ಲವ್ ಜಿಹಾದ್‌ಗೆ ಯಾವುದೇ ಪುರಾವೆಗಳಿಲ್ಲ: ಎನ್‌ಐಎ

By Web DeskFirst Published Oct 19, 2018, 4:34 PM IST
Highlights

ಕೇರಳದ ಹಾದಿಯಾ- ಶಫೀಕ್ ಜಹಾನ್ ವಿವಾಹವು ಲವ್ ಜಿಹಾದ್ ಕುರಿತಂತೆ ದೇಶದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು. ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ತನಿಖೆ ನಡೆಸಿರುವ ಎನ್ ಐಎ, ಲವ್ ಜಿಹಾದ್‌ಗೆ ಯಾವುದೇ ಪುರಾವೆಯಿಲ್ಲವೆಂದು ಹೇಳಿದೆ. 
 

ನವದೆಹಲಿ:  ದೇಶಾದ್ಯಂತ ಭಾರೀ ಚರ್ಚೆಗೊಳಗಾಗಿದ್ದ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ತನಿಖೆ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು [ಎನ್‌ಐಎ],  ಲವ್ ಜಿಹಾದ್ ಗೆ ಯಾವುದೇ ಪುರಾವೆಗಳಿಲ್ಲವೆಂದು ಹೇಳಿದೆ. 

ಕೇರಳದಲ್ಲಿ ನಡೆದಿರುವ ಅಂತರ್ಧರ್ಮೀಯ ವಿವಾಹಗಳ ಕುರಿತು ತನಿಖೆ ನಡೆಸಿದ ಎನ್‌ಐಎಗೆ,  ಬಲವಂತವಾಗಿ ಮದುವೆಯಾಗಿರುವ ಅಥವಾ ಷಡ್ಯಂತ್ರದ ಭಾಗವಾಗಿ ಮದುವೆಯಾಗಿರುವ ಬಗ್ಗೆ ಯಾವುದೇ ಪುರಾವೆ ಸಿಕ್ಕಿಲ್ಲ. 

ಈ ಪ್ರಕರಣವನ್ನು ಮುಚ್ಚಿರುವ  ಎನ್‌ಐಎ, ಸುಪ್ರೀಂ ಕೋರ್ಟಿನಲ್ಲಿ ಇನ್ನಾವುದೇ ವರದಿ ಸಲ್ಲಿಸುವುದಿಲ್ಲ ಎಂದು ಅಧಿಕಾರಿಯೊಬ್ಬರು  ಹೇಳಿದ್ದಾರೆಂದು ಆಂಗ್ಲ ದೈನಿಕ ಹಿಂದೂಸ್ತಾನ್ ಟೖಮ್ಸ್  ವರದಿ ಮಾಡಿದೆ.

ಬಾಲ್ಯ ವಿವಾಹದಿಂದ ಲವ್ ಜಿಹಾದ್ ತಡೆಯಲು ಸಾಧ್ಯ : ಬಿಜೆಪಿ ಮುಖಂಡ

ಸುಪ್ರೀಂ ಕೋರ್ಟ್ ಸೂಚನೆಯಂತೆ ತನಿಖಾ ಸಂಸ್ಥೆಯು, ದೂರು ದಾಖಲಾಗಿರುವ 89 ಪ್ರಕರಣಗಳ ಪೈಕಿ 11 ಸಂಶಯಾಸ್ಪದ ವಿವಾಹಗಳ ತನಿಖೆಯನ್ನು ನಡೆಸಿದೆ. 

ಕಳೆದ ವರ್ಷ ಕೇರಳದಲ್ಲಿ ನಡೆದ ಮುಸ್ಲಿಂ ಯುವಕ- ಹಿಂದೂ ಯುವತಿ ಮದುವೆ ಪ್ರಕರಣವು ಲವ್ ಜಿಹಾದ್ ರೂಪ ಪಡೆದುಕೊಂಡಿದ್ದು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.  

ಏನಿದು ಪ್ರಕರಣ: 

ಹೋಮಿಯೋಪಥಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಹಿಂದೂ ಹುಡುಗಿ ಹಾದಿಯಾ , ಶಫೀನ್ ಜಹಾನ್ ಎಂಬಾತನ್ನು ಪ್ರೀತಿಸಿ, ಇಸ್ಲಾಮ್'ಗೆ ಮತಾಂತರಗೊಂಡು ಮದುವೆಯಾಗಿದ್ದಳು.   ಹಾದಿಯಾಳ ಪೋಷಕರು ಇದೊಂದು ಲವ್ ಜಿಹಾದ್ ಕೇಸ್ ಎಂದು ಆರೋಪಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ಕೋರ್ಟ್ ಹಾದಿಯಾಳ ವಿವಾಹವನ್ನು ಅಮಾನ್ಯಗೊಳಿಸಿ ಆಕೆಯ ಪೋಷಕರ ಸುಪರ್ದಿಗೆ ಒಪ್ಪಿಸಿತ್ತು.   

‘ನಾನು ಮುಸ್ಲಿಂ, ನಾನು ಬಲವಂತದ ಮತಾಂತರ ಅಗಿಲ್ಲ: ಹಾದಿಯಾ

ಕೇರಳ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹಾದಿಯಾ ಪತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ  ಮತ್ತು ನ್ಯಾ.ಎ.ಎಂ ಖಾನ್ವಿಲ್ಕರ್  ಹಾಗೂ ನ್ಯಾ. ಡಿ.ವೈ. ಚಂದ್ರಚೂಡ್  ನ್ಯಾಯಪೀಠವು ಮದುವೆಯನ್ನು ಊರ್ಜಿತಗೊಳಿಸಿತ್ತು.  ಈ ನಡುವೆ ಎನ್‌ಐಎ ಕೂಡಾ ಲವ್ ಜಿಹಾದ್ ಕುರಿತು ತನಿಖೆ ನಡೆಸಿತ್ತು.

click me!