
ಬೆಂಗಳೂರು(ಮೇ 15): ಎಂಟು ತಿಂಗಳ ಹಿಂದೆ ಶಿವಾಜಿನಗರದಲ್ಲಿ ಸಂಭವಿಸಿದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಇನ್ನಷ್ಟು ಮಹತ್ವದ ವಿಚಾರಗಳು ಬಯಲಿಗೆ ಬಂದಿವೆ. ಇದೊಂದು ಮಾಮೂಲಿಯ ಕೊಲೆ ಪ್ರಕರಣವಲ್ಲ, ಭಯೋತ್ಪದನಾ ಕೃತ್ಯ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್'ಐಎ ತನ್ನ ಚಾರ್ಜ್'ಶೀಟ್'ನಲ್ಲಿ ಹೇಳಿದೆ. ಎಲ್ಲಾ ಆರು ಆರೋಪಿಗಳೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಪಿಐ) ಸಂಘಟನೆಗೆ ಸೇರಿದವರೆನ್ನಲಾಗಿದೆ. ಉಗ್ರಗಾಮಿ ಸಂಘಟನೆಯಾದ ಅಲ್ ಉಮ್ಮಾ ಜೊತೆ ಈ ಎಲ್ಲಾ ಉಗ್ರರು ಸಂಪರ್ಕದಲ್ಲಿದ್ದರು. ಪ್ರಮುಖ ಆರೋಪಿ ಅಸಿಮುಲ್ಲಾ ಷರೀಫ್, ಪಿಪಿಎಫ್'ನ ಬೆಂಗಳೂರು ಜಿಲ್ಲಾಧ್ಯಕ್ಷನಾಗಿದ್ದಾನೆ.
ರುದ್ರೇಶ್ ಹತ್ಯೆಗೆ ಕಾರಣ?
ಎನ್'ಐಎ ತನಿಖೆಯಲ್ಲಿ ಹಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ. ಆರೋಪಿಗಳಿಗೂ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್'ಗೂ ಯಾವುದೇ ವೈಯಕ್ತಿಕ ಧ್ವೇಷವಿರಲಿಲ್ಲ. ಶಿವಾಜಿನಗರದಲ್ಲಿ ರುದ್ರೇಶ್ ಆರೆಸ್ಸೆಸ್ ಕಾರ್ಯಗಳಲ್ಲಿ ಬಹಳ ಸಕ್ರಿಯರಾಗಿದ್ದರು. ಏರಿಯಾದ ಹಲವು ಮುಸ್ಲಿಮರನ್ನು ತಮ್ಮ ಸಂಘಟನೆಯ ಮುಸ್ಲಿಂ ವಿಭಾಗಕ್ಕೆ ಸೇರಿಸುವ ಕಾರ್ಯದಲ್ಲಿ ಅವರು ಯಶಸ್ವಿಯಾಗಿ ತೊಡಗಿಸಿಕೊಂಡಿದ್ದರು. ಅಲ್ಲದೇ, ಶಿವಾಜಿನಗರದಲ್ಲಿ ಗಣೇಶ ಹಬ್ಬವನ್ನು ಬಹಳ ವೈಭವವಾಗಿ ಆಚರಿಸುವ ಹಿಂದೆ ರುದ್ರೇಶ್ ಪಾತ್ರ ಬಹಳ ಮಹತ್ವದ್ದಾಗಿತ್ತು. ಈತನನ್ನು ಹೀಗೇ ಬೆಳೆಯಲು ಬಿಟ್ಟರೆ ಮುಂದೆ ಕಷ್ಟಕರ ಪರಿಸ್ಥಿತಿ ಬರಬಹುದೆಂದು ಆರೋಪಿಗಳು ಭಾವಿಸಿದ್ದರು. ಹೀಗಾಗಿ, ರುದ್ರೇಶ್ ಹಾಗೂ ಮತ್ತೊಬ್ಬ ಆರೆಸ್ಸೆಸ್ ಕಾರ್ಯಕರ್ತನನ್ನು ಕೊಲ್ಲಲು ಪ್ಲಾನ್ ಮಾಡಲಾಗಿತ್ತು. ಆದರೆ, ಅಂದು ಮತ್ತೊಬ್ಬ ಆರೆಸ್ಸೆಸ್ ಕಾರ್ಯಕರ್ತ ಕಣ್ಣಿಗೆ ಬೀಳಲಿಲ್ಲ. ಇಲ್ಲವಾಗಿದ್ದರೆ ಇಬ್ಬರ ಹೆಣ ಉರುಳುತ್ತಿತ್ತು.
