ರಮ ವಹಿವಾಟು ತಡೆ ಕಾಯ್ದೆ (ಪಿಎಂಎಲ್ಏ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿರುವ ಈಡಿ, ಸಂಸ್ಥೆಗೆ ಸೇರಿದ 18 ಕೋಟಿ ಮೌಲ್ಯದ ಆಸ್ತಿಯನ್ನು ಈ ಹಿಂದೆ ಮುಟ್ಟುಗೋಲು ಹಾಕಿದೆ.
ವಿವಿಧ ಸಮುದಾಯಗಳ ನಡುವೆ ದ್ವೇಷ ಹುಟ್ಟು ಹಾಕುವ ಆರೋಪದಲ್ಲಿ ಝಾಕಿರ್ ನಾಯಕ್ ಸಂಸ್ಥೆಗೆ 5 ವರ್ಷಗಳ ಅವಧಿಗೆ ಕೇಂದ್ರ ಸರ್ಕಾರವು ನಿಷೇಧ ಹೇರಿದೆ.
ಕಳೆದ ವರ್ಷ ಜುಲೈ 1ರಂದು ಬಾಂಗ್ಲಾದೇಶದ ಢಾಕದಲ್ಲಿ ನಡೆದ ಬಾಂಬ್ ಸ್ಫೋಟ ಆರೋಪಿಯೊರ್ವ ತಾನು ಝಾಕಿರ್ ನಾಯಕ್’ನಿಂದ ಪ್ರಭಾವಿತನಾಗಿರುವುದಾಗಿ ಹೇಳಿದ್ದಾನೆಂದು ಅಲ್ಲಿನ ‘ಡೈಲಿ ಸ್ಟಾರ್’ ಪತ್ರಿಕೆ ವರದಿ ಮಾಡಿತ್ತು.
ಝಾಕಿರ್ ನಾಯಕ್ ಮೇಲೆ ಈಗಾಗಲೇ ಕೆನಡಾ ಹಾಗೂ ಇಂಗ್ಲಂಡ್ ನಿಷೇಧ ಹೇರಿವೆ. ಮಲೇಶಿಯಾದಲ್ಲೂ ಝಾಕಿರ್ ನಾಯಕ್’ಗೆ ನಿರ್ಬಂಧವಿದೆ. ಝಾಕಿರ್ ನಾಯ್ಕ್ ಸೌದಿ ಅರೇಬಿಯಾ ಪೌರತ್ವ ಸಿಕ್ಕಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಅದು ಇನ್ನೂ ಖಚಿತವಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.