
ರಾಂಚಿ(ಮೇ 15): ನೂರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ನಕ್ಸಲ್ ಮುಖಂಡ ಕುಂದನ್ ಪಹಾನ್ ನಿನ್ನೆ ಪೊಲೀಸರಿಗೆ ಶರಣಾಗಿದ್ದಾರೆ. ನಕ್ಸಲ್ ಮುಖಂಡರ ಆಷಾಡಭೂತಿತನದಿಂದ ಬೇಸರಗೊಂಡು ಕುಂದನ್ ಪಹಾನ್ ಸಮಾಜದ ಮುಖ್ಯವಾಹಿನಿಗೆ ಮರಳಿದ್ದಾರೆ. ಮಾವೋವಾದಿ ಕಮ್ಯೂನಿಸ್ಟ್ ಪಕ್ಷದ ಮುಖಂಡ ಕುಂದನ್ ಪಹಾನ್ ನಿನ್ನೆ ಜಾರ್ಖಂಡ್'ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಂಜಯ್ ಲಾಥ್'ಕರ್, ಡಿಐಜಿ ಎವಿ ಹೋಮ್ಕರ್ ಮೊದಲಾದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಶರಣಾಗಿದ್ದಾರೆ. ಕುಂದನ್ ಅವರ ಕುಟುಂಬ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶರಣಾದ ನಂತರ ಮಾತನಾಡಿದ ಕುಂದನ್, ತಾನು ನಕ್ಸಲ್ ಹೋರಾಟದಲ್ಲಿ ತೊಡಗಿ ಸಮಯ ವ್ಯರ್ಥ ಮಾಡಿದೆ. ನನ್ನ ಜೀವನದ 20 ವರ್ಷಗಳು ಸುಮ್ಮನೆ ವ್ಯರ್ಥವಾದವು ಎಂದಿದ್ದಾರೆ. ನಕ್ಸಲ್ ಹಿಂಸೆ ಮೃತಪಟ್ಟವರ ಬಗ್ಗೆ ಖೇದ ವ್ಯಕ್ತಪಡಿಸಿದ ಅವರು, ಈ ದುರ್ಘಟನೆಗಳಿಗೆ ನಾನು ನೇರವಾಗಿ ಅಥವಾ ಪರೋಕ್ಷವಾಗಿ ಹೊಣೆ ಹೊರುತ್ತೇನೆ ಎಂದು ಹೇಳಿದ್ದಾರೆ. ನಕ್ಸಲ್ ಹೋರಾಟದ ಆಷಾಡಭೂತಿತನವನ್ನೂ ಕುಂದನ್ ಈ ಸಂದರ್ಭದಲ್ಲಿ ವಿವರಿಸಿದ್ದಾರೆ. "ನಕ್ಸಲ್ ಮುಖಂಡರ ಮಕ್ಕಳು ವಿದೇಶದಲ್ಲಿ ಓದಿಕೊಂಡು ಆರಾಮವಾಗಿದ್ದಾರೆ. ಇಲ್ಲಿ ಈ ಮುಖಂಡರು ಸುಲಿಗೆಯಲ್ಲಿ ನಿರತರಾಗಿದ್ದಾರೆ" ಎಂದು ವಿಷಾದಿಸಿದ ಕುಂದನ್, ಇನ್ಮುಂದೆ ತಾನು ಜಾರ್ಖಂಡ್'ನ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆಂದು ಭರವಸೆ ನೀಡಿದ್ದಾರೆ.
ಕುಂದನ್ ಮೇಲೆ ನೂರಕ್ಕೂ ಹೆಚ್ಚು ಕೇಸ್:
ಜಾರ್ಖಂಡ್'ನ ನಕ್ಸಲ್ ಹೋರಾಟದಲ್ಲಿ ಸೈ ಎನಿಸಿದ್ದ, ಮೋಸ್ ವಾಂಟೆಡ್ ನಕ್ಸಲ್ ಎನಿಸಿದ್ದ ಕುಂದನ್ ಪಹಾನ್ ತಲೆ ಮೇಲೆ ಪೊಲೀಸರು 15 ಲಕ್ಷ ಬಹುಮಾನ ನೀಡಲು ನಿರ್ಧರಿಸಿದ್ದರು. ಇವರ ಮೇಲೆ ಬರೋಬ್ಬರಿ 128 ಪ್ರಕರಣಗಳು ದಾಖಲಾಗಿವೆ.
ಕುಂದನ್ ವಿರುದ್ಧದ ಪ್ರಮುಖ ಪ್ರಕರಣಗಳು
* 2008ರಲ್ಲಿ ಸ್ಪೆಷಲ್ ಬ್ರ್ಯಾಂಚ್ ಇನ್ಸ್'ಪೆಕ್ಟರ್ ಫ್ರಾನ್ಸಿಸ್ ಇಂದ್ವಾರ್ ಹತ್ಯೆ
* ಐಸಿಐಸಿಐ ಬ್ಯಾಂಕ್'ನ ಕ್ಯಾಷ್ ವ್ಯಾನ್'ನಿಂದ 5 ಕೋಟಿ ರೂ ಲೂಟಿ
* 2008ರಲ್ಲಿ ರಾಂಚಿಯ ಪುಂಡಿಗಿರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಪ್ರಮೋದ್ ಕುಮಾರ್ ಹತ್ಯೆ
ಕುಂದನ್ ಹಿನ್ನೆಲೆ:
39 ವರ್ಷದ ಕುಂದನ್ ಪಹಾನ್ ಅವರು ಹುಟ್ಟಿದ್ದು ಜಾರ್ಖಂಡ್'ನ ಆದಿವಾಸಿ ಪುರೋಹಿತರ ವಂಶದಲ್ಲಿ. ಓದಿನಲ್ಲಿ ಚುರುಕಿಲ್ಲದ ಕುಂದನ್ 12ನೇ ವಯಸ್ಸಿಗೆ ತನ್ನ ಊರನ್ನು ಬಿಡುತ್ತಾರೆ. ಎಂಜಿನಿಯರ್'ವೊಬ್ಬರ ಇಲಾತಿ ಹಸುವಿವಿನ ಪಾಲನೆಯ ಕೆಲಸ ಮಾಡುವ ಅವರು 3 ವರ್ಷಗಳ ಬಳಿಕ ಊರಿಗೆ ಮರಳುತ್ತಾರೆ. ಇನ್ನೆರಡು ವರ್ಷಗಳ ನಂತರ ಮಾವೋವಾದಿ ಕಮ್ಯೂನಿಸ್ಟ್ ಪಕ್ಷವನ್ನು ಸೇರಿಕೊಂಡು ನಕ್ಸಲ್ ಹೋರಾಟಗಾರರಾಗಿ ರೂಪುಗೊಳ್ಳುತ್ತಾರೆ.
ಜಾರ್ಖಂಡ್'ನ ಮಾವೋವಾದಿ ಸಂಘಟನೆಯಲ್ಲಿ ಬಂಗಾಳಿ ಮತ್ತು ಬಿಹಾರಿಗಳ ಪ್ರಾಬಲ್ಯವೇ ಹೆಚ್ಚು. ಆದರೆ, ಕುಂದನ್ ಪಹಾನ್ ಈ ನಾಯಕತ್ವಗಳ ವಿರುದ್ಧ ಬಹಿರಂಗವಾಗಿಯೇ ಬಂಡೇಳುತ್ತಿದ್ದರೆನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.