ಅಂದು ಕೊಲೆಯಾಗಿದ್ದು ಹೇಗೆ?
2016ರ ಅಕ್ಟೋಬರ್ 16ರಂದು ಆರೆಸ್ಸೆಸ್'ನ ಪಥಸಂಚಲನ ಏರ್ಪಡಿಸಲಾಗಿತ್ತು. ರುದ್ರೇಶ್ ಕೂಡ ಸಂಚಲನದಲ್ಲಿ ಪಾಲ್ಗೊಂಡು ಮನೆಗೆ ವಾಪಸ್ಸಾಗಿದ್ದರು. ಸ್ನೇಹಿತರು ಫೋನ್ ಮಾಡಿದರೆಂದು ಮನೆಯಿಂದ ಮತ್ತೊಮ್ಮೆ ತಮ್ಮ ಟಿವಿಎಸ್ ಜುಪಿಟರ್ ಬೈಕಿನಲ್ಲಿ ಕಾಮರಾಜ್ ರಸ್ತೆಗೆ ಬಂದು ಸ್ನೇಹಿತರೊಂದಿಗೆ ಮಾತನಾಡುತ್ತಾ ನಿಂತಿದ್ದರು. ಆಗ ಪಲ್ಸರ್ ಬೈಕ್'ನಲ್ಲಿ ಇಬ್ಬರು ಆರೋಪಿಗಳು ಬರುತ್ತಾರೆ. ಎಳನೀರು ಕತ್ತರಿಸುವ ಮಚ್ಚನ್ನು ಅವರು ಅಡಗಿಸಿಟ್ಟುಕೊಂಡಿರುತ್ತಾರೆ. ನೋಡನೋಡುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ರುದ್ರೇಶ್ ಹೆಣ ಬೀಳಿಸಿ ಹೋಗುತ್ತಾರೆ.
ರುದ್ರೇಶ್ ಹತ್ಯೆಗೆ ಸಾಕಷ್ಟು ಮುಂಚಿತವಾಗಿಯೇ ಪ್ಲಾನ್ ನಡೆದಿರುತ್ತದೆ. ಹಲವು ಬಾರಿ ವಿವಿಧ ಸ್ಥಳಗಳಲ್ಲಿ ಆರೋಪಿಗಳು ಸೇರಿ ಚರ್ಚೆ ನಡೆಸಿರುತ್ತಾರೆ. ಆದರೆ, ಆರೆಸ್ಸೆಸ್ ಪಥ ಸಂಚಲನದಲ್ಲಿ ರುದ್ರೇಶ್ ಭಾಗಿಯಾಗಿರುವ ವಿಚಾರವು ಮೆಕ್ಯಾನಿಕ್ ಮೊಹಮ್ಮದ್ ಸಾದಿಕ್'ಗೆ ಗೊತ್ತಿರುತ್ತದೆ. ರುದ್ರೇಶ್ ಮನೆಯ ಬಳಿಯೇ ಸಾದಿಕ್'ನ ಗ್ಯಾರೇಜ್ ಇರುತ್ತದೆ. ಅಂದು ಅ.16ರಂದು ಹತ್ಯೆ ದಿನ ಆರು ಆರೋಪಿಗಳು ನಡೆಸಿದ ಸಂಚಿನ ಪ್ರಕಾರ ಸಾದಿಕ್ ಚಲಾಯಿಸುವುದು, ವಸೀಂ ಹಿಂಬದಿ ಕೂರುವುದು; ಇನ್ನಿಬ್ಬರು ಬೇರೊಂದು ಬೈಕ್'ನಲ್ಲಿ ಹಿಂಬಾಲಿಸುವುದು ಎಂದು ಪ್ಲಾನ್ ಮಾಡಲಾಯಿತು. ಕಮರ್ಷಿಯಲ್ ಸ್ಟ್ರೀಟ್'ನಲ್ಲಿ ಮಂಕಿ ಕ್ಯಾಪ್ ಹಾಗೂ ಮಚ್ಚು ಇಟ್ಟುಕೊಳ್ಳಲು ಬ್ಯಾಗ್ ಖರೀದಿಸುತ್ತಾರೆ.
ಸಾದಿಕ್ ಕೊನೆಯ ಕ್ಷಣದಲ್ಲಿ ಈ ಕೃತ್ಯದಲ್ಲಿ ಭಾಗಿಯಾಗಲು ಸಾದಿಕ್ ಹಿಂಜರಿಯುತ್ತಾನಾದರೂ ಕೊನೆಯ ಸಮ್ಮತಿಸುತ್ತಾನೆ. ಪಲ್ಸರ್ ಬೈಕಿನ ಗುರುತು ಸಿಗಬಾರದೆಂದು ನೇಮ್'ಪ್ಲೇಟನ್ನು ಬದಲಾಯಿಸಿರುತ್ತಾರೆ. ಮೆಡಿಕಲ್ ಸ್ಟೋರ್ ಮುಂದೆ ಮೂವರು ಸ್ನೇಹಿತರೊಂದಿಗೆ ರುದ್ರೇಶ್ ನಿಂತಿದ್ದ ಜಾಗ ಹತ್ತಿರ ಬರುತ್ತಿದ್ದಂತೆಯೇ ಸಾದಿಕ್ ಬೈಕನ್ನು ಸ್ವಲ್ಪ ನಿಧಾನಿಸುತ್ತಾನೆ. ಹಿಂದೆ ಕೂತಿದ್ದ ವಾಸೀಮ್ ತನ್ನ ಮಚ್ಚಿನಿಂದ ರುದ್ರೇಶ್ ಕುತ್ತಿಗೆ ಕತ್ತರಿಸುತ್ತಾನೆ. ನಂತರ ಎರಡೂ ಬೈಕ್'ಗಳಲ್ಲಿ ಆರೋಪಿಗಳು ಪರಾರಿಯಾಗುತ್ತಾರೆ. ಹತ್ಯೆ ಬಳಿಕ, ಬರ್ಕತ್ ಅಲಿ ಎಂಬಾತ ತನ್ನ ಮೊಬೈಲ್'ನಿಂದ "ಆಪರೇಷನ್ ಸಕ್ಸಸ್" ಎಂದು ಪ್ರಮುಖ ಆರೋಪಿ ಇರ್ಫಾನ್ ಪಾಷಾಗೆ ಮೆಸೇಜ್ ಕಳುಹಿಸುತ್ತಾನೆ.
2047ರಷ್ಟರಲ್ಲಿ ಭಾರತ ಮುಸ್ಲಿಂ ರಾಷ್ಟ್ರ:
ರುದ್ರೇಶ್ ಹತ್ಯೆಯು ದೊಡ್ಡ ಮಾಸ್ಟರ್'ಪ್ಲಾನ್'ನ ಒಂದು ಭಾಗ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸದಸ್ಯರು ಅಲ್-ಉಮ್ಮಾ, ಎಸ್'ಡಿಪಿಐ ಮೊದಲಾದ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿರುತ್ತಾರೆ. ರುದ್ರೇಶ್ ಹತ್ಯೆಗೂ 10 ತಿಂಗಳ ಮೊದಲು ರುದ್ರೇಶ್ ಹಂತಕರ ಜೊತೆ ಎಸ್'ಡಿಪಿಐ ಮುಖಂಡ ಸಭೆ ನಡೆಸಿರುತ್ತಾನೆ. ಉತ್ತರಪ್ರದೇಶದ ಕೋಮುಗಲಭೆ ದೃಶ್ಯಗಳನ್ನು ಸಭೆಯಲ್ಲಿ ತೋರಿಸಿರುತ್ತಾನೆ. ಕಾಫಿರನನ್ನು ಹತ್ಯೆ ಮಾಡಿ ಅಲ್ಲಾಹುವಿನ ಕೃಪೆಗೆ ಪಾತ್ರರಾಗಬೇಕೆಂದು ಉಪದೇಶ ಮಾಡುತ್ತಾನೆ. ಇಸ್ಲಾಂ ರಾಷ್ಟ್ರಕ್ಕೆ ಕಂಟಕವಾಗಿರುವ ಆರೆಸ್ಸೆಸ್, ವಿಶ್ವಹಿಂದೂ ಪರಿಷತ್, ಶ್ರೀರಾಮಸೇನೆಯ ಮಂದಿಯನ್ನು ಹತ್ಯೆಗೈಯುವುದು ಅಲ್ಲಾಹುವಿಗೆ ಮಾಡಿದ ಸೇವೆ. ಹಿಂದೂ ಮುಖಂಡರನ್ನು ಕೊಂದರೆ ಹಿಂದೂಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಎಲ್ಲ ಹಿಂದೂಗಳೂ ಮುಸ್ಲಿಮರಿಗೆ ತಲೆಬಾಗುತ್ತಾರೆ. ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುವ ತಮ್ಮ ಸಂಕಲ್ಪಕ್ಕೆ ದಾರಿ ಸುಗಮವಾಗುತ್ತದೆ ಎಂದು ಎಸ್'ಡಿಪಿಐ ಮುಖಂಡ ಪ್ರಚೋದನೆ ಕೊಟ್ಟಿರುತ್ತಾನೆ.
ಎನ್'ಐಎ ಚಾರ್ಜ್'ಶೀಟ್'ನಲ್ಲಿರುವ 6 ಆರೋಪಿಗಳ ಪರಿಚಯ:
ಆರೋಪಿ ನಂ.1
ಹೆಸರು: ಇರ್ಫಾನ್ ಪಾಷಾ
ವಯಸ್ಸು: 32
ವೃತ್ತಿ: ರಿಯಲ್ ಎಸ್ಟೇಟ್ ಏಜೆಂಟ್
--
ಅರೋಪಿ ನಂ.2
ಹೆಸರು: ವಸೀಂ ಅಹ್ಮದ್
ವಯಸ್ಸು: 32
ವೃತ್ತಿ: ಎಸಿ ಮೆಕ್ಯಾನಿಕ್
---
ಆರೋಪಿ ನಂ.3
ಹೆಸರು: ಮೊಹ್ಮದ್ ಸಾದಿಕ್
ವಯಸ್ಸು: 35
ವೃತ್ತಿ: ಬೈಕ್ ಮೆಕ್ಯಾನಿಕ್
--
ಆರೋಪಿ ನಂ.4
ಹೆಸರು: ಮೊಹ್ಮದ್ ಮುಜೀಬ್ ಉಲ್ಲಾ
ವಯಸ್ಸು: 46
ವೃತ್ತಿ: ಬೈಕ್ ಮೆಕ್ಯಾನಿಕ್
---
ಆರೋಪಿ ನಂ.5
ಹೆಸರು: ಆಸಿಮ್ ಷರೀಫ್
ವಯಸ್ಸು: 40
ವೃತ್ತಿ: ವ್ಯವಹಾರ, ಪಿಪಿಎಫ್ ಬೆಂಗಳೂರು ಜಿಲ್ಲಾಧ್ಯಕ್ಷ
---
ಆರೋಪಿ ನಂ.6 (ಇನ್ನೂ ನಾಪತ್ತೆ)
ಹೆಸರು: ಗೌಸ್ ಬಾಯ್
ವಯಸ್ಸು: 35
ವೃತ್ತಿ: ಮಾವಿನಹಣ್ಣು ಮಾರಾಟಗಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.